ಪರಿಸರ ಮಾಲಿನ್ಯ ದಿನೇದಿನೇ ಹೆಚ್ಚಾಗುತ್ತಿದೆ ಎಂದು ಪ್ರತಿಯೊಬ್ಬರೂ ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾಲಿನ್ಯ ತಡೆಗಟ್ಟುವಲ್ಲಿ ಯಾರೂ ಒಂದು ಹೆಜ್ಜೆ ಕೂಡ ಇಡಲಾರರು. ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹನ ಬೇಕೇ ಬೇಕು ಅದು ಈಗಿನ ಟ್ರೆಂಡ್. ಇದರಿಂದ ಪರಿಸರ ಮಾತ್ರ ಹಾಳಾಗುತ್ತದೆ ಎಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಯಾಕೆಂದರೆ ಹೆಚ್ಚಾಗಿ ವಾಹನಗಳಲ್ಲೇ ಓಡಾಡುವುದರಿಂದ ನಮ್ಮ ಆರೋಗ್ಯವೂ ಕೆಡುತ್ತದೆ.
ಅಂಗಾಂಗಗಳಿಗೆ ಸರಿಯಾದ ವ್ಯಾಯಾಮ ನಮ್ಮ ಪಕ್ಕದ ಮನೆಗೆ ಹೋಗಬೇಕಾದರೂ
ನಾವು ಬೈಕ್ ಅಥವಾ ಕಾರಿನಲ್ಲಿ ಓಡಾಡುತ್ತೇವೆ. ಇದರಿಂದ ನಮ್ಮ ಶರೀರಕ್ಕೆ ವ್ಯಾಯಾಮ ಸಿಗುವುದಿಲ್ಲ. ಅದರ ಬದಲು ಸೈಕಲ್ ಬಳಕೆ ಮಾಡಿದರೆ ಹೇಗೆ? ಹೌದು ಸೈಕಲ್ ತುಳಿಯುವುದರಿಂದ ನಮ್ಮ ಅಂಗಾಂಗಗಳಿಗೆ ಸರಿಯಾದ ವ್ಯಾಯಾಮ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸೈಕ್ಲಿಂಗ್ ಮಾಡಲು ಮುಗಿಬೀಳುತ್ತಿದ್ದಾರೆ.
ಹೆಚ್ಚಿನ ಕಡೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸೈಕ್ಲಿಂಗ್ ರ್ಯಾಲಿ ಕೂಡ ನಡೆಸುತ್ತಿದ್ದಾರೆ. ಸೈಕ್ಲಿಂಗ್ ಬಳಕೆಯಿಂದ ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಮಾತ್ರವಲ್ಲ ದೇಹಾರೋಗ್ಯವನ್ನೂ ಕಾಪಾಡಬಹುದು. ದೇಹ ತೆಳಗಾಗಿಸಲು ಜಿಮ್ ಸೆಂಟರ್ ಅಂತ ಕಾಲ ಕಳೆಯಬೇಕಿಲ್ಲ. ದಿನಕೊಮ್ಮೆಯಾದರೂ ಸೈಕ್ಲಿಂಗ್ ಮಾಡಿದರೆ ಸಾಕು. ದಿನ ನಿತ್ಯ ಒಂದು ಹೊತ್ತಾದರೂ ಪೆಡ್ಲಿಂಗ್ ಮಾಡಿದರೆ ಚರ್ಮಕ್ಕೆ ತಾಜಾ ಆಕ್ಸಿಜನ್ ದೊರೆತು ನಮಗೆ ಹೊಸ ಹುರುಪನ್ನು ನೀಡುತ್ತದೆ.
ಸೈಕ್ಲಿಂಗ್ ಮಾಡುವುದರಿಂದ ದೇಹ ದೃಢವಾಗುವುದು. ಪಾದಗಳು ಮತ್ತು ಸ್ನಾಯುಗಳ ಸಾಮರ್ಥ್ಯ ವೃದ್ಧಿಯಾಗುವುದು.
ಕ್ರಮವಾಗಿ ಸೈಕ್ಲಿಂಗ್ ಮಾಡುವುದರಿಂದ ಬೊಜ್ಜು ಮಧುಮೇಹ, ಅಧಿಕ ರಕ್ತದೊತ್ತಡ, ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತದೆ. ದಿನಕ್ಕೆ 20 ರಿಂದ 30 ನಿಮಿಷ ಸೈಕ್ಲಿಂಗ್ ಮಾಡಿದರೆ ನಿದ್ರಾಹೀನತೆಯನ್ನು ನಿವಾರಿಸಬಹುದು. ಅದಲ್ಲದೆ ನಮ್ಮ ಮನಸ್ಸಿಗೆ ಮನೋಲ್ಲಾಸ ನೀಡಿ ದಿನವಿಡೀ ಲವಲವಿಕೆಯಿಂದ ಇರಬಹುದು.
ಬೆಳಗ್ಗಿನ ಹೊತ್ತು ಈ ಅಭ್ಯಾಸ ಬೆಳೆಸಿಕೊಳ್ಳುವುದು ಮತ್ತು ಉತ್ತಮ. ಮನಸ್ಸು ಉಲ್ಲಾಸಗೊಳಿಸಲು ಇದರಿಂದ ಸಾಧ್ಯವಾಗುತ್ತದೆ ಮತ್ತು ದಿನ ಪೂರ್ತಿ ಲವಲವಿಕೆಯಿಂದಿರಲೂ ಇದು ಪೂರಕವಾಗುವುದು.
ಕಾರ್ತಿಕ್ ಚಿತ್ರಾಪುರ