ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ವತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾವ್ರಾಡಿ ಗ್ರಾಮದ ಊರ ಕೆರೆಯಾದ ಬಾಗಳ ಕೆರೆ ಹೂಳೆತ್ತಲು “ನಮ್ಮ ಊರು-ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ 4 ಲಕ್ಷ ರೂ. ಮೊತ್ತ ಮಂಜೂರು ಮಾಡಿದ್ದು, ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಸ್ರೂರು ಮಹಾಲಿಂಗೇಶ್ವರ ದೇವ ಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕೆರೆಗೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು. ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್. ನವೀನ್ ಚಂದ್ರ ಶೆಟ್ಟಿ ಜೆ.ಸಿ.ಬಿ. ಯಿಂದ ಗುಂಡಿ ತೆಗೆಯುವುದರ ಮೂಲಕ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.
ಸ್ಥಳೀಯ ಕಾವ್ರಾಡಿ ಗ್ರಾಮ ಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿಯವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆದು ಯೋಜನಾಧಿಕಾರಿ ಮುರಳೀಧರ ಕೆ. ಶೆಟ್ಟಿ ಪ್ರಸ್ತಾವಿಸಿ, ನಮ್ಮೂರು ನಮ್ಮ ಕೆರೆಯ ಕಾರ್ಯಕ್ರಮದ ಮುಖಾಂತರ ಇಡೀ ರಾಜ್ಯಾದ್ಯಂತ ಕೆರೆ ಹೊಳೆತ್ತುತ್ತಿದ್ದು ಜನ, ಜಾನುವಾರು, ಪ್ರಾಣಿ ,ಪಕ್ಷಿ , ಕೃಷಿ ಅಭಿವೃದ್ಧಿ ಮತ್ತು ಅಂರ್ತಜಲ ಮಟ್ಟ ಹೆಚ್ಚಿಸುವ ನೆಲೆಯಲ್ಲಿ ಮಾಡಲಾಗಿದೆ. ಗ್ರಾಮಸ್ಥರು ಇದರ ಉಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾವ್ರಾಡಿ ಗ್ರಾ.ಪಂ. ಅಧ್ಯಕ್ಷ ಗೌರಿ ಆರ್. ಶ್ರೀಯಾನ್, ಗ್ರಾ.ಪಂ. ಸದಸ್ಯರಾದ ಜಿ. ಕಾಳಿಂಗ ಶೆಟ್ಟಿ, ಕೆ. ಆಸಿಫ್, ಯೋಜನೆಯ ವಲಯ ಮೇಲ್ವಿಚಾರಕಿ ಸುಜಾತಾ ಶೆಟ್ಟಿ, ಸಮಿತಿಯ ಅಧ್ಯಕ್ಷ ಗಣೇಶ್ ಮೊಗವೀರ, ಉಪಾಧ್ಯಕ್ಷ ದಿನಕರ ಆಚಾರ್ಯ, ಕೋಶಾಧಿಕಾರಿ ಉದಯ್ ಶೇರಿಗಾರ, ಕಾವ್ರಾಡಿ ವ್ಯವಸಾಯ ಸೇ.ಸ.ಸಂ. ಅಧ್ಯಕ್ಷ ಸದಾನಂದ ಬಳ್ಕೂರು, ಸೇವಾ ಪ್ರತಿನಿಧಿಗಳಾದ ಪ್ರೇಮಲತಾ, ಸವಿತಾ ಉಪಸ್ಥಿತರಿದ್ದರು.ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ನಿರ್ವಹಿಸಿ, ಸ್ವಾಗತಿಸಿ, ಸೇವಾಪ್ರತಿನಿಧಿ ಪ್ರೇಮಲತಾ ವಂದಿಸಿದರು.