ಶಿರ್ವ : ಯುವ ಪೀಳಿಗೆಗೆ ಮಣ್ಣಿನ ಸಂಬಂಧವನ್ನು ಉಳಿಸಿಕೊಳ್ಳುವುದರ ಜತೆಗೆ ಕೃಷಿ ಸಂಬಂಧಿ ಕಲಿಕೆಯೊಂದಿಗೆ ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ ಗ್ರೀನ್ ಟೀಚರ್ ಫೋರಂನ ಸಹಯೋಗದಲ್ಲಿ ಎನ್‌ಸಿಸಿ,ಎನ್ನೆಸ್ಸೆಸ್,ರೋವರ್ ಮತ್ತು ರೇಂಜರ್,ಯೂತ್‌ರೆಡ್ ಕ್ರಾಸ್ ಮತ್ತು ಶಿರ್ವ ರೋಟರಿಯ ಆಶ್ರಯದಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ನಾಟಿ ಕಾರ್ಯಕ್ರಮವು ಪಿಲಾರು ಕುಂಜಿಗುಡ್ಡೆ ಫೆಡ್ರಿಕ್ ಕ್ಯಾಸ್ತಲಿನೋ, ಹೆಲೆನ್ ಕ್ಯಾಸ್ತಲಿನೋ ಅವರ ಗದ್ದೆಯಲ್ಲಿ ಸೋಮವಾರ ನಡೆಯಿತು.
ಭತ್ತದ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ರಾಜ್ಯ ಪ್ರಶಸ್ತಿ ಪುರಸðತ ಕೃಷಿಕ ರಾಘವೇಂದ್ರ ನಾಯಕ್ ಕಲ್ಲೊಟ್ಟು ಮಾತನಾಡಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವಜನತೆ ಕೃಷಿ ಕಾರ್ಯದಲ್ಲಿ ಭಾಗವಹಿಸಿ ಭೂಮಿಯನ್ನು ಹಸಿರಾಗಿಸುವುದರ ಮೂಲಕ ನೆಲ-ಜಲ ಸಂರಕ್ಷಣೆ ಮಾಡಿದಲ್ಲಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಕೊಡುಕೊಳ್ಳುವಿಕೆಯು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತಿದೆ ಎಂದರು. ಗ್ರೀನ್ ಟೀಚರ್ ಫೋರಂನ ನಿರ್ದೇಶಕಿ ಮತ್ತು ವಿದ್ಯಾರ್ಥಿ ಕ್ಷೇಮಾಧಿಕಾರಿ ಯಶೋದಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿರ್ವ ರೋಟರಿಯ ಕಾರ್ಯದರ್ಶಿ ಜಿನೇಶ್ ಬಳ್ಳಾಲ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ . ಪ್ರವೀಣ್ ಕುಮಾರ್, ಎನ್‌ಎಸ್‌ಎಸ್ ಅಧಿಕಾರಿ ಪ್ರೇಮನಾಥ್,ರೋವರ್ಸ್-ರೇಂಜರ್ಸ್ ಘಟಕದ ಪ್ರಕಾಶ್, ರೆಡ್ ಕ್ರಾಸ್ ಸಂಯೋಜಕ ಮುರಳಿ, ಅಧ್ಯಾಪಕರ ಸಂಘದ ಕಾರ್ಯದರ್ಶಿ ರೀಮಾ ಲೋಬೋ,ಹಿರಿಯ ಉಪನ್ಯಾಸಕ ವಿಠಲ ನಾಯಕ್, ಅಧ್ಯಾಪಕ, ಅಧ್ಯಾಪಕೇತರ ವೃಂದ,ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಟಿ ಕಾರ್ಯಕ್ಕೆ ಗದ್ದೆ ನೀಡಿ ವ್ಯವಸ್ಥೆಗೊಳಿಸಿದ ಫೆಡ್ರಿಕ್ ಕ್ಯಾಸ್ತಲಿನೋ ಅವರಿಗೆ ಕಾಲೇಜಿನ ಪ್ರಾಂಶುಪಾಲರು ಫಲ ಬಿಡುವ ಸಸಿಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದರು.