ವಾಡಿ: ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರ ಸಂಕಟದಲ್ಲಿರುವ ಪಟ್ಟಣದ ವಿವಿಧ ಬಡಾವಣೆಗಳ ಜನರ ಅನುಕೂಲಕ್ಕಾಗಿ ಕೊಳವೆಬಾವಿ (ಬೋರ್‌ವೆಲ್)ಗಳು ಮಂಜೂರಾಗಿದ್ದು, ಕೊನೆಗೂ ಪುರಸಭೆ ಅಧಿಕಾರಿಗಳು ಎಚ್ಚೆತುಕೊಂಡು ಬೋರ್‌ವೆಲ್ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಪುರಸಭೆಯ ಒಟ್ಟು 23 ವಾರ್ಡ್‌ಗಳ ಜಲಮೂಲಗಳಾದ ಕಾಗಿಣಾ ಮತ್ತು ಭೀಮಾ ನದಿಗಳಲ್ಲಿ ನೀರಿಲ್ಲದೆ ಜನ-ಜಾನುವಾರುಗಳು ತತ್ತರಿಸಿ ಹೋಗಿವೆ. ಕೆಟ್ಟ ಬೋರ್‌ವೆಲ್ಗಳ ದುರಸ್ತಿ ಹಾಗೂ ಹೊಸ ಬೋರ್‌ವೆಲ್ಗಳ ಅಳವಡಿಕೆಗೆ ಬೇಡಿಕೆ ಹೆಚ್ಚಾಗಿತ್ತು. ಎರಡು ಸಲ ಬೆಣ್ಣೆತೋರಾ ಜಲಾಶಯದಿಂದ 0.025 ಟಿಎಂಸಿ ಅಡಿ ನೀರು ಕಾಗಿಣಾ ನದಿಗೆ ಹರಿಬಿಟ್ಟರೂ ಖಾಲಿ ಕೊಡಗಳ ಪ್ರದರ್ಶನ ಮುಂದುವರಿದಿದೆ. ದೂರದ ಪ್ರದೇಶಗಳಿಂದ ಜನರು ನೀರು ತರುತ್ತಿದ್ದಾರೆ. ಕೆಲವರು ನೀರು ಖರೀದಿಸುತ್ತಿದ್ದಾರೆ. ಎರಡು ನದಿಗಳಿದ್ದರೂ ನೀರಿಗಾಗಿ ಪರದಾಟ ತಪ್ಪುತ್ತಿಲ್ಲವಲ್ಲ ಎಂಬ ಕೊರಗು ಸ್ಥಳೀಯರದ್ದಾಗಿದೆ.
ಬೇಸಿಗೆ ಕೊನೆಯಾಗುವ ಗಳಿಗೆಯಲ್ಲಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕೇರ್‌ಸಿಟಿ ಅನುದಾನದಡಿ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಕುಡಿಯುವ ನೀರಿನ ವಿಶೇಷ ಅನುದಾನ 16 ಲಕ್ಷ ರೂ. ವೆಚ್ಚದಲ್ಲಿ ಮೂರು ಬೋರ್‌ವೆಲ್ ಮಂಜೂರಾಗಿದ್ದು, ಜಲ ತಜ್ಞರ ಸಲಹೆಯಂತೆ ಒಟ್ಟು ಐದು ಬೋರ್‌ವೆಲ್ ಕೊರೆಸಲಾಗುತ್ತಿದೆ. ವಾರ್ಡ್ 1ರ ಬಸವನಕಣಿ, ವಾರ್ಡ್ 16 ಭೀಮನಗರ-ಮರಾಠಾಗಲ್ಲಿ, ವಾರ್ಡ್ 23 ಇಂದ್ರಾನಗರ, ವಾರ್ಡ್ 6 ಜಾಂಬವೀರ ಕಾಲೋನಿ, ವಾರ್ಡ್ 5ರಲ್ಲಿ ಕೊಳವೆಬಾವಿ ಕೊರೆಸಲು ಸ್ಥಳ ಗುರುತಿಸಲಾಗಿದೆ. ಬಸವನಕಣಿ ಮತ್ತು ಭೀಮನಗರದಲ್ಲಿ ಕೊರೆಸಲಾದ ಮೂರು ಬೋರ್‌ವೆಲ್ಗಳಲ್ಲಿ ಅಂತರ್ಜಲ ಜಿನುಗಿದ್ದು, ಬಡಾವಣೆ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಆರಂಭದಲ್ಲಿ ಐದು ಬೋರ್‌ವೆಲ್ ಕೊರೆಸಲಾಗುತ್ತಿದೆ. ಕೆಟ್ಟು ನಿಂತಿರುವ ಬೋರ್‌ವೆಲ್ಗಳ ದುರಸ್ತಿ ಜತೆಗೆ ಹೊಸ ಮೋಟರ್ ಅಳವಡಿಸಲಾಗುತ್ತಿದೆ. ಅಗತ್ಯವಿರುವ ಇತರ ಬಡಾವಣೆಗಳಿಗೂ ಎರಡನೇ ಹಂತದಲ್ಲಿ ಬೋರ್‌ವೆಲ್ ಕೊರೆಸಲಾಗುವುದು. ಅಲ್ಲದೆ ಈಗಾಗಲೇ ಕೊರೆಸಲಾದ ಹೊಸ ಬೋರ್‌ವೆಲ್ಗಳಿಂದ ಉತ್ತಮ ಪ್ರಮಾಣದಲ್ಲಿ ನೀರಿನ ಸೆಲೆ ಸಿಕ್ಕಿದೆ. ಆ ಕೊಳವೆಬಾವಿಗಳಿಗೆ ಸಣ್ಣ ನೀರು ಸರಬರಾಜು ಘಟಕಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸವಿತಾ ರೇಣುಕಾ ಹಾಗೂ ಕಿರಿಯ ಅಭಿಯಂತರ ಅಶೋಕ ಪುಟ್ಫಾಕ್ ತಿಳಿಸಿದ್ದಾರೆ.