ದಾವಣಗೆರೆ: ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಹೊಂದುವ ಜೊತೆಗೆ ವಾಹನ ಚಲಾಯಿಸುವಾಗ ಐಎಸ್‌ಐ ಚಿಹ್ನೆವುಳ್ಳ ಪೂರ್ಣ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಪ್ರಾಣ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಹೇಳಿದರು.
ನಗರದ ಬಡಾವಣೆ ಠಾಣೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು, ಯುವಕ, ಯುವತಿಯರು ಸಂಚಾರಿ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಇತರರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಾವೇ ಕಾನೂನು ಉಲ್ಲಂಘಿಸುತ್ತ ಏನಾದರೂ ಪ್ರಾಣಹಾನಿ ಆದರೆ ತುಂಬಲಾರದ ನಷ್ಟ ಉಂಟಾಗುತ್ತದೆ. ಪೋಷಕರು ನಿಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ, ಸುರಕ್ಷಿತ ಹೆಲ್ಮೆಟ್ ಧರಿಸಿ ನಿಧಾನವಾಗಿ ವಾಹನ ಚಲಾಯಿಸಬೇಕು ಎಂದರು.
ದೇಶದಲ್ಲಿ ವರ್ಷಕ್ಕೆ 1.50 ಲಕ್ಷಕ್ಕೂ ಅಧಿಕ ಜನರು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದಾರೆ. ಈ ಅಂಕಿ ಅಂಶ ಪ್ರಕಾರ ದಿನಕ್ಕೆ 400 ಮಂದಿ ಸಾಯುತ್ತಿದ್ದಾರೆ. ವರ್ಷಕ್ಕೆ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಜನರು ದ್ವಿಚಕ್ರ ವಾಹನ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಶೇ.90 ರಷ್ಟು ಜನ 40 ವರ್ಷದೊಳಗಿನವರು. ಯುವಕರು ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ ಎಂದು ತಿಳಿಸಿದರು.
ಅಪಘಾತ ಸಂಭವಿಸಲು ಮುಖ್ಯವಾಗಿ ಚಾಲಕನ ನಿರ್ಲಕ್ಷ್ಯತನ, ವಾಹನದ ತಾಂತ್ರಿಕ ತೊಂದರೆ, ಮರ-ಗಿಡ ರಸ್ತೆಯಲ್ಲಿ ಬಿದ್ದು, ರಸ್ತೆ ಗುಂಡಿಗಳು, ಪ್ರಾಕೃತಿಕ ವಿಕೋಪಗಳು ಕಾರಣ. ಕೈ-ಕಾಲು ಮುರಿದರೆ ಪ್ರಾಣ ಉಳಿಯುತ್ತದೆ. ಆದರೆ, ಮನುಷ್ಯನ ಎದೆ ಮತ್ತು ತಲೆಗೆ ಪೆಟ್ಟು ಬಿದ್ದರೆ ಪ್ರಾಣ ಉಳಿಯುವುದೇ ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗಿರಬೇಕು. ನಿಯಮಗಳನ್ನು ಪಾಲಿಸುತ್ತಾ ಸುರಕ್ಷಿತ ಚಾಲನೆ ಮಾಡಬೇಕು ಎಂದರು.
ಕೇಂದ್ರ ವೃತ್ತ ನಿರೀಕ್ಷಕ ಇ.ಆನಂದ್, ನಗರ ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್, ಪಿಎಸ್‌ಐಗಳಾದ ಶೈಲಜಾ, ಲಕ್ಷ್ಮೀಪತಿ, ಆರ್‌ಟಿಒ ನಿರೀಕ್ಷಕ ಪಿ.ಎಂ. ಮಲ್ಲೇಶಪ್ಪ, ಶ್ರೀಕಾಂತ್, ದಾದಾಪೀರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಬಡಾವಣೆ ಪೊಲೀಸ್ ಠಾಣೆ ಮಾರ್ಗವಾಗಿ ಪಿ.ಬಿ.ರಸ್ತೆ, ಹಳೇ ಬಸ್‌ನಿಲ್ದಾಣ, ಅಶೋಕ ರಸ್ತೆ, ಜಯದೇವ ವೃತ್ತದ ಮೂಲಕ ಪುನಃ ಬಡಾವಣೆ ಪೊಲೀಸ್ ಠಾಣೆ ತಲುಪಿತು. ಎಂಎಸ್‌ಬಿ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಅರ್ಧ ಹೆಲ್ಮೆಟ್‌ಗೆ ವಾರದಲ್ಲೇ ಕಡಿವಾಣ…
ದಾವಣಗೆರೆಯಲ್ಲಿ ವಾಹನ ಸವಾರರು 100 ರೂ. ಕೊಟ್ಟು ಖರೀದಿಸುತ್ತಿರುವ ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್‌ಗಳನ್ನು ಬಳಸದಂತೆ ಕಡಿವಾಣ ಹಾಕಲಾಗುವುದು. ಕಡ್ಡಾಯವಾಗಿ ಐಎಸ್‌ಐ ಚಿಹ್ನೆವುಳ್ಳ ಪೂರ್ಣ ಪ್ರಮಾಣದ ಹೆಲ್ಮೆಟ್‌ಗಳನ್ನು ವಾಹನ ಸವಾರರು ಹಾಗೂ ಹಿಂಬದಿ ಸವಾರರು ಬಳಸುವಂತೆ ನಿರ್ದೇಶನ ಜಾರಿ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗುವುದು ಎಂದು ಎಎಸ್ಪಿ ಟಿ.ಜೆ. ಉದೇಶ್ ತಿಳಿಸಿದರು.