ರಬಕವಿ ಬನಹಟ್ಟಿ: ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ನೂರು ಹಾಸಿಗೆಯುಳ್ಳ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರಿಯಾದ ನಿವೇಶನ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಶನಿವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಅಂಬ್ಯುಲನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಗೆ ಹಲವಾರು ಅಂಬ್ಯುಲನ್ಸ್ ಬಂದಿದ್ದು, ಅವುಗಳಲ್ಲಿ ರಬಕವಿ-ಬನಹಟ್ಟಿ ತಾಲ್ಲೂಕಿಗೂ ಕೂಡಾ ನೀಡಲಾಗಿದೆ. ಇದು ಅತ್ಯಾಧುನಿಕ ಅಂಬ್ಯುಲನ್ಸ್ ಇದ್ದು, 24 ಗಂಟೆಗಳ ಕಾಲ ಸೇವೆಯಲ್ಲಿ ಇರುತ್ತದೆ. ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಆದರೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿದ ಕೋವಿಡ್ ವಾರ್ಡ್ ಸಜ್ಜಾಗಿದೆ.
ಆದರೂ ಜನರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಜನರು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪರಪ್ಪ ಹಟ್ಟಿ, ಧರೆಪ್ಪ ಉಳ್ಳಾಗಡ್ಡಿ, ಡಾ.ಎನ್.ಎಂ.ನದಾಫ್, ಡಾ.ವೀರೇಶ ಹುಡೇದಮನಿ, ಪವಿತ್ರಾ ತುಕ್ಕನ್ನವರ, ಚಿದಾನಂದ ಹೊರಟ್ಟಿ, ಅರುಣ ಬುದ್ನಿ, ಶ್ರೀಶೈಲ ಆಲಗೂರ, ಬಸವರಾಜ ಪಟ್ಟಣಶೆಟ್ಟಿ, ಅಪ್ಪಾಜಿ ಹೂಗಾರ, ಸುವರ್ಣಾ ಕೊಪ್ಪದ, ಡಾ.ಎ.ಎನ್.ತಾಂಬೋಳಿ ಸೇರಿದಂತೆ ಅನೇಕರು ಇದ್ದರು.