ಗುಂಡ್ಲುಪೇಟೆ: ಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಗೃಹ ಭಾಗ್ಯ ಯೋಜನೆ ಯಡಿಯಲ್ಲಿ ಪೌರ ಕಾರ್ಮಿಕರಿಗೆ ಹೊಸದಾಗಿ ನಿರ್ಮಿಸಿರುವ ವಸತಿ ಗೃಹಗಳ ಉದ್ಘಾಟನೆ ಸೇರಿ 9.50 ಕೋಟಿ ರೂ.ನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್, ಶಾಸಕ ಸಿ.ಎಸ್.ನಿರಂಜನಕುಮಾರ್ ಜೊತೆಗೂಡಿ ಚಾಲನೆ ನೀಡಿದರು.
ಮೊದಲಿಗೆ ಸಚಿವರು ಪಟ್ಟಣ ಪುರಸಭೆಯ ಹೊಸೂರಿನ ಸಂತೇಮಾಳದಲ್ಲಿ ಗೃಹಭಾಗ್ಯ ಯೋಜನೆಯಡಿ ಹೊಸದಾಗಿ ನಿರ್ಮಿಸಿರುವ 15 ವಸತಿ ಗೃಹ ಪೌರಕಾರ್ಮಿಕರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟನೆ ನೇರವೇರಿಸಿದರು. ನಂತರಮಡಹಳ್ಳಿ ವೃತ್ತದಲ್ಲಿ 75 ಲಕ್ಷ ರೂ.ನಲ್ಲಿ ನಿರ್ಮಾಣ ಮಾಡಲಿರುವ ಹಣ್ಣು, ತರಕಾರಿ ಮಾರಾಟ ವಲಯದ ಕಟ್ಟಡ ನಿರ್ಮಾಣ ಹಾಗೂ 1.90 ಕೋಟಿ ರೂ.ನ ಪಟ್ಟಣದಕಿತ್ತೂರು ರಾಣಿ ಚೆನ್ನಮ್ಮ ಮುಖ್ಯ ರಸ್ತೆ ಕಾಂಕ್ರೀಕರಣ, ಹಳೇ ಬಸ್ ನಿಲ್ದಾಣದಲ್ಲಿ ಅಧುನಿಕ ತಂಗುದಾಣ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೇರವೇರಿಸಿದರು.
ಪುರಸಭಾ ಸಭಾಂಗಣದಲ್ಲಿ ನಡೆದ ವಿವಿಧ ಸೌಲಭ್ಯಗಳ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ 10 ಲಕ್ಷ ರೂ.ನಲ್ಲಿ ಮೂರು ಮಂದಿ ದಿವ್ಯಾಂಗರಿಗೆ ಸ್ಕೂಟರ್, ಎಸ್‌ಎಸ್ ಎಲ್‌ಸಿ, ಪಿಯುಸಿ ಮಕ್ಕಳಿಗೆ ಸಹಾಯ ಧನ ಸೇರಿ ಬಿಇ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ ಪ್ರೋತ್ಸಾಹ ಧನ ವಿತರಿಸಿದರು.
ಕಾಲ ಕೂಡಿ ಬಂದಿದೆ: ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಇದೀಗ ಕಾಲ ಕೂಡಿ ಬಂದಿದೆ. ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಅದಕ್ಕೆ 18 ಎಕರೆ ಜಮೀನು ಖರೀದಿಸಲಾಗಿದೆ ಂದು ಹೇಳಿದರು. ದಿವ್ಯಾಂಗ ವ್ಯಕ್ತಿ ವೆಂಕಟೇಶ್ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ಮುಂಭಾಗ ಸ್ವಯಂ ಉದ್ಯೋಗ ಮಾಡಲು ಅಂಗಡಿ ಮಳಿಗೆ ನಿರ್ಮಾಣ ಮಾಡಿಕೊಡಬೇಕೆಂದು ಸಚಿವ ಸುರೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಪುರಸಭಾಧ್ಯಕ್ಷ ಪಿ.ಗಿರೀಶ್, ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ಎಸಿ ಗಿರೀಶ್ ದಿಲೀಪ್ ಬದೋಲೆ, ಎಎಸ್ಪಿ ಅನಿತಾ ಬಿ.ಹದಣ್ಣನವರ್, ಡಿವೈಎಸ್‌ಪಿ ಪ್ರಿಯಾದರ್ಶಿಣಿ ಸಾಣೆಕೊಪ್ಪ, ಪುರಸಭಾ ಮುಖ್ಯಾಧಿಕಾರಿ ರಮೇಶ್, ಸದಸ್ಯರಾದ ರಮೇಶ್ ಇದ್ದರು.