Advertisement

ವಿಶ್ವ ಕವಿ ಅಡಿಗ ಸ್ಮಾರಕ ನಿರ್ಮಾಣಕ್ಕೆ ಚಾಲನೆ

10:59 PM Jul 12, 2019 | Team Udayavani |

ಕುಂದಾಪುರ/ಉಪ್ಪುಂದ: ನವ್ಯಸಾಹಿತ್ಯದ ಹರಿಕಾರ ವಿಶ್ವ ಶ್ರೇಷ್ಠ ಸಾಹಿತಿಗಳ ಸಾಲಿಗೆ ಸೇರಿರುವ ಶತಮಾನೋತ್ಸವ ಪೂರೈಸಿದ ಮೊಗೇರಿ ಎಂ. ಗೋಪಾಲಕೃಷ್ಣ ಅಡಿಗರ ಸ್ಮಾರಕ ನಿರ್ಮಾಣದ ಕನಸು ನನಸಾಗಲು ಚಾಲನೆ ದೊರೆತಿದೆ. ಕನ್ನಡ ಸಾರಸ್ವತ ಲೋಕಕ್ಕೆ ಧ್ರುವನಕ್ಷತ್ರದಂತೆ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚು ಹರಿಸಿದ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿರುವ ಅಡಿಗರು ಜನಿಸಿದ ಊರಿನಲ್ಲಿ ನಿರ್ಮಿಸಬೇಕೆಂದಿರುವ ಸ್ಮಾರಕ ನಿರ್ಮಾಣಕ್ಕೆ ಮುಹೂರ್ತ ಈವರೆಗೆ ಕೂಡಿ ಬಂದಿರಲಿಲ್ಲ.

Advertisement

ಸ್ಮರಣೆ ಇಲ್ಲ
ಅಡಿಗರು ಓಡಾಡಿದ, ಬರಹಗಳಿಗೆ ಪ್ರೇರಣೆ ಒದಗಿಸಿದ ಮಣ್ಣಿನಲ್ಲಿ ಅಡಿಗರನ್ನು ಸ್ಮರಿಸುವ ಕಾರ್ಯ ಇದುವರೆಗೆ ನಡೆದಿಲ್ಲ. ಒಂದಿಷ್ಟು ಸಾಹಿತಿಗಳು ಅವರ ಸಾಹಿತ್ಯವನ್ನು ಮೆಲುಕು ಹಾಕುವ ಕೆಲಸ ಮಾಡುತ್ತಿರುವುದು ಬಿಟ್ಟರೆ ಅವರು ಹುಟ್ಟಿ ಬೆಳೆದ ನೆಲವನ್ನು ಸಾಹಿತ್ಯ ಕ್ಷೇತ್ರವನ್ನಾಗಿಸುವ ಪ್ರಯತ್ನ ಕೈಗೂಡಲಿಲ್ಲ.

ವಾಚನಾಲಯ ಮಾತ್ರ
ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯ ಮೊಗೇರಿಯಲ್ಲಿ 1918ರ ಫೆ.18ರಂದು ಅಡಿಗರ ಜನನವಾಗಿತ್ತು. ಅವರು ಹುಟ್ಟಿದ ಮನೆ, ಓದಿದ ಶಾಲೆ, ವಾಚನಾಲಯ, ಈಜುತ್ತಿರುವ ಕೆರೆ, ಓದಿದ ಶಾಲೆ ಮೊಗೇರಿಯಲ್ಲಿ ಈಗಲೂ ಇದೆ. ತನ್ನ ಸಾಹಿತ್ಯದೊಂದಿಗೆ ಹುಟ್ಟೂರನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲುತ್ತಾದರೂ ಅಡಿಗರ ಊರಲ್ಲಿ ಅವರನ್ನು ಸ್ಮರಿಸುವ ಲಲಿತ ವಾಚನಾಲಯ ಬಿಟ್ಟರೆ ಮತ್ತೇನೂ ಇಲ್ಲ. ಅದೂ ಧೂಳು ತಿನ್ನುತ್ತಿದೆ.

ಶಾಸಕರ ಆಸಕ್ತಿ
ಶಾಸಕ ಬಿ.ಎಂ. ಸುಕುಮಾರ ಶೆಟ್ಟರು ಆಸಕ್ತಿ ವಹಿಸಿ ಅವರ ಸೂಚನೆಯ ಮೇರೆಗೆ ಕಂಬದಕೋಣೆ ಜೂನಿಯರ್‌ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸುನಿಲ್‌ ಪೂಜಾರಿ ಅವರು ಕಳೆದ ವರ್ಷ ಸಭೆ ನಡೆಸಿದ್ದರು. ನಂತರ ಜನಾರ್ದನ ಎಸ್‌. ಅವರ ಅಧ್ಯಕ್ಷತೆಯಲ್ಲಿ ಕೆರ್ಗಾಲ್‌ ಪಂ. ಅಧ್ಯಕ್ಷೆ, ಉಪಾಧ್ಯಕ್ಷ, ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿ, ತಾಲೂಕು ಕಸಾಪ ಅಧ್ಯಕ್ಷ ಸೇರಿದ ಸಭೆಯಲ್ಲಿ ಅಡಿಗ ಸ್ಮಾರಕವನ್ನು ಪಂಚಾಯತ್‌ ವ್ಯಾಪ್ತಿಯ ಸೂಕ್ತ ಜಾಗದಲ್ಲಿ ನಿರ್ಮಿಸಬೇಕೆಂದು ನಿರ್ಣಯಿಸಲಾಗಿದೆ. ಪೂರ್ವಸಿದ್ಧತೆಯ ಸಂಚಾಲಕತ್ವವನ್ನು ಡಾ| ಸುಬ್ರಹ್ಮಣ್ಯ ಭಟ್‌ರಿಗೆ ವಹಿಸಲಾಯಿತು. ನವೆಂಬರ್‌ನಲ್ಲಿ ಬೈಂದೂರು ಪ್ರಥಮ ಸಾಹಿತ್ಯ ಸಮ್ಮೇಳನದ ಏಕೈಕ ಸಂಕಲ್ಪ ನಿರ್ಣಯವಾಗಿ ಅಂಗೀಕರಿಸಬೇಕೆಂದು ಶಾಸಕರು ಧ್ವನಿಗೂಡಿಸಿದರು. ಚುನಾವಣೆ ನೀತಿ ಸಂಹಿತೆ ಬಳಿಕ ಶಾಸಕರ ಸೂಚನೆಯಂತೆ ಸಭೆ ನಡೆದಿದೆ. ಜೂ.23ರಂದು ಟ್ರಸ್ಟ್‌ ನ ರೂಪುರೇಷೆ ಸಿದ್ಧವಾಯಿತು. ಸಂಸ್ಥಾಪನಾ ಟ್ರಸ್ಟಿಯಾಗಿ ಜನಾರ್ದನ ಎಸ್‌., ಶಾಸಕರು ಗೌರವಾಧ್ಯಕ್ಷರಾಗಿ, ಸುಬ್ರಹ್ಮಣ್ಯಭಟ್‌ ಅಧ್ಯಕ್ಷರಾಗಿ, ಪುಂಡಲೀಕ ನಾಯಕ್‌ ಕೋಶಾಧಿಕಾರಿಯಾಗಿ ಆಯ್ಕೆಯಾದರು.

ಅಡಿಗರ ಪ್ರಾಥಮಿಕ ಜೀವನ
ಮೊಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೈಂದೂರಿನಲ್ಲಿ ಹೈಸ್ಕೂಲ್‌ ಶಿಕ್ಷಣ ಮುಗಿಸಿದ ಅಡಿಗರು ಉನ್ನತ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ತೆರಳಿ ಬಿಎ, ಎಂಎ ಪದವಿ ಪಡೆದರು. ಅಧ್ಯಾಪಕ ವೃತ್ತಿ ಜೊತೆಗೆ ಸಾಹಿತ್ಯ ಕಡೆಗೆ ಹೆಚ್ಚಾಗಿ ತೊಡಗಿಸಿಕೊಂಡರು. 13ರ ಹರಿಯದಲ್ಲೇ ಕವನ ಬರೆಯಲು ಆರಂಭಿಸಿದವರು. ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅಡಿಗರು ಸಾಹಿತ್ಯಲೋಕದ ಧ್ರುವತಾರೆಯಾಗಿದ್ದು ಇತಿಹಾಸ. ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯ ಎಂಬ ಹೊಸ ಸಂಪ್ರದಾಯ ಹುಟ್ಟುಹಾಕಿದವರು. ಕಥೆ, ಕಾದಂಬರಿ, ನಾಟಕ, ವಿಮರ್ಶೆಗಳಿಗೆ ಹೊಸ ರೂಪ ನೀಡಿದವರು. ಸಾಕ್ಷಿ ಎಂಬ ಪತ್ರಿಕೆ ಮುನ್ನಡೆಸಿದ ಅಡಿಗರು ಸ್ವಾತಂತ್ರ್ಯ ಹೋರಾಟಗಾರ.

Advertisement

ತಪ್ಪು ಮಾಹಿತಿ
ಕುಂದಾಪುರದಲ್ಲಿ ನಡೆದ ತಾ.ಪಂ. ಕೆಡಿಪಿ ಸಭೆಯಲ್ಲಿ ಸದಸ್ಯ ಬಿಜೂರು ಜಗದೀಶ ದೇವಾಡಿಗರ ಪ್ರಶ್ನೆಗೆ ಅಡಿಗರ ಸ್ಮಾರಕ ಸ್ಥಳದ ಕುರಿತು ಬೈಂದೂರು ತಹಶೀಲ್ದಾರ್‌ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶೀಘ್ರವೇ ಸ್ಮಾರಕ
ಜು. 2ರಂದು ಪ್ರಸ್ತಾಪಿತ ಸ್ಥಳದ ಪರಿಶೀಲನೆ ನಡೆಸಿದ್ದು, ರಾಜ್ಯ ಮತ್ತು ದೇಶಾದ್ಯಂತ ಕೀರ್ತಿ ಹೊಂದಿರುವ ಗೋಪಾಲಕೃಷ್ಣ ಅಡಿಗರ ಗೌರವಾರ್ಥ ಅವರ ಮೂಲ ಊರಿನಲ್ಲಿ ಅನನ್ಯ ಆಕರ್ಷಕ ಸ್ಮಾರಕ ನಿರ್ಮಿಸಬೇಕೆಂಬ ದೃಢ ಸಂಕಲ್ಪ, ಹೊಣೆ ಮತ್ತು ಆತ್ಮ ವಿಶ್ವಾಸ ನನಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ
ಶಾಸಕರು, ಬೈಂದೂರು

ಮೊಗೇರಿ
ಸಮೀಪದಲ್ಲೇ ಸ್ಮಾರಕ
ಶಾಸಕರ ಕೋರಿಕೆಯಂತೆ ಗೋಪಾಲಕೃಷ್ಣ ಅಡಿಗ ಸ್ಮಾರಕ ಸಾರ್ವಜನಿಕ ಪ್ರತಿಷ್ಠಾನ ವಿವಿಧ ಪದಾಧಿಕಾರಿಗಳ ಬಳಿ ಸಮಾಲೋಚಿಸಿ ಶೀಘ್ರದಲ್ಲಿ ಸ್ಥಾಪನೆಗೊಳಿಸಿ, ಮೊಗೇರಿ ಸಮೀಪದಲ್ಲೇ ಇರುವ ಪ್ರಸ್ತಾಪಿತ ಸೂಕ್ತ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಹೆಜ್ಜೆ ಇಡುವ ನಿರೀಕ್ಷೆ ಇದೆ.
-ಎಂ. ಜಯರಾಮ ಅಡಿಗ
ಅಡಿಗರ ಪುತ್ರ

ಸ್ಥಳಾವಕಾಶ ಮಂಜೂರಾಗಬೇಕಿದೆ
ಅಡಿಗರ ಸ್ಮಾರಕ ನಿರ್ಮಾಣ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಟ್ರಸ್ಟ್‌ ರಚನೆಗೆ ಶಾಸಕರು ಚಾಲನೆ ನೀಡಿದ್ದಾರೆ. ಸ್ಥಳಾವಕಾಶ ಮಂಜೂರು ಆಗಬೇಕಿದೆ. ಬೇಗ ಸ್ಮಾರಕ ನಿರ್ಮಾಣವಾಗಬೇಕೆಂಬ ಆಶಯ ಎಲ್ಲರದ್ದು.
-ಎಸ್‌. ಜನಾರ್ದನ ಮರವಂತೆ,
ಟ್ರಸ್ಟ್‌ನ ಅಧ್ಯಕ್ಷರು

-ಲಕ್ಷ್ಮೀ ಮಚ್ಚಿನ/ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next