ಹುಬ್ಬಳ್ಳಿ: ರಿತ್ವಿಕ್ ಫೌಂಡೇಶನ್ ಹಾಗೂ ಸ್ವರತೀರ್ಥ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಶಾಸ್ತ್ರೀಯ ಸಂಗೀತ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ಸ್ವರತೀರ್ಥ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪ್ರವೀಣ ಶೇವಡಿ ಮಾತನಾಡಿ, ವಾಯವ್ಯ ಕರ್ನಾಟಕ ಭಾಗ ಶಾಸ್ತ್ರೀಯ ಸಂಗೀತಕ್ಕೆ ದೊಡ್ಡ ಕೊಡುಗೆ ನೀಡಿದೆ.
ಪಂ| ಮಲ್ಲಿಕಾರ್ಜುನ ಮನಸೂರ, ಪಂ| ಬಸವರಾಜ ರಾಜಗುರು, ಡಾ| ಗಂಗೂಬಾಯಿ ಹಾನಗಲ್ಲ, ಪಂ| ಭೀಮಸೇನ ಜೋಶಿ, ಪಂ| ಸವಾಯಿ ಗಂಧರ್ವ, ಕುಮಾರ ಗಂಧರ್ವ ಮೊದಲಾದ ಸಂಗೀತಗಾರರು ಅಗಾಧ ಸಾಧನೆ ಮಾಡಿದ್ದಾರೆ ಎಂದರು. ಗುರು-ಶಿಷ್ಯ ಪರಂಪರೆ ಮುಂದುವರಿದಿದ್ದು, ಸಣ್ಣ ಹಳ್ಳಿಗಳಲ್ಲಿ ಕೂಡ ಸಂಗೀತ ರಸಿಕರಿದ್ದಾರೆ.
ಮಕ್ಕಳಿಗೆ ಸಂಗೀತ ಕಲಿಯುವಂತೆ ಪ್ರೋತ್ಸಾಹಿಸುತ್ತಾರೆ ಎಂದರು. ಯುವ ಕಲಾವಿದರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಗೀತ ಮಹೋತ್ಸವ ನಡೆಸಲಾಗುತ್ತಿದ್ದು, ಯುವ ಗಾಯಕರು ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ವೇದಿಕೆ ಮೇಲೆ ಉದಯ ದೇಸಾಯಿ ಇದ್ದರು.
ಆರಂಭದಲ್ಲಿ ಶಿವಾನಿ ಮಿರಜಕರ ಗಾಯನ ಪ್ರಸ್ತುತಪಡಿಸಿದರು. ಅವರು ಕೇದಾರ ಹಾಗೂ ಮಧುಕಂಸ ರಾಗಗಳನ್ನು ಹಾಡಿದರು. ಮಧ್ಯ ಪ್ರದೇಶ ದೇವಾಸ್‌ನ ಭುವನೇಶ ಕೊಂಕಾಳೆ ಮಾತನಾಡಿ, ತಂತಿವಾದ್ಯದಲ್ಲಿ ಮೆಹರ್ ಹೆಸರು ಖ್ಯಾತಿ ಪಡೆದಿರುವಂತೆ ಕಂಠ ಸಂಗೀತದಲ್ಲಿ ಉ.ಕ. ಭಾಗ ಪ್ರಸಿದ್ಧಿ ಪಡೆದಿದೆ.
ನಗರಕ್ಕೆ ಭೇಟಿ ನೀಡಿದರೆ ಸ್ಫೂರ್ತಿ ಸಿಗುತ್ತದೆ ಎಂದರು. ಕೊನೆಗೆ ಕಲ್ಯಾಣ ರಾಗ ಸೇರಿದಂತೆ ಹಲವು ರಾಗಗಳನ್ನು ಪ್ರಸ್ತುತಪಡಿಸಿದರು. ಶವ ಜೋಶಿ (ತಬಲಾ), ಗುರುಪ್ರಕಾಶ ಹೆಗಡೆ (ಹಾರ್ಮೋನಿಯಂ) ಸಾಥ್ ನೀಡಿದರು.