ಧಾರವಾಡ: ಬಾಲಬಳಗ ಶಾಲೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ಸೈಕಲ್ ಉತ್ಸವಕ್ಕೆ ನಗರದ ಜಿಪಂ ಕಾರ್ಯಾಲಯ ಬಳಿಯ ಪಿಡಬ್ಲೂಡಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಚಾಲನೆ ದೊರೆಯಿತು. ಉತ್ಸವಕ್ಕೆ ಚಾಲನೆ ನೀಡಿದ ಕವಿ ಡಾ|ವಿ.ಸಿ.ಐರಸಂಗ, ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರು ಜೀವಿಸುತ್ತಿದ್ದೇವೆ.
ಹೀಗಾಗಿ ಸೈಕಲ್ ಮೂಲೆ ಗುಂಪಾಗಿ ಬೈಕ್ ಹಾಗೂ ಕಾರ್ ರಸ್ತೆಗಿಳಿದಿವೆ. ಸುಡುವ ಇಂಧನದ ಪರಿಣಾಮದಿಂದ ಪರಿಸರ ಹಾಳಾಗುತ್ತಿದೆ. ಸೈಕಲ್‌ದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅರಿತು ಮುಂದಿನ ಪೀಳಿಗೆ ಸೈಕಲ್ ಪರಿಚಯಿಸುವ ಕಾರ್ಯ ಮಕ್ಕಳಿಂದ ನಡೆಯಬೇಕಿದೆ. ಇದಲ್ಲದೇ ಪರಿಸರ ಉಳಿಸುವುದಕ್ಕಾಗಿ ಎಲ್ಲ ಶಾಲಾ-ಕಾಲೇಜು ಮಕ್ಕಳು ಸೈಕಲ್ ಏರಬೇಕು.
ಈ ಮೂಲಕ ಸೈಕಲ್ ಮಹತ್ವವನ್ನು ಜನರಿಗೆ ತಿಳಿಸಬೇಕು ಎಂದರು. ಶಾಲೆಗೆ ಹೋಗುತ್ತಿರುವಾಗಿನಿಂದ ನಾನು ಸೈಕಲ್ ಹೊಡೆಯುವುದು ಆರಂಭಿಸಿದ್ದೇನೆ. ಈಗ 80 ವರ್ಷ ತುಂಬಿದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಯಾವುದೇ ಕಾಯಿಲೆಗಳಿಲ್ಲ. ಇದಕ್ಕೆ ಮುಖ್ಯ ಕಾರಣ ಸೈಕಲ್ ಬಳಕೆ.
ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಆದ್ದರಿಂದ ಸೈಕಲ್ ನನಗೆ ಮೂರನೇ ಹೆಂಡತಿ ಎಂದು ಚಟಾಕಿ ಹಾರಿಸಿದರು. ನೇತ್ರತಜ್ಞ ಡಾ| ಮಾಧವ ರಂಗ ಮಾತನಾಡಿ, ಸೈಕಲ್ 1817ರಲ್ಲಿ ಜಗತ್ತಿಗೆ ಪರಿಚಯವಾಗಿದೆ. ಇದೀಗ ಅದಕ್ಕೆ ಎರಡು ಶತಮಾನಗಳ ಇತಿಹಾಸ. ಸೈಕಲಿಂಗ್‌ನಲ್ಲಿ ಎರಡು ಬಗೆಗಳಿವೆ. ರಸ್ತೆ ಸೈಕಲಿಂಗ್ ಹಾಗೂ ಗುಡ್ಡಗಾಡು ಸೈಕಲಿಂಗ್. ಸೈಕಲ್ ಹೊಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಇಲ್ಲ.
ಬದಲಾಗಿ ರೋಗಗಳು ಮಾಯವಾಗುತ್ತವೆ. ಆದರೆ, ಬಹುತೇಕ ಜನರು ವಾಹನ ಬಳಸುತ್ತಿರುವುರಿಂದ ಸೈಕಲ್ ಮರೆಯಾಗಿದೆ ಎಂದು ವಿಷಾದಿಸಿದರು. ಬಾಲಬಳಗದ ಪ್ರಾಚಾರ್ಯ ಪ್ರತಿಭಾ ಕುಲಕರ್ಣಿ, ಆದಿತ್ಯ ಹಿರೇಮಠ, ವರ್ಷಾ ಸ್ಯಾಮಿಯಲ್ ಇದ್ದರು. ಇದೇ ವೇಳೆ ಸೈಕಲ್‌ನ ವಿವಿಧ ಹಳೆಯ ಹಾಗೂ ಹೊಸ ಮಾದರಿಗಳು ಪ್ರದರ್ಶನಗೊಂಡವು.