ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌ನ 100 ಹೊಸ ಶಾಖೆಗಳು, 100 ಎಟಿಎಂಗಳು ಉದ್ಘಾಟನೆ ಜೊತೆಗೆ 100 ಗ್ರಾಮಗಳಲ್ಲಿನ ಶಾಖೆಗಳನ್ನು ಡಿಜಿಟಲ್ ಬ್ಯಾಂಕುಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದರು.
ನಗರದ ವಿಜಯ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂರು ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ದೇಶಾದ್ಯಂತ ಹೆಚ್ಚು ಶಾಖೆಗಳನ್ನು ಹಾಗೂ ಎಟಿಎಂಗಳನ್ನು ತೆರೆಯುವುದರಿಂದ ಗ್ರಾಹಕರು ಬ್ಯಾಂಕ್ ಸೇವೆಗಳನ್ನು ಪಡೆಯಲು ಅನುಕೂಲವಾಗಲಿವೆ.
ಡಿಜಿಟಲ್ ಬ್ಯಾಂಕ್‌ಗಳ ಸಂಖ್ಯೆ ಹೆಚ್ಚುವುದರಿಂದ ಸುಲಭವಾಗಿ ಹಾಗೂ ಶೀಘ್ರವಾಗಿ ವ್ಯವಹಾರ ನಡೆಸಲು ಸಹಕಾರಿಯಾಗಲಿವೆ. 100 ಗ್ರಾಮಗಳಲ್ಲಿನ ಪ್ರಸ್ತುತ ಶಾಖೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವುದರಿಂದ ಆ ಪ್ರದೇಶದ ಜನತೆಗೆ ತಂತ್ರಜ್ಞಾನ ಬಳಕೆ ಬಗ್ಗೆ ತಿಳಿವಳಿಕೆ ಮೂಡಲಿದೆ ಎಂದರು.
ಬ್ಯಾಂಕುಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಆರ್‌ಬಿಐ ಮೂಲಕ ಡಿಜಿಟಲ್ ವ್ಯವಹಾರದ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದೆ. ಹೆಚ್ಚೆಚ್ಚು ಜನರು ಡಿಜಿಟಲ್ ವ್ಯವಹಾರ ನಡೆಸಲು ಪ್ರೇರೆಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ದೇಶಾದ್ಯಂತ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ ಬಳಕೆ ವ್ಯಾಪಕವಾಗಿ ಹೆಚ್ಚಾಗಿದೆ ಎಂದರು.
ವಿಜಯ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ಕಿಶೋರ್ ಸಾನ್ಸಿ ಮಾತನಾಡಿ, ಬ್ಯಾಂಕಿನ ನೂತನ ಶಾಖೆಗಳನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಉದ್ಘಾಟಿಸಿರುವುದು ಬಹಳ ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ವಿಜಯ ಬ್ಯಾಂಕ್ ಪ.ಜಾತಿ, ಪ.ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 100 ಬಡ ಮಕ್ಕಳನ್ನು ದತ್ತು ಪಡೆಯಿತು. ಐದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಬ್ಯಾಂಕ್ ನೀಡುವುದಾಗಿ ಅವರು ಘೋಷಿಸಿದರು.