ಕಾಸರಗೋಡು: ಜಲಶಕ್ತಿ ಅಭಿಯಾನ್ ಯೋಜನೆಯ ಅಂಗವಾಗಿ ಜಿಲ್ಲಾ ಭೂಗರ್ಭ ಇಲಾಖೆ ಕೊಳವೆ ಬಾವಿಗಳ ಸ್ವಚ್ಛತೆ ಆರಂಭಿಸಿದೆ.
ಕಾಸರಗೋಡು ಕೇಂದ್ರೀಯ ವಿದ್ಯಾಲಯ-2ರಲ್ಲಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಸ್ವಚ್ಛಗೊಳಿಸುವುದಕ್ಕೆ ಚಾಲನೆ ನೀಡಿದರು.
ಆತಂಕಕಾರಿ ಎಂಬಂತೆ ಭೂಗರ್ಭ ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಕಾಸರ ಗೋಡು ಜಿಲ್ಲೆಯ ಬ್ಲಾಕ್ ಮಟ್ಟದಲ್ಲಿ ರುವ ಸರಕಾರಿ, ಸಾರ್ವಜನಿಕ ಸಂಸ್ಥೆಗಳು, ಕುಡಿಯುವ ನೀರು ಯೋಜನೆ ಇವುಗಳ ಕೊಳವೆ ಬಾವಿ ಗಳನ್ನು ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದೆ.
ಕೊಳವೆ ಬಾವಿಗಳಲ್ಲಿ ತೀವ್ರವಾಗಿ ಗಾಳಿಯನ್ನು ಹರಿಯ ಬಿಟ್ಟು ಹಲವು ವರ್ಷಗಳೇ ಸಂದಿವೆ. ಈ ಕಾರಣದಿಂದ ಕೊಳವೆ ಬಾವಿಗಳಲ್ಲಿ ತುಂಬಿಕೊಂಡಿ ರುವ ಕೆಸರು, ತ್ಯಾಜ್ಯಗಳನ್ನು ಹೊರ ತೆಗೆಯಲು ‘ಪ್ಲಾಷಿಂಗ್’ ನಡೆಸಲಾಗುತ್ತಿದೆ. ಭೂಗರ್ಭದಲ್ಲಿ ಮಣ್ಣು ಕುಸಿದು ಕೊಳವೆ ಬಾವಿಗಳಲ್ಲಿ ಮಣ್ಣು ತುಂಬಿ, ಕೆಸರು, ತ್ಯಾಜ್ಯ ತುಂಬಿ ನೀರಿನ ಮಟ್ಟ ಕುಸಿಯುತ್ತಿದೆ. ನೀರು ಕೂಡ ಕಲುಷಿತವಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಪ್ಲಾಷಿಂಗ್ ಆರಂಭಿಸಲಾಗಿದೆ.
ಕೊಳವೆ ಬಾವಿ ಸ್ವಚ್ಛತೆ ಕಾರ್ಯ ಕ್ರಮದ ಉದ್ಘಾಟನ ಸಮಾರಂಭದಲ್ಲಿ ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ. ಅಶೋಕ್ ಕುಮಾರ್, ಬಿ. ಶಾಬಿ, ಒ. ರಜೀಶ್, ಡಾ| ಕೆ.ಎ. ಪ್ರವೀಣ್ ಕುಮಾರ್, ಇ.ಎಂ. ಸುನೀಶ್, ಕೆ.ಪಿ. ತಂಗಪ್ಪನ್ ಮೊದಲಾದವರು ಉಪಸ್ಥಿತರಿದ್ದರು.
ಆರೋಗ್ಯಕರ ಹೆಜ್ಜೆ
ಕೊಳವೆ ಬಾವಿಗಳಲ್ಲಿ ತುಂಬಿರುವ ಮಣ್ಣು, ಕೆಸರು, ತ್ಯಾಜ್ಯವನ್ನು ಪ್ರತಿ ಐದು ವರ್ಷಗಳಿಗೊಮ್ಮೆಯಾದರೂ ಸ್ವಚ್ಛ ಮಾಡಬೇಕು. ಇದು ಆರೋಗ್ಯಕರವಾಗಿದೆ. ಈ ಹಿನ್ನೆಲೆಯಲ್ಲಿ ಜಲ ಶಕ್ತಿ ಯೋಜನೆಯ ಮೂಲಕ ಕೊಳವೆ ಬಾವಿಗಳ ಸ್ವಚ್ಛಗೊಳಿಸುತ್ತಿರುವುದು ಆಶಾದಾಯಕ ಮತ್ತು ಇದರಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುವುದು.
– ಡಾ| ಕೆ.ಎಂ. ಅಬ್ದುಲ್ ಅಶ್ರಫ್
ಜಿಲ್ಲಾ ಅಧಿಕಾರಿ, ಜಿಲ್ಲಾ ಭೂಗರ್ಭಜಲ ಇಲಾಖೆ.