Advertisement

ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

02:37 PM Jul 22, 2017 | |

ಶಿಕಾರಿಪುರ: ಭಾರತೀಯ ಸಂಸ್ಕೃತಿಯು ಹತ್ತು ಹಲವು ವೈವಿಧ್ಯಮಯ ಪ್ರಾಕಾರಗಳಿಂದ ಕೂಡಿದ್ದು ಇಲ್ಲಿನ ಜನರ ಉಸಿರಿನಲ್ಲಿ ಕಲೆ, ಸಂಪ್ರದಾಯ ಹಾಗೂ ಸಹೃದಯತೆಗಳು ಹಾಸು ಹೊಕ್ಕಾಗಿವೆ. ಈ ಕಲೆಗಳಿಗೆ ಜೀವ ಕೊಡಬೇಕಾದ ಅಗತ್ಯತೆ ಮನಗಂಡ ಕೇಂದ್ರ ಸಕಾರ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದೆ ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾರತ ಸಾಂಸ್ಕೃತಿಕ ನಕ್ಷೆ ಯೋಜನೆ ಅಡಿಯಲ್ಲಿ ನ್ಯಾಷನಲ್‌ ಮಿಷನ್‌ ಆನ್‌ ಕಲ್ಚರಲ್‌ ಮ್ಯಾಪಿಂಗ್‌ ಆಫ್‌ ಇಂಡಿಯಾ ಹಮ್ಮಿಕೊಂಡಿದ್ದ ಶಿಕಾರಿಪುರ ಹಾಗೂ ಸೊರಬ ತಾಲೂಕಿನ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಹೆಸರಿನಲ್ಲಿ ಸಾಂಸ್ಕೃತಿಕ ಭವನ ಕಟ್ಟಿದ್ದು ಇಂತಹ ಸಾಂಸ್ಕೃತಿಕ ಹಬ್ಬದ ಆಚರಣೆಯಿಂದ ಸಾರ್ಥಕವಾಗಿದೆ. ಕಲಾವಿದರಿಗೆ ಕೇವಲ ಮಾಸಾಶನ ನೀಡುವುದರಿಂದ ಅವರ ಕಲೆಗಳು ಅಭಿವ್ಯಕ್ತಿಗೊಳ್ಳುವುದಿಲ್ಲ. ಸಾಕಷ್ಟು ಜನರು ಮಾಸಾಸನವನ್ನು ದುರುಪಯೋಗ ಮಾಡಿಕೊಂಡು ನಿಜವಾದ ಕಲಾವಿದರಿಗೆ ಅನ್ಯಾಯವಾಗಿದೆ. ಪ್ರಾಮಾಣಿಕವಾಗಿ ಸಾಂಸ್ಕೃತಿಕ ಕ್ಷೇತ್ರವನ್ನು ಉಳಿಸಿ ಬೆಳೆಸಲು ಪ್ರಧಾನ ಮಂತ್ರಿಗಳ ಈ ಯೋಜನೆ ಅದ್ಭುತವಾಗಿದೆ ಎಂದರು.

ತಹಶೀಲ್ದಾರ್‌ ಬಿ. ಶಿವಕುಮಾರ್‌ ಮಾತನಾಡಿ, ಭಾರತೀಯ ಇತಿಹಾಸ- ಪರಂಪರೆಯಲ್ಲಿ ಕಲೆಗೆ ಬಹಳ ಮಹತ್ವವಿದೆ. ಕಲಾವಿದ ತನ್ನ ಬದುಕನ್ನು ಕಲೆಗಾಗಿ ಮುಡುಪಾಗಿ ಇಟ್ಟಿರುತ್ತಾನೆ. ಕಲಾವಿದನ ಬದುಕು ಹಸನಾದರೆ ಕಲೆ ಉಳಿಯುತ್ತದೆ ಎಂದರು.

ಡಾ| ಜಿ.ವಿ.ರಾಜಾರಾಮ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಕಲಾವಿದರಾದ ರಾಮಚಂದ್ರ ರಾವ್‌ ಕುಲಕರ್ಣಿ ಬಿಳವಾಣಿ , ಎಂ.ಎಸ್‌. ನಾಡಿಗೇರ್‌ ತೊಗರ್ಸಿ, ರಾಮಪ್ಪ ಭಜಂತ್ರಿ ದೇವಮ್ಮ ಬಿದರಗೆರೆ , ಹುಚ್ಚಪ್ಪ, ಕೊಪ್ಪಲು ಮಂಜುನಾಥ ಅವರನ್ನು ಸನ್ಮಾನಿಸಲಾಯಿತು. ವಿವಿಧ ಗ್ರಾಮಗಳಿಂದ ಜಾನಪದ ಕಲಾವಿದರು ಕಲೆಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಸಂಘಟಕರಾದ ಪಾಪಯ್ಯ, ಸತ್ಯನಾರಾಯಣ ,ಬಸವರಾಜ ಮಠದ್‌, ಮಂಜುನಾಥ ಮಠದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next