Advertisement

ಜಮೀನು ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

01:42 AM Jun 23, 2019 | Sriram |

ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದ ಪೊಲೀಸರ ತರಬೇತಿಗೆ ಕೇಂದ್ರ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಒದಗಿ ಸುವ ಪಬ್ಲಿಕ್‌ ಸ್ಕೂಲ್‌ನ ಕನಸು ನನಸಾಗುವ ಲಕ್ಷಣ ಗೋಚರಿಸಿದೆ.

Advertisement

ಈ ಎರಡೂ ಯೋಜನೆಗಳಿಗೆ ಬೇಕಾದ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದು ಪೊಲೀಸ್‌ ಸಿಬಂದಿಯಲ್ಲಿ ಆಶಾವಾದ ಮೂಡಿಸಿದೆ.

ಪ್ರತ್ಯೇಕ ಕಟ್ಟಡಗಳಲ್ಲಿ ಈ ಸಂಸ್ಥೆಗಳ ಆರಂಭಕ್ಕೆ 2013-14ನೇ ಸಾಲಿನ ಬಜೆಟ್‌ನಲ್ಲಿ 75 ಲ.ರೂ. ನೀಡಲಾಗಿತ್ತು. ಆದರೆ ಆರು ವರ್ಷಗಳಾದರೂ ಜಾಗದ ಸಮಸ್ಯೆ ಬಗೆಹರಿದಿರಲಿಲ್ಲ.

ಇಪ್ಪತ್ತು ಎಕ್ರೆ ಪ್ರದೇಶ
ಉಡುಪಿ ತಾಲೂಕಿನ ಉಪ್ಪೂರು ಗ್ರಾಮದಲ್ಲಿ 36 ಎಕ್ರೆ ಜಮೀನನ್ನು ಪರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಪೊಲೀಸ್‌ ಇಲಾಖೆಗೆ ನೀಡಲು ಜಿಲ್ಲಾಧಿಕಾರಿಯವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳಾಗಿದ್ದವು. ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿ, ‘ಉದ್ದೇಶಿತ ಯೋಜನೆಗೆ ಅಗತ್ಯಕ್ಕಿಂತ ಹೆಚ್ಚಿನ ಜಮೀನು ನೀಡಲಾಗದು’ ಎಂದು ತಿಳಿಸಿದೆ. ಹಾಗಾಗಿ 36ರ ಬದಲು 20 ಎಕ್ರೆಗೆ ಸೀಮಿತ ಗೊಳಿಸಿ ಮರು ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ತಾತ್ಕಾಲಿಕ ತರಬೇತಿ ಕೇಂದ್ರಗಳು
ಉಡುಪಿ, ದ.ಕ. ಸೇರಿದಂತೆ ಹೆಚ್ಚಿನ ಎಲ್ಲ ಜಿಲ್ಲೆಗಳಲ್ಲೂ ಪೊಲೀಸ್‌ ಇಲಾಖೆಗೆ ಆಯ್ಕೆಗೊಂಡವರ ತರಬೇತಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಹಾಗೂ ಮೈದಾನದಲ್ಲಿ ನಡೆಯುತ್ತ್ತಿದೆ. ಇವು ತಾತ್ಕಾಲಿಕ ತರಬೇತಿ ಕೇಂದ್ರಗಳಾಗಿದ್ದು, ಅಗತ್ಯ ಮೂಲ ಸೌಕರ್ಯ ಸಾಕಷ್ಟಿಲ್ಲ. ಉಡುಪಿಯಲ್ಲಿ 2000ನೇ ಸಾಲಿನಿಂದ ಇದುವರೆಗೆ 11 ಬ್ಯಾಚ್‌ಗಳು ತರಬೇತಿ ಪಡೆದಿವೆ. ಉಡುಪಿ-ದ.ಕ. ಎರಡೂ ಕಡೆಗಳಲ್ಲಿ ಒಂದು ಬ್ಯಾಚ್‌ನಲ್ಲಿ ತಲಾ ಗರಿಷ್ಠ ಸುಮಾರು 100 ಮಂದಿಯಷ್ಟೇ ತರಬೇತಿ ಪಡೆಯಬಹುದು. ಒಂದುವೇಳೆ ಸುಸಜ್ಜಿತ ಕೇಂದ್ರ ಆರಂಭಗೊಂಡರೆ 400ಕ್ಕೂ ಅಧಿಕ ಮಂದಿಗೆ ತರಬೇತಿ ಸಾಧ್ಯವಾಗಲಿದೆ.

Advertisement

ಪಬ್ಲಿಕ್‌ ಸ್ಕೂಲ್ ಪ್ರಯೋಜನ
ಪೊಲೀಸ್‌ ಪಬ್ಲಿಕ್‌ ಸ್ಕೂಲ್ ಆರಂಭವಾದರೆ ದ.ಕ., ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್‌ ಅಧಿಕಾರಿ, ಸಿಬಂದಿ ಮಕ್ಕಳಿಗೂ ಉಚಿತ, ರಿಯಾಯಿತಿ ದರದಲ್ಲಿ ಶಿಕ್ಷಣ ಸಿಗ ಲಿದೆ. ಇದರ ನಿರ್ವಹಣೆಗೆ ಸ್ಥಳೀಯವಾಗಿ ಎಜುಕೇಶನ್‌ ಸೊಸೈಟಿ ರಚನೆಯಾಗಲಿದೆ. ಉಡುಪಿ ಜಿಲ್ಲೆಯಲ್ಲೇ ಸುಮಾರು 900 ಮಂದಿ ಪೊಲೀಸರಿದ್ದಾರೆ. ಇಂಥ ಶಾಲೆ ಧಾರವಾಡ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ.

ಜಮೀನು ಲಭ್ಯವಾಗದ್ದರಿಂದ ಯೋಜನೆ ಜಾರಿಗೊಂಡಿಲ್ಲ. ಮಂಜೂರಾದ ಹಣವನ್ನು ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದಲ್ಲಿ ಠೇವಣಿ ಇಡ ಲಾಗಿದೆ. ಜಾಗ ಅಂತಿಮಗೊಳಿಸಲು ಪ್ರಯತ್ನಿಸಲಾಗುತ್ತಿದೆ.
-ನಿಶಾ ಜೇಮ್ಸ್‌, ಎಸ್‌ಪಿ

ಈ ಹಿಂದೊಮ್ಮೆ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಮತ್ತೂಮ್ಮೆ ನಮ್ಮ ಅಭಿಪ್ರಾಯ ಕೋರಿದ್ದು, ಕೂಡಲೇ ಪ್ರತಿಕ್ರಿಯಿಸಲಾಗುವುದು.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next