Advertisement

ಬಸವ ಜ್ಯೋತಿ ಯಾತ್ರೆಗೆ ಚಾಲನೆ

11:46 AM Jan 09, 2018 | |

ಬೀದರ: ವಚನ ಸಾಹಿತ್ಯ ಸಂರಕ್ಷಣೆಗಾಗಿ ಪವಿತ್ರ ಕ್ಷೇತ್ರ ಬಸವಗಿರಿಯಲ್ಲಿ ಜ.29 ರಿಂದ ಮೂರು ದಿನಗಳ ಕಾಲ ಜರುಗಲಿರುವ ವಚನ ವಿಜಯೋತ್ಸವದ ಪ್ರಚಾರಾರ್ಥ ಸಂಚರಿಸಲಿರುವ ಬಸವ ಜ್ಯೋತಿ ಯಾತ್ರೆಗೆ ನಗರದ ಶರಣ ಉದ್ಯಾನದಲ್ಲಿ ಚಾಲನೆ ನೀಡಲಾಯಿತು.

Advertisement

ಜಿಲ್ಲೆಯ ಐದು ತಾಲೂಕುಗಳಲ್ಲಿ ಸಂಚರಿಸಲಿರುವ ರಥಗಳಿಗೆ ಅಕ್ಕ ಅನ್ನಪೂರ್ಣತಾಯಿ, ಗುರುನಾಥ ಕೊಳ್ಳೂರು, ಸ್ವಾಗತ ಸಮಿತಿ ಅಧ್ಯಕ್ಷ ನೀಲಮ್ಮ ರೂಗನ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ನೌಕರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಉದ್ಯಮಿ ಜಯರಾಜ ಖಂಡ್ರೆ ಅವರು ಗುರುಪೂಜೆ ನೆರವೇರಿಸಿ ಷಟ್‌ಸ್ಥಲ ಧ್ವಜ ತೋರಿಸುವ ಮೂಲಕ ಜ್ಯೋತಿಯಾತ್ರೆಗೆ ಚಾಲನೆ ನೀಡಿದರು.

ಈ ವೇಳೆ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರ ಅನುಭಾವದ ಮೂಸೆಯಲ್ಲಿ ಮೂಡಿ ಬಂದ ವಚನಗಳು ವಿಶ್ವ ಅನುಭಾವ ಲೋಕದ ಅನರ್ಘ್ಯ ರತ್ನಗಳು. ಮಾನವ ಕುಲದ ಬದುಕನ್ನು ಕಟ್ಟಿಕೊಡುವ ಸೂತ್ರ ವಚನಗಳಲ್ಲಿದೆ. ಮಾನವರೆಲ್ಲ ಸಮಾನರು ಎಂದು ಸಾರಿದ ಶರಣರಿಗೆ ಅಂದು ಎಳೆಹೂಟೆ ಶಿಕ್ಷೆ ನೀಡಲಾಯಿತು. ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು. ಇಂಥಹ ಅಮೂಲ್ಯ ವಚನ ಸಾಹಿತ್ಯ ನಾಶಕ್ಕೆ ರಾಜ್ಯಶಾಹಿ, ಪುರೋಹಿತ ಶಾಹಿಗಳು ಮುಂದಾದಾಗ ಶರಣರು ತಮ್ಮ ಪ್ರಾಣ ಬಲಿದಾನ ಕೊಟ್ಟು ವಚನ ಸಾಹಿತ್ಯವನ್ನು ಜಗ ಬದುಕಲಿ-ಜನ ಬದುಕಲಿ ಎಂದು ಉಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಭೂಮಿಯಲ್ಲಿ ಬಿದ್ದ ಬೀಜ ವ್ಯರ್ಥವಾಗದು, ಮುಂದಿನ ಫಲದೊಳಗೆ ಅರಸಿಕೋ ಎಂಬಂತೆ ವಚನಗಳು ಮುಂದಿನ ಜನಾಂಗಕ್ಕೆ ದಾರಿದೀಪವಾಗಿ ಸಮಾನತೆಯ ಕೇತನ ಬಾನೆತ್ತರಕ್ಕೇರುವುದೆಂಬ ಸದಾಶಯದಿಂದ ಅಂದು ಅನೇಕ ಶರಣರು ವಚನಗಳ ಸಂರಕ್ಷಣೆಗಾಗಿ ಪ್ರಾಣಾರ್ಪಣೆಗೈದರು. ತನ್ನಿಮಿತ್ತವಾಗಿ ಹಮ್ಮಿಕೊಳ್ಳಲಾದ ವಚನ ವಿಜಯೋತ್ಸವದ ಪ್ರಚಾರಾರ್ಥ ಐದು ವಚನರಥಗಳು ಭಾಲ್ಕಿ, ಬೀದರ, ಔರಾದ, ಹುಮನಾಬಾದ ಮತ್ತು ಬಸವಕಲ್ಯಾಣ ತಾಲೂಕುಗಳಲ್ಲಿ ಕ್ರಮವಾಗಿ ಪ್ರಭು ದೇವರು, ಸಿದ್ಧರಾಮ-ಶರಣಪ್ಪ ಚಿಮಕೋಡೆ, ಚನ್ನಬಸವಣ್ಣ- ಶೋಭಾತಾಯಿ, ಚನ್ನಬಸಪ್ಪ ವಡ್ಡನಕೇರಿ ಮತ್ತು ಬಸವರಾಜ ರುದ್ರವಾಡಿಯವರ ನೇತೃತ್ವದಲ್ಲಿ ಸಂಚರಿಸಲಿವೆ ಎಂದು ತಿಳಿಸಿದರು.

21 ದಿನಗಳಲ್ಲಿ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಹಾಗೂ ಗಡಿರಾಜ್ಯ, ಗಡಿ ಜಿಲ್ಲೆಗಳಲ್ಲೂ ಸುತ್ತಾಡಿ ತತ್ವ ಪ್ರಸಾರಗೈಯಲಿದ್ದು, ಈ ಸಲ ಬೀದರ ನಗರದ 30 ಬಡಾವಣೆಗಳಲ್ಲಿ ಬಸವಜ್ಯೋತಿ ಕಾರ್ಯಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ಡಾ| ಶೈಲೇಂದ್ರ ಬೆಲ್ದಾಳೆ, ಚರಜಂಗಮ ಸಿದ್ರಾಮಪ್ಪ ಕಪಲಾಪುರೆ, ಸಿ.ಎಸ್‌. ಪಾಟೀಲ, ಚಂದ್ರಶೇಖರ ಹೆಬ್ಟಾಳೆ, ವಿರುಪಾಕ್ಷ ಗಾದಗಿ, ಚಂದ್ರಕಾಂತ ಮಿರ್ಚೆ, ಸಿ.ಎಸ್‌. ಗಣಾಚಾರಿ, ರಾಜಕುಮಾರ ಪಾಟೀಲ, ಡಾ| ಸಭಾಷ ಬಶಟ್ಟಿ, ಅಮೃತ ಚಿಮಕೊಡ, ಶರಣಪ್ಪ ಪಾಟೀಲ, ಬಾಬುರಾವ್‌ ಬಿರಾದಾರ, ಪ್ರಭುಲಿಂಗ ಸಾರಂಗಮಠ, ಕಾಶಿನಾಥ ಜನವಾಡಕರ, ಬಪ್ಪಣ್ಣ ಹುಮನಾಬಾದ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next