ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಬಹುನಿರೀಕ್ಷಿತ ಏತ ನೀರಾವರಿ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಮುಖ್ಯಮಂತ್ರಿ ಉದ್ಘಾಟನೆ ಮಾಡಲಿರುವ ಪಟ್ಟಣದ ಮಿನಿ ವಿಧಾನಸೌಧ, ಅಂಬೇಡ್ಕರ್ ಭವನ ಹಾಗೂ ಕಾರ್ಯಕ್ರಮ ನಡೆಯುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿನ ವೇದಿಕೆ ಅಂತಿಮಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ದೇವನಹಳ್ಳಿಯಲ್ಲಿ ಬಹುದಿನಗಳಿಂದ ಜನರ ಒತ್ತಾಯವಾಗಿದ್ದ ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ, ಪ್ರವಾಸಿ ಮಂದಿರದ ಸರ್ಕಿಟ್ ಹೌಸ್,ಅಗ್ನಿಶಾಮಕ ಠಾಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು. ಹೆಬ್ಟಾಳ-ನಾಗವಾರ ವ್ಯಾಲಿಯಲ್ಲಿನ ನೀರು ಸಂಸ್ಕರಣಾ ಘಟಕದಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ದೇವನಹಳ್ಳಿ ದೊಡ್ಡಕೆರೆಯಲ್ಲಿ ಶಂಕುಸ್ಥಾಪನೆ ನೆರವೇರಿ ಸಲಿದ್ದಾರೆ. 140 ಕೋಟಿ ರೂ.ವೆಚ್ಚದ ವಿಜಯಪುರ- ವೇಮಗಲ್ ಮಾರ್ಗ, ಕೋಲಾರ್ ಕಾರಿಡಾರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕುಂದಾಣ ರೈತ ಸಂಪರ್ಕ ಕೇಂದ್ರ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಮಿನಿವಿಧಾನ ಸೌಧ ಆವರಣದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಅಲ್ಲಿಯೇ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು. ಬರಗಾಲ ಇರುವುದರಿಂದ ಈ ಭಾಗದ ಜನ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿತ್ತು. ಸರ್ಕಾರವು ಹೆಬ್ಟಾಳ ಕೆರೆಯಿಂದ ನಾಗವಾರ ಕೆರೆಗಳಿಂದ ನೀರನ್ನು ಶುದ್ಧೀಕರಿಸಿ ಈ ಭಾಗದ ಕೆರೆಗಳಿಗೆ ನೀರಿನ ಹರಿಸುವ ಕೆಲಸಕ್ಕೆ 886 ಕೋಟಿ ರೂ. ಮೀಸಲಿಟ್ಟಿತ್ತು. ಕೋಲಾರ ಜಿಲ್ಲೆಗೆ 1300 ಕೋಟಿರೂ. ವೆಚ್ಚದಲ್ಲಿ ಶುದ್ಧೀಕರಿಸಿದ ನೀರಿಗೆ ಅನುದಾನ ನೀಡಿ ಚಾಲನೆ ಕೊಡಲಾಗಿದೆ ಎಂದು ಹೇಳಿದರು. ಮೂರು ಕಡೆ ನೀರು ಶುದ್ಧೀಕರಿಸಲು ಘಟಕ ಸ್ಥಾಪನೆ ಮಾಡಿದ್ದು, ಮೊದಲು ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಕೆರೆಗೆ ನೀರು ಬರುತ್ತದೆ. ನಂತರ ಬೂದಿಗೆರೆ, ಇತರೆ ಕಡೆಗಳಿಂದ ದೇವನಹಳ್ಳಿಗೆ ಒಂದು ವರ್ಷದ ಒಳಗೆ ಕೆರೆಗಳಿಗೆ ನೀರು ಹರಿಸುವ ಕಾರ್ಯವಾಗುತ್ತದೆ.
ಇದರಿಂದ ಅಂತರ್ಜಲ ಮರುಪೂರ್ಣವಾಗಲು ಸಹಕಾರಿಯಾಗುತ್ತದೆ. ಇದೊಂದು ಶಾಶ್ವತ ಪರಿಹಾರ ಯೋಜನೆಯಾಗಿದೆ. ಆರಂಭಿಕವಾಗಿ ಒಂಭತ್ತು ಕೆರೆಗಳನ್ನು ಗುರ್ತಿಸಿದ್ದು, ಮುಂದುವರಿದು ಹೋದರೆ 20 ಕೆರೆಗಳಿಗೆ ನೀರು ಸಿಗುತ್ತದೆ ಎಂದು ಹೇಳಿದರು.
ಆನೆಕಲ್ ತಾಲೂಕಿಗೆ ಶುದ್ಧೀಕರಿಸಿದ ನೀರಿಗಾಗಿ 250 ಕೋಟಿ ರೂ. ಬಿಡುಗಡೆಯಾಗುತ್ತದೆ. ಇದರ ಮಿತಿ 18 ತಿಂಗಳು ಇದೆ. ಈ ಭಾಗಗಳ ಕೆರೆಗೆ ಹರಿಯುವ ನೀರಿಗೆ 2500 ಸಾವಿರ ಕೋಟಿ ರೂ. ವರೆಗೆ ಹಣ ಮೀಸಲು ಇಟ್ಟಿದೆ. 20-30 ವರ್ಷಗಳಾದರೂ ನೀರಾವರಿ ಯೋಜನೆಗಳು ಮುಗಿಯುವುದಿಲ್ಲ, 210 ಎಂಎಲ್‌ಡಿ ನೀರು ಶುದ್ಧೀಕರಿಸಲಾಗಿದೆ. 11 ಟಿಎಂಸಿ ನೀರು ಸಿಗುತ್ತದೆ. ಅಂತರ್ಜಲ ಮಟ್ಟ ಕುಸಿತದಿಂದ ಕೆರೆಗಳು ಬತ್ತಿಹೋಗಿದ್ದವು, ಈ ನೀರು ಭೂಮಿಯನ್ನು ತೇವಾಂಶ ಮಾಡಿ ನೈಸರ್ಗಿಕ ನೀರಾಗಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಸಮೃದ್ಧ ನೀರಾಗಿ ಪಡೆಯಬಹುದು. ಇದರಿಂದ ಯಾವುದೇ ತೊಂದರೆಗಳಿಲ್ಲ ಎಂದು ಹೇಳಿದರು.
ಕೆರೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇತ್ತಿಷ್ಟು ಹಣವನ್ನು ಮೀಸಲಿಟ್ಟು, ರಾಜಕಾಲುವೆ ಒತ್ತುವರಿಯಾಗಿದ್ದರೆ ಅವುಗಳನ್ನು ತೆರವುಗೊಳಿಸುವ ಕಾರ್ಯವೂ ಆಗುತ್ತದೆ. ವಿಶ್ವದಲ್ಲಿಯೇ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ನೀರನ್ನು ಶುದ್ಧೀಕರಿಸಿ ಕೊಡುತ್ತಿರುವುದು ಉದಾಹರಣೆಗಳಿಲ್ಲ, ಮೌನದಲ್ಲಿಯೇ ರಾಜ್ಯಸರ್ಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿ ಸಹಕಾರಗೊಳಿಸುತ್ತಿದೆ. ದೇಶದಲ್ಲಿ ಇದೊಂದು ಮಾದರಿಯಾಗಿದೆ ಎಂದು ವಿವರಿಸಿದರು.
Advertisement
ಮುಖ್ಯಮಂತ್ರಿಗೆ ಮನವಿ: ಶಾಸಕ ಪಿಳ್ಳಮುನಿ ಶಾಮಪ್ಪ ಮಾತನಾಡಿ, ಮುಖ್ಯಮಂತ್ರಿ ಬರುತ್ತಿರುವುದರಿಂದ ತಾಲೂಕಿಗೆ ಮೆಟ್ರೊ, ಕಾವೇರಿ ನೀರು, ಸಣ್ಣ ಕೈಗಾರಿಕೆ, ಟಿಪ್ಪುಸುಲ್ತಾನ್ ಜನ್ಮಸ್ಥಳ ಹಾಗೂ ರಣಭೈರೇಗೌಡರ ಹಾಗೂಕೆಂಪೇಗೌಡರ ಜನ್ಮಸ್ಥಳಗಳ ಅಭಿವೃದ್ಧಿ ಪಡಿಸಲು 100 ಕೋಟಿ ರೂ. ಮೀಸಲಿಟ್ಟು, ಪ್ರವಾಸಿ ತಾಣ ಮಾಡಲು ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಬಗುರ್ ಹುಕುಂ ಸಾಗುವಳಿ ಚೀಟಿ ನೀಡಲು ಆಗುತ್ತಿಲ್ಲ, ಅದರ ವ್ಯಾಪ್ತಿ ಸಡಿಲಗೊಳಿಸಲು ಒತ್ತಾಯವನ್ನು ಮಾಡಲಾಗುವುದು ಎಂದು ಹೇಳಿದರು. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಜು.28 ದಿನಾಂಕ ನಿಗದಿಯಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕಾರ್ಯಕ್ರಮದ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ. ತಾಲೂಕಿನ ಎಲ್ಲಾ ಪಕ್ಷದವರು ಸೇರಿ ಪಕ್ಷಾತೀತವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಜಿಪಂ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿ, ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ ಜಾಗವನ್ನು ನೀಡಲಾಗಿದೆ. ಎಂಪಿಎಂಸಿಯಿಂದ ಮಾರುಕಟ್ಟೆ ಅಭಿವೃದ್ಧಿ ಪಡಿಸಲು 48 ಲಕ್ಷ ರೂ. ಅನುದಾನವನು ನೀಡಲಾಗುತ್ತದೆ. ಇದರಿಂದ ಎಲ್ಲಾ ಗ್ರಾಹಕರಿಗೂ ಅನುಕೂಲವಾಗುವಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವೆಂಕಟಸ್ವಾಮಿ, ಜಿಪಂ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ಅನಂತ ಕುಮಾರಿ, ಸದಸ್ಯ ಕೆ.ಸಿ.ಮಂಜುನಾಥ್, ರಾಧಮ್ಮ, ಪುರಸಭಾಧ್ಯಕ್ಷ ನರಸಿಂಹಮೂರ್ತಿ, ತಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯ, ಸಿಇಓ ಕೆ.ಎ.ದಯಾನಂದ್, ಅಪರ ಜಿಲ್ಲಾಧಿಕಾರಿ ವೈ.ಎಂ.ಯೋಗೇಶ್, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಮಾಜಿ ಪುರಸಭಾ ಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಖಾದಿಬೋರ್ಡ್ ಅಧ್ಯಕ್ಷ ಲಕ್ಷ್ಮಣ್ ಮೂರ್ತಿ, ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಸುಬ್ಬೇಗೌಡ ಇತರರಿದ್ದರು.