Advertisement

ಸಾರ್ವಜನಿಕ ಬೈಸಿಕಲ್‌ ಬಳಕೆಗೆ ಸಿಎಂ ಚಾಲನೆ

12:45 PM Jun 05, 2017 | |

ಮೈಸೂರು: ನಗರಗಳಲ್ಲಿ ತಲೆದೋರುತ್ತಿರುವ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪರಿಸರದ ಉಳಿವಿಗಾಗಿ ಬೈಸಿಕಲ್‌ ಬಳಕೆ ಹೆಚ್ಚಬೇಕು. ಮುಂಬರುವ ದಿನಗಳಲ್ಲಿ ಬೆಂಗಳೂರಿಗೂ ಈ ಯೋಜನೆ ವಿಸ್ತರಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ ಮೈಸೂರು ಮಹಾ ನಗರಪಾಲಿಕೆಯು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದಿರುವ ಸಾರ್ವಜನಿಕ ಬೈಸಿಕಲ್‌ ಬಳಕೆ ಟ್ರಿಣ್‌ ಟ್ರಿಣ್‌ ಯೋಜನೆಗೆ ಭಾನುವಾರ ಅವರು ಚಾಲನೆ ನೀಡಿದರು.

ಮಾಲಿನ್ಯ ತಡೆಗೆ ಸಹಕಾರಿ: 12 ಲಕ್ಷ ಜನಸಂಖ್ಯೆ ಹೊಂದಿರುವ ಮೈಸೂರು ನಗರದಲ್ಲಿ 6.5 ಲಕ್ಷ ವಾಹನಗಳಿವೆ. ನಗರದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ವಾಹನಗಳಿದೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ನಾವು ಬೈಸಿಕಲ್‌ ಬಳಕೆಯನ್ನು ಹೆಚ್ಚು ಮಾಡಬೇಕು. ವಿಶ್ವದ ಸುಮಾರು 600 ನಗರಗಳಲ್ಲಿ ಬೈಸಿಕಲ್‌ ಬಳಕೆ ಇದೆ.

ಬೆಲ್ಜಿಯಂನಲ್ಲೂ ಬೈಸಿಕಲ್‌ ಬಳಕೆಯನ್ನು ಜಾರಿಗೆ ತರಲಾಗಿದೆ. ನನ್ನ ಹಿರಿ ಮಗ ಬೆಲ್ಜಿಯಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಹೋಗಿದ್ದಾಗ ಇದನ್ನು ಕಂಡಿದ್ದೇನೆ. ಬೆಳಗ್ಗೆ ಕಚೇರಿಗೆ ಹೋಗಿ, ಸಂಜೆ ಮನೆ ಸೇರುವವರು ಈ ಬೈಸಿಕಲ್‌ ಬಳಸುವುದರಿಂದ ಆರೋಗ್ಯವೂ ಸುಧಾರಿಸುತ್ತದೆ, ಪೆಟ್ರೋಲ್‌ ಬಳಕೆ ನಿಯಂತ್ರಿಸಬಹುದು ಮತ್ತು ಮಾಲಿನ್ಯ ನಿಯಂತ್ರಣ ಮಾಡಬಹುದು ಎಂದರು.

ಆದರೆ ಈ ಬೈಸಿಕಲ್‌ಗ‌ಳನ್ನು ಮಧ್ಯ ವಯಸ್ಕರು ಬಳಸುವುದು ಕಷ್ಟ. ಹೀಗಾಗಿ 30 ವರ್ಷದೊಳಗಿನವರಿಗೆ ಇಂತಹ 100 ಬೈಸಿಕಲ್‌ ಮೀಸಲಿಟ್ಟು, ಗುಣಮಟ್ಟದ ಬೈಸಿಕಲ್‌ಗ‌ಳನ್ನು 30 ವರ್ಷ ದಾಟಿದವರಿಗೆ ನೀಡುವುದು ಉತ್ತಮ ಎಂದು ಸಲಹೆ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್‌ ಬಳಕೆಯನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಂಗಳೂರಿಗೂ ವಿಸ್ತರಿಸುವ ಉದ್ದೇಶವಿದೆ ಎಂದರು.

Advertisement

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌, ಸಂಸದ ಆರ್‌. ಧ್ರುವನಾರಾಯಣ, ಮೇಯರ್‌ ಎಂ.ಜೆ.ರವಿಕುಮಾರ್‌, ಶಾಸಕ ಎಂ.ಕೆ.ಸೋಮಶೇಖರ್‌, ಮುಡಾ ಅಧ್ಯಕ್ಷ ಡಿ. ಧ್ರುವಕುಮಾರ್‌, ಜಿಲ್ಲಾಧಿಕಾರಿ ಡಿ. ರಂದೀಪ್‌, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ ದರ್ಪಣ್‌ ಜೈನ್‌, ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್‌, ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next