ನಾರಾಯಣಪುರ: ಸಾರ್ವಜನಿಕರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಸರಕಾರ ಉತ್ತಮ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಸಕಲ ಸೌಲಭ್ಯಗಳಿರುವ ಭವ್ಯ ಬಸ್ ನಿಲ್ದಾಣ ನಿರ್ಮಾಣಗೊಂಡು ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರ ನೂತನ ಬಸ್ ನಿಲ್ದಾಣ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ಕಟ್ಟಡ ಕಾಮಗಾರಿಗಳು ದೀರ್ಘ ಕಾಲ ಬಾಳಿಕೆ ಬರಬೇಕು ಹಾಗೂ ಗುಣಮಟ್ಟದಿಂದ ಕೂಡಿರಬೇಕು. ಇಂತಹ ಸಂದರ್ಭದಲ್ಲಿ ಸ್ಥಳೀಯರು ಕೂಡ ಗುತ್ತಿಗೆದಾರರಿಗೆ ಹಾಗೂ ಸಾರಿಗೆ ಇಲಾಖೆಯವರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮತಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಹತ್ತು ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ ಕುಡಿಯುವ ನೀರು, ಸಿಸಿ ರಸ್ತೆ, ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆಗಳು, ಅಗಸಿ, ಸಮುದಾಯ ಭವನ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದಿರುವ ಕಾಮಗಾರಿಗಳು ಕೂಡ ಪ್ರಗತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ನಮ್ಮ ಅಧಿಕಾರ ಅವಧಿಯಲ್ಲಿ ಎರಡು ಹಂಗಾಮಿನ ಬೆಳೆಗಳಿಗೆ ಕಾಲುವೇ ನೀರು ಒದಗಿಸಲು ಶ್ರಮಿಸಿದ್ದೇನೆ. ಪ್ರಸ್ತುತ ಹಂಗಾಮಿಗೂ ಮಾರ್ಚ್ 31ವರೆಗೆ ನೀರು ಹರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಈ.ಕ.ರಾ.ರ. ಸಾರಿಗೆ ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಕೆ. ಸಂತೋಷ ಮಾತನಾಡಿ, ಒಂದು ಕೋಟಿ ವೆಚ್ಚದಲ್ಲಿ ನೂತನ ಬಸ್ಸನಿಲ್ದಾಣ ನಿರ್ಮಾಣವಾಗಲಿದ್ದು, ಮೂಲಭೂತ ಸೌಕರ್ಯ ಸೇರಿದಂತೆ ಮಹಿಳೆಯರಿಗೆ ವಿಶ್ರಾಂತಿ ಕೋಣೆ, ಕ್ಯಾಂಟಿನ್, ಮನೋರಂಜನೆಗೆ ಟಿ.ವಿ, ಪ್ರತ್ಯೆಕ ಶೌಚಾಲಯ, 5 ಬಸ್ಸುಗಳು ನಿಲ್ಲುವ ಪ್ಲಾಟ್‌ಪಾರ್ಮ, 3 ಮಳಿಗೆ ಗಳಿರುವ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ಎಇಇ ಅಣ್ಣಪ್ಪ, ಉಪಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಮಹಿಪಾಲ್, ಸುರಪುರ ಘಟಕ ವ್ಯವಸ್ಥಾಪಕ ಜಯವಂತ, ಮುಖಂಡರಾದ ನಾಗಣ್ಣ ದಂಡಿನ್, ಸೂಲಪ್ಪ ಕಮತಗಿ, ಅನೀಫ್ ಮಾಸ್ಟರ್, ಗ್ರಾಪಂ ಅಧ್ಯಕ್ಷ ಧೀರಪ್ಪ ರಾಠೊಡ, ಅಡಿವೆಪ್ಪ ಭಂಗಿ ವೇದಿಕೆ ಮೇಲಿದ್ದರು.
ಪಿಎಸ್‌ಐ ಮಾನಪ್ಪ ಯಕ್ಷಂತಿ, ಅರ್ಚಕ ರಾಘವೇಂದ್ರ ಆಚಾರ್ಯ, ನಿಂಗಪ್ಪ ದೊರಿ, ಉಮರ್ ಚೌದ್ರಿ, ಶಾಂತಪ್ಪ ಮೇಸ್ತಕ, ನಾಗರಾಜ ಜೂಗುರ, ಸುರೇಶ ನಾಯಕ, ಬಸವರಾಜ ದೇಸಾಯಿ, ಅಮರೇಶ ಕೋಳುರ, ಹಣಮೇಶ ಕುಲಕರ್ಣಿ, ಕೆ.ಪಿ ಮನೋಹರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಘಟಕ ವ್ಯವಸ್ಥಾಪಕ ಜಯವಂತ ಸ್ವಾಗತಿಸಿದರು, ಯಮನಪ್ಪ ಜಂಜಿನಗಡ್ಡಿ ನಿರೂಪಿಸಿದರು, ಚಿದಂಬರ ದೇಸಾಯಿ ವಂದಿಸಿದರು.