ಐಕಳ:ಮೂಲ್ಕಿ ಹಾಗೂ ಮೂಡಬಿದಿರೆ ಕ್ಷೇತ್ರದಲ್ಲಿ ತನ್ನ ಪ್ರಯತ್ನದಿಂದ ಸುಮಾರು 16 ಕೋಟಿ ರೂ. ಗಳಷ್ಟು ಮೊತ್ತದ ಯೋಜನೆಗಳನ್ನು ತರಲಾಗಿದೆ. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ನ ನಿಡ್ಡೋಡಿಗೆ ಗ್ರಾಮ ವಿಕಾಸ ಯೋಜನೆಯಡಿ ಒಂದು ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು. ಅವರು ಡಿ. 26ರಂದು ಐಕಳ ಗ್ರಾಮದ ಐಕಳಬಾವ ನಾಗಬನದಿಂದ ಧರ್ಮಚಾವಡಿವರೆಗೆ ಹೋಗುವ ರಸ್ತೆಗೆ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ 20 ಅಟೋ ರಿಕ್ಷಾ ನಿಲ್ದಾಣವನ್ನು ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಐಕಳ ಪರಿಸರದಲ್ಲಿ ಹೈಮಾಸ್ಟ್ ದಾರಿ ದೀಪಕ್ಕೆ ಅನುದಾನ ನೀಡಲಾಗುವುದು, ಜನವರಿ ತಿಂಗಳಿನಲ್ಲಿ ನಡೆಯುವ ಕಂಬಳದ ಸಮಯದಲ್ಲಿ ರಸ್ತೆಯನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಹಲವು ಯೋಜನೆಗಳಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಇನ್ನಷ್ಟು ಯೋಜನೆಗಳನ್ನು ತರಲಾಗುವುದು. ಇದರಿಂದ ಇಲ್ಲಿನ ಗ್ರಾಮೀಣ ರಸ್ತೆ ದಾರಿದೀಪ, ಅಣೆಕಟ್ಟು ಮುಂತಾದ ಅಭಿವೃದ್ಧಿ ಕಾಮಗಾರಿ ನಡೆಸಬಹುದು ಎಂದು ಹೇಳಿದರು.
ಬೆಳಪು ದೇವೀಪ್ರಸಾದ ಶೆಟ್ಟಿ ಮಾತನಾಡಿ, ಇಲ್ಲಿನ ರಸ್ತೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ| ಸಂಜೀವನಾಥ ಐಕಳ ಎಂಬ ಹೆಸರು ಇಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ ಹೆಗ್ಡೆ, ಸಾಹುಲ್ ಹಮೀದ್, ಮಯ್ಯದಿ, ಮಹಮ್ಮದ್ ಗುಲಾಂ, ಐಕಳ ಜಯಪಾಲ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸುಗುಣ, ಸಂಜೀವ ಶೆಟ್ಟಿ, ವಸಂತಿ, ಸುಂದರಿ, ಐಕಳ ಮುರಳೀಧರ ಶೆಟ್ಟಿ, ಗಣೇಶ್ ಭಟ್, ವರುಣ್ ಭಟ್, ಲೀಲಾಧರ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.