Advertisement

ಹೆದ್ದಾರಿ ಸೇತುವೆಯಡಿ ಡ್ರೆಜ್ಜಿಂಗ್‌ಗೆ ಚಾಲನೆ

09:52 PM May 09, 2019 | Team Udayavani |

ಪಾವಂಜೆ: ಸಸಿಹಿತ್ಲು ಗ್ರಾಮದ ಮುಂಡ ಬೀಚ್‌ನಲ್ಲಿ ತೀವ್ರವಾದ ನದಿ ಕೊರೆತಕ್ಕೆ ಪರೋಕ್ಷ ಕಾರಣವಾಗಿರುವ ಮೂರು ಸೇತುವೆಗಳ ಅಡಿ ಡ್ರೆಜ್ಜಿಂಗ್‌ ಕಾರ್ಯ ಕಳೆದ ಎರಡು ದಿನಗಳಿಂದ ಭರದಿಂದ ಸಾಗಿದೆ.

Advertisement

ಇತ್ತೀಚೆಗೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸ್ಥಳೀಯ ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್‌ ಕಾಮೆರೊಟ್ಟು ಹಾಗೂ ಮೀನುಗಾರರ ಪ್ರಮುಖರೊಂದಿಗೆ ನಿಯೋಗದ ಮೂಲಕ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದರ ಪರಿಣಾಮ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಚರ್ಚಿತ ವಿಷಯಗಳು
ಮುಂಡ ಬೀಚ್‌ನಲ್ಲಿ ಸಮುದ್ರ ಕೊರೆ ತದಿಂದ ಅಂಗಡಿಕೋಣೆ ಸಮುದ್ರ ಪಾಲಾಗಿ ಸುಮಾರು 100 ಮೀ.ಗಿಂತಲೂ ಹೆಚ್ಚು ಭಾಗ ಸಮುದ್ರ ಪಾಲಾಗಿವೆ ಈ ಬಗ್ಗೆ ಕಾರ್ಯಾಚರಣೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸುವಾಗ ಮಣ್ಣು ತುಂಬಿಸಿದ್ದನ್ನು ಕಾಮಗಾರಿ ಮುಗಿದರೂ ತೆರವುಗೊಳಿಸದಿರುವುದರಿಂದ ಹೂಳು ತುಂಬಿ ಕೊಂಡಿದೆ. ಅಂತೆಯೇ ಕದಿಕೆ, ಕೊಳುವೈಲು ಹೊಸ ಸೇತುವೆಯ ಕೆಳಭಾಗದಲ್ಲಿಯೂ ಇದೇ ರೀತಿಯ ಮಣ್ಣಿನ ಹೂಳು ತುಂಬಿ ಕೊಂಡಿದ್ದು ಆದಷ್ಟು ಬೇಗ ಹೂಳೆತ್ತಬೇಕು. ಕದಿಕೆ ಮೂಡುಕೊಪ್ಪಲ ಬಳಿಯಲ್ಲಿ ಹಾಕಿರುವ ಅನಗತ್ಯ ಕಾಂಡ್ಲ ಗಿಡವನ್ನು ತೆರವುಗೊಳಿಸಬೇಕು.ಇದರಿಂದಾಗಿ ನಂದಿನಿ ನದಿಯ ನೀರು ರಭಸವಾಗಿ ಹರಿದು ನೇರವಾಗಿ ಸಮುದ್ರ ಸೇರಲು ಸಾಧ್ಯವಾಗುತ್ತದೆ.ಪ್ರಸ್ತುತವಾಗಿ ಇದಕ್ಕೆ ಈ ಹೂಳಿನಿಂದ ತಡೆಯಾಗುತ್ತಿದೆ ಎಂದು ಎಂದು ಶಾಸಕರು ಬೀಚ್‌ನ ಪ್ರಮುಖ ತೊಡಕನ್ನು ಜಿಲ್ಲಾಧಿಕಾರಿಗೆ ವಿವರಿಸಿ ಜತೆ ಗೆ ಪರಿಹಾರ ಕ್ರಮಕ್ಕೆ ಆಗ್ರಹಿಸಿದ್ದರು.

ಅದರ ಅನ್ವಯದಂತೆ ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆಯನ್ನು ನಿರ್ಮಿಸುವಾಗ ಹಾಕಲಾಗಿದ್ದ ಮಣ್ಣನ್ನು ಐದು ವರ್ಷದ ನಂತರ ಜೇಸಿಬಿಯ ಮೂಲಕ ತೆಗೆಯಲಾಗುತ್ತಿದೆ. ಆ ನಂತರ ಕದಿಕೆ ಹಾಗೂ ಕೊಳುವೈಲ್‌ನ ಸೇತುವೆಯ ಹೂಳಿನ ಡ್ರೆಜ್ಜಿಂಗ್‌ ನಡೆಯಲಿದೆ ಎಂದು ತಿಳಿದು ಬಂದಿದೆ.

ತುರ್ತು ಕಾಮಗಾರಿ ಅನಿವಾರ್ಯ
ಈ ಬಗ್ಗೆ ಉದಯವಾಣಿಯೊಂದಿಗೆ ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು ಮಾತನಾಡಿ,ಪ್ರವಾಸೋದ್ಯಮ ಕೇಂದ್ರವಾಗುತ್ತಿರುವ ಮುಂಡ ಬೀಚ್‌ನ್ನು ಉಳಿಸಿಕೊಳ್ಳಲು ಈ ತುರ್ತು ಕಾಮಗಾರಿ ಅನಿವಾರ್ಯವಾಗಿದ್ದು, ಮಳೆಗಾಲ ಆರಂಭವಾದಲ್ಲಿ ಇದಕ್ಕೂ ತೊಡಕಾಗಬಹುದು. ಶಾಸಕರ ಮೂಲಕ ವಿವಿಧ ಇಲಾಖೆಗಳಿಂದ ಬೀಚ್‌ ಅಭಿವೃದ್ಧಿಗೆ ಅನುದಾನಕ್ಕೂ ಪ್ರಯತ್ನಿಸಲಾಗುವುದು ಎಂದರು.

Advertisement

ಉದಯವಾಣಿ ಉಲ್ಲೇಖೀಸಿತ್ತು.
ಸಸಿಹಿತ್ಲುವಿನ ಮುಂಡ ಬೀಚ್‌ನಲ್ಲಿನ ಸಮುದ್ರ ಕೊರೆತ ಹಾಗೂ ನದಿ ಕೊರೆತಕ್ಕೆ ಮೂಲ ಕಾರಣ ಸೇತುವೆಯ ಹೂಳು ಎಂದು ಈ ಹಿಂದೆ ಉದಯವಾಣಿ ವಿಶೇಷ ವರದಿಯ ಮೂಲಕ ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next