ಬಂಟ್ವಾಳ (ಡಾ| ಎಫ್.ಎಚ್. ಒಡೆಯರ್ ವೇದಿಕೆ): ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಡಿ. 7 ರಂದು ಬೆಳಗ್ಗೆ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಬಂಟ್ವಾಳ ತಾಲೂಕು 19ನೇ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣ, ಕನ್ನಡದ ಕೆಲಸದಲ್ಲಿ ತುಳುವರು ಮುಂದಿದ್ದಾರೆ. ನಮ್ಮ ಮಾತೃ ಭಾಷೆ ತುಳು ಆದರೂ ನಮ್ಮೆಲ್ಲ ಶೈಕ್ಷಣಿಕ ವ್ಯವಸ್ಥೆ ಕನ್ನಡದಲ್ಲಿದ್ದು, ಕನ್ನಡಿಗರು/ತುಳುವರು ಎಂಬ ಹೆಮ್ಮೆ ನಮ್ಮದಾಗಿದೆ. ನಮಗೆ ಭಾಷೆಯ ಬಗ್ಗೆ ಘರ್ಷಣೆ ಇಲ್ಲ. ನಾವು ಎಲ್ಲವನ್ನು ಕಲಿಯಬೇಕು-ತಿಳಿಯಬೇಕು ಎಂಬುದೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಜವಾದ ಸಂದೇಶವಾಗಿದೆ ಎಂದರು.
ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕನ್ನಡ ಧ್ವಜಾರೋಹಣವನ್ನು ಮಾಡಿ, ಫರಂಗಿಪೇಟೆ ಇಂದು ನಾಡಿನ ಗೌರವಾನ್ವಿತ ಸ್ಥಾನಮಾನವನ್ನು ಸಾಹಿತ್ಯ ಸಮ್ಮೇಳನದ ಮೂಲಕ ಪಡೆಯುವಂತಾಗಿದೆ. ಇದೆಲ್ಲ ನಮ್ಮ ಸೌಭಾಗ್ಯ ಎಂದರು.
ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಕುಮಾರ್ ಪೂಂಜ, ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ, ಉದ್ಯಮಿ ಎಸ್. ಮಹಮ್ಮದ್, ಸಾಮಾಜಿಕ ಸೇವಾಕರ್ತ ಪಿ.ಎ. ರಹೀಂ, ಗಣ್ಯರಾದ ಸದಾಶಿವ ಪೇರ್ಲಬೈಲು, ಪಲ್ಲವಿ ಕಾರಂತ, ಅಬ್ದುಲ್ ರಹಿಮಾನ್ ಡಿ.ಬಿ., ಜಯಾನಂದ ಪೆರಾಜೆ, ಮಹಾಬಲೇಶ್ವರ ಹೆಬ್ಟಾರ್, ಜಗದೀಶ ರೈ ಬಿ., ಕೆ.ಆರ್. ದೇವದಾಸ್, ವಿ.ಸು. ಭಟ್, ಕೃಷ್ಣ ಶರ್ಮ, ಬಿ.ಎಂ. ತುಂಬೆ, ಸುಜಾತಾ ಸಹಿತ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧ್ವಜಾರೋಹಣ ಬಳಿಕ ನಾಡಗೀತೆ ಹಾಡಲಾಯಿತು. ಎಲ್ಲರಿಗೂ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮನಸ್ಸು ಒಂದಾಗಿಸಲಿ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ ಮಾಡಿ ಮಾತನಾಡಿ, ಕನ್ನಡದ ಕುವರರಾದ ಜನತೆಗೆ ಇಂದು ಸ್ಮರಣೀಯ ದಿನವಾಗಿದೆ. ಸಮ್ಮೇಳನ ನಮ್ಮ ಮನಸ್ಸುಗಳನ್ನು ಒಂದಾಗಿಸಲಿ. ಕನ್ನಡವನ್ನು ಕಟ್ಟುವುದು ಪ್ರೀತಿ ವಿಶ್ವಾಸದ ನಡೆಯ ಮೂಲಕ ಬೆಸೆಯುವುದು ಹೊಂದಾಣಿಕೆ ಕೊಡುಕೊಳ್ಳುವಿಕೆಯಿಂದ ಎಂಬ ನಂಬಿಕೆ ನಮ್ಮದಾಗಿದೆ. ನಾವು ನೈಜ ಪ್ರೀತಿಯಿಂದ ಎಲ್ಲ ಭಾಷೆಯನ್ನು ಕಲಿಯುವ, ತಿಳಿಯುವ, ಓದುವ ಮೂಲಕ ಬೆಳೆದು ಬಂದಿದ್ದೇವೆ ಎಂದರು.
ರಾಜಾ ಬಂಟ್ವಾಳ