ಶಿರ್ವ: ಪಾಂಬೂರು ಪರಿಚಯ ಪ್ರತಿಷ್ಠಾನದ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯುವ ಪರಿಚಯ ರಂಗೋತ್ಸವ ಕಾರ್ಯಕ್ರಮಕ್ಕೆ ಉಡುಪಿ ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ| ಪಿ.ಬಿ. ಪ್ರಸನ್ನ ಫೆ.18 ರಂದು ಚಾಲನೆ ನೀಡಿದರು.
ಬಳಿಕ ಮಾತನಾಡಿ ಅನೇಕ ಸವಾಲುಗಳನ್ನೆದುರಿಸಿ ಗ್ರಾಮೀಣ ಪ್ರದೇಶದಲ್ಲಿ ಬಹುಭಾಷಿಕ ತಂಡಗಳಿಂದ ಸಾಪ್ತಾಹಿಕ ನಾಟಕಗಳನ್ನಿರಿಸಿ,ಪ್ರದರ್ಶನದ ಬಳಿಕ ಜನಸಾಮಾನ್ಯರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡುವ ಪರಿಚಯ ತಂಡದ ಶ್ರಮ ಸಾರ್ಥಕವಾಗಿದೆ.ಮುಂದೆಯೂ ಇದೇ ರೀತಿ ಧರ್ಮಾತೀತವಾಗಿ,ಜಾತ್ಯಾತೀತವಾಗಿ ನೋಡುಗರ ಮನಸ್ಸಿನಲ್ಲಿ ಸಂವಾದಗಳನ್ನು ಎಬ್ಬಿಸುವ ಪ್ರದರ್ಶನ ನಡೆಸುವ ಕಾರ್ಯ ಪರಿಚಯ ಸಂಸ್ಥೆಯಿಂದ ನಡೆಯಲಿ ಎಂದು ಹೆಳಿದರು.
ಪಾಂಬೂರು ಚರ್ಚ್‌ನ ಪ್ರಧಾನಧರ್ಮಗುರು ರೆ|ಫಾ|ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಿ ವಿವಿಧತೆಯಲ್ಲಿ ಏಕತೆಯೊಂದಿಗೆ ನಮ್ಮಲ್ಲಿ ಸ್ವಾರ್ಥ ಭಾವನೆಗಳು ದೂರವಾಗಿ ಒಗ್ಗಟ್ಟಿನ ಭಾವನೆ ಬೆಳೆಸಿಕೊಂಡು ಸಹಬಾಳ್ವೆಯೊಂದಿಗೆ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿ ಕೆನಡಾದಲ್ಲಿ ಸೇವಾನಿರತ ಧರ್ಮಗುರು ರೆ|ಫಾ| ಹೆನ್ರಿ ಆಳ್ವಾ ಮಾತನಾಡಿ ಗುರಿಯಿಲ್ಲದ ಜೀವನ ವ್ಯರ್ಥವಾಗಿದ್ದು,ಸಮಾಜದ ಒಳಿತಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ಕಾಣಿಕೆ ನೀಡಿದಲ್ಲಿ ಸಮಾಜದ ಅಭಿವೃದ್ಧಿಯಾಗಿ ಮಾನವೀಯತೆ ಬೆಳೆಯುತ್ತದೆ ಎಂದು ಹೇಳಿದರು. ಸಂಸ್ಥೆಯ ಆಡಳಿತ ವಿಶ್ವಸ್ಥ ಡಾ|ವಿನ್ಸೆಂಟ್ ಆಳ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ವಂದಿಸಿದರು. ಸದಸ್ಯೆ ಪ್ರಿಯಾಂಕಾ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಿತ್ರನಟಿ ಅಕ್ಷತಾ ಪಾಂಡವಪುರ ಅವರಿಂದ ಲೀಕ್‌ಔಟ್ ಆಪ್ತ ಕಥನ ರಂಗ ಪ್ರದರ್ಶನ ನಡೆಯಿತು.