Advertisement

ಕೃಷಿ ಸಮಗ್ರ ಮಾಹಿತಿ ಒದಗಿಸುವ ವಾಹನಕ್ಕೆ ಚಾಲನೆ

02:57 PM Jun 02, 2022 | Team Udayavani |

ಸೇಡಂ: ಮುಂಗಾರು ಆರಂಭವಾಗುತ್ತಿದ್ದು, ಕೃಷಿಕರಿಗೆ ಸಹಾಯವಾಗಲು ಮತ್ತು ರೈತರಿಗೆ ಬೇಕಾಗುವ ಸಮಗ್ರ ಮಾಹಿತಿ ಒದಗಿಸಲು ಕೃಷಿ ಸಂಜೀವಿನಿ ವಾಹನದ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಎಲ್‌. ಹಂಪಣ್ಣ ಹೇಳಿದರು.

Advertisement

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಆವರಣದಲ್ಲಿ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ರೈತರಿಗೆ ಸಿಗುವ ಯೋಜನೆಗಳು, ಮಣ್ಣಿನ ಪರೀಕ್ಷೆ, ಕೀಟ ನಾಶಕ ಬಳಕೆ, ಬೆಳೆ ನೆಟೆ ಹೋಗುವುದು ಸೇರಿದಂತೆ ಎಲ್ಲದರ ಬಗ್ಗೆ ವಾಹನ ಮೂಲಕ ಅರಿವು ಮೂಡಿಸಲಾಗುತ್ತಿದೆ. ವಾಹನದಲ್ಲಿ ಒಬ್ಬ ಕೃಷಿ ತಂತ್ರಜ್ಞ ಇರಲಿದ್ದು, ವಾಹನ ತಮ್ಮ ಗ್ರಾಮಕ್ಕೆ ಬಂದಾಗ ಗ್ರಾಮದ ರೈತರು ಅವರ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಭಿತ್ತಿ ಪತ್ರವನ್ನು ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.

ವಾಹನವು ಜೂನ್‌ 1 ಮತ್ತು 2ರಂದು ಆಡಕಿ ಭಾಗದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ 3ರಂದು ಸೇಡಂನಲ್ಲಿ ಈ ಕುರಿತು ಕಾರ್ಯಕ್ರಮ ನಡೆಸಲಾಗುತ್ತದೆ. ಜೂ. 4 ಮತ್ತು 5ರಂದು ಕೋಡ್ಲಾ ಭಾಗದ ಗ್ರಾಮಗಳಲ್ಲಿ ಕೃಷಿ ಸಂಜೀವಿನಿ ವಾಹನ ಸಂಚರಿಸಿ 6ರಂದು ಕೋಡ್ಲಾ ಗ್ರಾಮದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಯೋಜನೆಯ ಲಾಭವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ರೈತ ಸಮಾಜದ ಕಾರ್ಯದರ್ಶಿ ಗಣಪತರಾವ್‌ ಚಿಮ್ಮನಚೋಡಕರ್‌ ಮಾತನಾಡಿ, ಒಂದು ಇಲಾಖೆ ಸುಸೂತ್ರವಾಗಿ ಮುನ್ನಡೆಯಬೇಕಾದರೆ ಒಬ್ಬ ಉತ್ತಮ ಅಧಿ ಕಾರಿ ಬೇಕು. ಅದರಂತೆ ಕೃಷಿ ಅಧಿಕಾರಿ ಹಂಪಣ್ಣ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮೊದಲೆಲ್ಲ ಬಹಳಷ್ಟು ಹೋರಾಟಗಳು ನಡೆಯುತ್ತಿದ್ದವು ಆದರೆ ಇದೀಗ ಬಿತ್ತನೆ ಬೀಜ, ಗೊಬ್ಬರ ಯಾವ ಕೊರತೆ ಇಲ್ಲದಂತೆ ಅವರು ನೋಡಿಕೊಳ್ಳುತ್ತಿದ್ದಾರೆ ಎಂದರು.

ಈ ವೇಳೆ ರೈತ ಸಮಾಜದ ಸದಸ್ಯ ರಾಮಯ್ಯ ಪೂಜಾರಿ, ಕೃಷಿ ಅಧಿಕಾರಿಗಳಾದ ಪ್ರಕಾಶ ರಾಠೊಡ, ಬಸವರಾಜ, ಅನಂತರೆಡ್ಡಿ, ಪ್ರಮುಖರಾದ ಪಂಚಾಕ್ಷರಿ ಸ್ವಾಮಿ, ಜಗನ್ನಾಥ ಪಾಟೀಲ ಹಾಗೂ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next