ಧಾರವಾಡ: ಇಲ್ಲಿಯ ಅಂಬೇಡ್ಕರ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನವನಾಡು ಕನ್ನಡ ದಿನಪತ್ರಿಕೆ ಹಾಗೂ ನವನಾಡು ವೆಬ್ ಪೋರ್ಟಲ್ ರವಿವಾರ ಲೋಕಾರ್ಪಣೆಗೊಂಡಿತು.
ಇದಕ್ಕೂ ಮುನ್ನ ನಗರದ ಮುಖ್ಯ ಅಂಚೆ ಕಚೇರಿ ಹತ್ತಿರವಿರುವ ಪತ್ರಿಕೆಯ ಪ್ರಧಾನ ಕಚೇರಿಯನ್ನು ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಉದ್ಘಾಟಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಡಾ| ಪಟ್ಟಣಶೆಟ್ಟಿ ಮಾತನಾಡಿ, ಹಣ ಇದ್ದರೆ ಮಾತ್ರ ಪತ್ರಿಕೆ ಬೆಳೆಯುವುದಿಲ್ಲ. ಬದಲಾಗಿ ಒಳ್ಳೆಯ ಓದುವ ಮನಸ್ಸುಗಳಿರಬೇಕು. ನವನಾಡು ಪತ್ರಿಕೆಯನ್ನು ಓದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನವನಾಡು ಕನ್ನಡ ದಿನಪತ್ರಿಕೆ ಪ್ರಾರಂಭವಾಗಿರುವುದು ಧಾರವಾಡಕ್ಕೆ ಕಿರೀಟ ಇಟ್ಟಂತಾಗಿದೆ. ಈ ಪತ್ರಿಕೆಯಿಂದ ಧಾರವಾಡದಲ್ಲಿ ಹೊಸ ಮನ್ವಂತರ ಪ್ರಾರಂಭವಾಗಲಿದೆ ಎಂದರು.
ದಿನಪತ್ರಿಕೆ, ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಪೊರೇಟ್ ಹಾವಳಿ ಹೆಚ್ಚಾಗಿದೆ. ಪ್ರಸ್ತುತ ದಿನಗಳಲ್ಲಿ ಲಾಭ ಗಳಿಸುವುದೇ ಪತ್ರಿಕೋದ್ಯಮದ ಧ್ಯೇಯವಾಗಿದ್ದು, ಇದು ನಿಲ್ಲಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ದಿನಪತ್ರಿಕೆಗಳು ಜನರಿಗೆ ತಪ್ಪು ಕಲ್ಪನೆ ನೀಡಬಾರದು. ಪತ್ರಿಕೆ ಆರಂಭದ ದಿನಗಳು ಕಷ್ಟದಿಂದ ಕೂಡಿರುತ್ತವೆ. ನವನಾಡು ಪತ್ರಿಕೆ ತನ್ನ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವ ಮೂಲಕ ಬರುವ ದಿನಗಳಲ್ಲಿ ಉತ್ತಮ ಹೆಸರು ಮಾಡಲಿ ಎಂದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಮಾಜಿ ಮಹಾಪೌರ ಪಾಂಡುರಂಗ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಪಾಂಡುರಂಗ ಪಾಟೀಲ್ ಅವರನ್ನು ನವನಾಡು ಬಳಗದಿಂದ ಸನ್ಮಾಸಲಾಯಿತು. ಹಾನಗಲ್ ತಾಪಂ ಸದಸ್ಯ ಸಿದ್ದನಗೌಡ ಪಾಟೀಲ್, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ರಾಮನಗೌಡ ಪಾಟೀಲ, ಬಸವರಾಜ ಪುರ್ಲಿ, ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ಮಾರುತಿ ಪುರ್ಲಿ ಮಾತನಾಡಿದರು. ಪತ್ರಿಕೆ ಸಂಪಾದಕ ವೆಂಕನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸೌಮ್ಯ ಟಿ.ಎಸ್. ನಿರೂಪಿಸಿದರು. ಮೀಡಿಯಾ ಕ್ಲಬ್ ಅಧ್ಯಕ್ಷ ಮುಸ್ತಫಾ ಕುನ್ನಿಬಾವಿ ವಂದಿಸಿದರು.