Advertisement
ದೇಶದಲ್ಲೇ ಬಾಗಲಕೋಟೆ ಹೋಳಿ ಹಬ್ಬ ಆಚರಣೆಗೆ ಐತಿಹಾಸಿಕ ಹಿನ್ನೆಲೆಯಲ್ಲಿ ಒಂದು ದಿನ ಕಾಮ ದಹನ, ಮರುದಿನ ತುರಾಯಿ ಹಲಗೆ ಮೆರವಣಿಗೆ ನಡೆದರೆ, ಮೂರು ದಿನಗಳ ಕಾಲ ಬಣ್ಣದ ಯುದ್ಧವೇ ನಡೆಯುತ್ತದೆ. ಇಡೀ ಬಾಗಲಕೋಟೆ ನಗರದ ಜನ, ಕುಟುಂಬ ಸಮೇತ ಬಣ್ಣದಲ್ಲಿ ಮಿಂದೆದ್ದು, ಸಂಭ್ರಮಿಸುತ್ತಾರೆ. ವಿಶೇಷವಾಗಿ ದೇಶದ ಹಲವೆಡೆ ಹಾಗೂ ವಿದೇಶಗಳಲ್ಲಿ ಉದ್ಯೋಗ ಅರಿಸಿ ಹೋದವರೆಲ್ಲ ಇಲ್ಲಿನ ಹೋಳಿ ಹಬ್ಬಕ್ಕಾಗಿಯೇ ಮರಳಿ ಬಂದು ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.
Related Articles
Advertisement
ಬಾಗಲಕೋಟೆಯಲ್ಲಿ ಕಿಲ್ಲಾ, ಹೊಸಪೇಟ, ಹಳಪೇಟ, ಜೈನಪೇಟ ಹಾಗೂ ವೆಂಕಟಪೇಟ ಎಂಬ ಪ್ರಸಿದ್ಧ ಐದು ಮನೆತನ ಬಡಾವಣೆಗಳಿವೆ. ಈ ಐದು ಬಡಾವಣೆಗಳಲ್ಲಿ ಪ್ರತಿವರ್ಷ ಹೋಳಿ ಹಬ್ಬವನ್ನು ಮೂರು ದಿನಗಳವರೆಗೆ ಆಚರಿಸುವ ವಾಡಿಕೆ ಇದೆ. ಮುಖ್ಯವಾಗಿ ಹಲಗೆ ಬಾರಿಸುವ ವಾಡಿಕೆ ಇದೆ. ಈ ಹಲಗೆ ಬಾರಿಸುವ ಗತ್ತು ನಗರದಲ್ಲಿಯ ನಿವಾಸಿಗಳಿಗೆ ಮಾತ್ರ ಬರುತ್ತದೆ. ಇನ್ನುಳಿದವರಿಗೆ ಹಲಗೆ ಬಾರಿಸುವ ಗತ್ತು ಬರಲು ಸಾಧ್ಯವಿಲ್ಲ ಎನ್ನಬಹುದು. ಪ್ರತಿ ಬಡಾವಣೆಗಳಲ್ಲಿಯೂ ಕೆಲವು ಆಯ್ದ ಹಿರಿಯರ ಮನೆಗಳಲ್ಲಿ ಈ ನಿಶಾನೆ ಹಾಗೂ ತುರಾಯಿ ಹಲಗೆಗಳಿವೆ. ಅವುಗಳನ್ನು ಹೋಳಿ ಹಬ್ಬದಲ್ಲಿ ಮಾತ್ರ ಹೊರಗೆ ತೆಗೆಯುತ್ತಾರೆ. ಪ್ರತಿ ವರ್ಷ ಹುಬ್ಟಾ ನಕ್ಷತ್ರದಂದು ಕಿಲ್ಲಾ ಬಡಾವಣೆಯಲ್ಲಿ ಸುಪ್ರಸಿದ್ಧ ಶ್ರೀಮಂತ ಬಸವಪ್ರಭು ಸರನಾಡಗೌಡ ಮನೆಯಿಂದ ಹಲಗೆ ಹಾಗೂ ನಿಶಾನೆ ತೆಗೆದುಕೊಂಡು ಕುಲಕರ್ಣಿ ಮನೆತನದವರನ್ನು (ಗುರುರಾಜ, ಮಧ್ವರಾವ್, ನಾರಾಯಣರಾವ್) ಕರೆದುಕೊಂಡು ಅಂಬೇಡ್ಕರ್ ಗಲ್ಲಿಯಲ್ಲಿರುವ ಕಿರಣ ಖಾತೇದಾರ ಮನೆಯಿಂದ ಬೆಂಕಿ ತಂದು ತಮ್ಮ ಬಡಾವಣೆಯಲ್ಲಿ ಮೊದಲು ಕಾಮನದಹನ ಮಾಡುವ ವಾಡಿಕೆ ಇದೆ. ನಂತರ ವಿವಿಧ ಬಡಾವಣೆಯಲ್ಲಿ ಕಾಮದಹನ ಮಾಡುವುದು ಇಲ್ಲಿನ ಸಂಪ್ರದಾಯ.
ಸೋಗುಗಳ (ಸ್ತಬ್ಧಚಿತ್ರ) ಪ್ರದರ್ಶನ-ಬಣ್ಣದ ಆಟ: ಹೋಳಿ ಹಬ್ಬದಲ್ಲಿ ಸುಮಾರು ಎರಡು ಲಕ್ಷಕ್ಕಿಂತಲೂ ಹೆಚ್ಚು ಹಣ ಬಣ್ಣಕ್ಕೆ ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ಕಾಮ ದಹನವಾದ ನಂತರ ರಾತ್ರಿ ಒಂದು ಬಡಾವಣೆಯವರು ಮೊದಲು ಸೋಗಿನ ಗಾಡಿಯನ್ನು ಎಲ್ಲ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿಸುತ್ತಾರೆ. ಸುಮಾರು 10 ರಂದು 20 ಚಕ್ಕಡಿಗಳಲ್ಲಿ ವಿವಿಧ ವೇಷಭೂಷಣ ಪ್ರದರ್ಶನ ನಡೆಯುತ್ತದೆ. ಆದರೆ ಒಂದೊಂದು ಸೋಗಿನ ಗಾಡಿಗೆ ಸುಮಾರು 15-20 ಸಾವಿರ ರೂ. ವೆಚ್ಚ ತಗಲುತ್ತದೆ. ಇತ್ತೀಚೆಗೆ ಕಡಿಮೆ ಪ್ರಮಾಣದಲ್ಲಿ ಸೋಗಿನ ಗಾಡಿಗಳನ್ನು ಪ್ರದರ್ಶಿಸುತ್ತಾರೆ. ರಾತ್ರಿ ಸೋಗಿನ ಗಾಡಿಗಳ ಪ್ರದರ್ಶನ ನಡೆದ ನಂತರ ಬೆಳಗ್ಗೆ ಅದೇ ಬಡಾವಣೆಯವರು ಚಕ್ಕಡಿ (ಬಂಡಿ), ಟ್ರಾಕ್ಟರ್, ಟ್ರಕ್‌ಗಳಲ್ಲಿ ಬಣ್ಣ ತುಂಬಿದ ಬ್ಯಾರಲ್‌ಗಳನ್ನಿಟ್ಟು ವಿವಿಧ ಬಡಾವಣೆಗಳಲ್ಲಿ ಬಣ್ಣದ ಆಟ ಆಡುತ್ತಾರೆ. ಬಣ್ಣದ ಗಾಡಿಗಳು ಬಡಾವಣೆಗಳಲ್ಲಿ ಬರುತ್ತಿರುವ ಬಗ್ಗೆ ಅಲ್ಲಿಯ ನಾಗರಿಕರು ತಮ್ಮ ಮನೆ ಮಾಳಿಗೆ ಮೇಲೆ ಮೊದಲೇ ಸಂಗ್ರಹಿಸಿದ ಬಣ್ಣಗಾಡಿಯವರ ಮೇಲೆ ಮುಖಾಮುಖೀ ಬಣ್ಣ ಎರಚುವ ದೃಶ್ಯ ಮನೋಹರವಾಗಿ ಕಾಣಿಸುತ್ತದೆ. ಮಾ.19ರ ಬಣ್ಣದಾಟ ಒಂದು ಹಳೇಪೇಟ ಓಣಿ ಕಡೆಯಿಂದ ಬಂದರೆ ವಿರುದ್ಧ ದಿಕ್ಕಿನಿಂದ ಜೈನಪೇಟ ವೆಂಕಟಪೇಟ ಓಣಿಯವರ ಮಧ್ಯೆ ಬಣ್ಣದ ಯುದ್ಧವೇ ನಡೆಯುವ ದೃಶ್ಯ ನೋಡಲು ಬೇರೆ ಬೇರೆ ಊರುಗಳಿಂದ ಸಾವಿರಾರು ಜನರು ಬಂದು ಕಣ್ತುಂಬಿಕೊಳ್ಳುವರು. ಬೇರೆ ಕೆಲವೊಂದು ಬಡಾವಣೆಗಳಲ್ಲಿ ನೀರಿನ ಬಾವಿಗೆ ಬಣ್ಣ ಹಾಕಿ ಪೈಪುಗಳ ಮೂಲಕ ಬಣ್ಣ ಎರಚುತ್ತಾರೆ.
ಭಾವೈಕ್ಯದ ಸಂಕೇತವಾದ ಬಾಗಲಕೋಟೆ ಹೋಳಿ ಹಬ್ಬವು ಸಂಸ್ಕೃತಿಯ ಪರಂಪರೆ ಪ್ರತೀಕವಾಗಿರುವುದರಿಂದ ಜನಪ್ರತಿನಿಧಿ ಗಳು, ಊರ ಹಿರಿಯರು, ಯುವಕರನ್ನು ಒಟ್ಟಾಗಿ ಕೂಡಿಕೊಂಡು ಆಚರಿಸಿದಾಗ ಬಾಗಲಕೋಟೆ ಹೋಳಿ ಹಬ್ಬಕ್ಕೆ ವಿಶಿಷ್ಟ ಸ್ಥಾನ ಕಲ್ಪಿತವಾಗಲಿದೆ.
ನೂರಾರು ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಹೋಳಿ ಹಬ್ಬ ಎಲ್ಲ ಸಮಾಜದವರು ಕೂಡಿಕೊಂಡು ಭಾವೈಕ್ಯದ ಸಂಕೇತವಾಗಿ ಆಚರಿಸುತ್ತ ಬರುತ್ತಿದ್ದಾರೆ. ಈ ವರ್ಷವೂ ಪ್ರತಿಯೊಬ್ಬರೂ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಕೆಲವರು ಹೋಳಿ ಬಂದರೆ ಪ್ರವಾಸದ ನೆಪದಲ್ಲಿ ಊರು ಬಿಡುವ ಪದ್ಧತಿ ಬಿಡಬೇಕು. ಊರಿನ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.
–ಮಹಾಬಲೇಶ್ವರ ಗುಡಗುಂಟಿ, ಪ್ರಧಾನ ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ