ಉತ್ತರಪ್ರದೇಶ: ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇತಿಹಾಸಕಾರರಿಂದ ನಮಗೆ ನ್ಯಾಯ ಸಿಗಲಿಲ್ಲ ;ಕೇಂದ್ರ ಸಚಿವ ಎಸ್.ಪಿ.ಸಿಂಗ್ ಭಾಗೇಲ್
ಏನಿದು ಪ್ರಕರಣ:
ಸಿಕ್ರೋಡ್ ಗ್ರಾಮದ ನಿವಾಸಿ ಚಂದ್ರವೀರ್ ಎಂಬಾತ 2018ರ ಸೆಪ್ಟೆಂಬರ್ 28ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಕ್ಲೋಸ್ ಮಾಡಿದ್ದರು. ಏತನ್ಮಧ್ಯೆ ಪೊಲೀಸರಿಗೆ ದೊರೆತ ಮಾಹಿತಿ ಆಧಾರದ ಮೇಲೆ ಪ್ರಕರಣದ ತನಿಖೆಯನ್ನು ಪುನರಾರಂಭಿಸಿದ್ದರು.
Related Articles
ದೃಶ್ಯಂ ಸಿನಿಮಾದಂತೆ ಶವವನ್ನು ಮನೆಯೊಳಗೆ ಹೂತಿಟ್ಟಿದ್ದರು!
ಚಂದ್ರವೀರ್ ಪತ್ನಿ ಸವಿತಾ ವಿವಾಹಕ್ಕೂ ಮುನ್ನವೇ ಅರುಣ್ ಅಲಿಯಾಸ್ ಅನಿಲ್ ಕುಮಾರ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲ ವಿವಾಹದ ನಂತರವೂ ಸವಿತಾ, ಅರುಣ್ ದೈಹಿಕ ಸಂಬಂಧ ಮುಂದುವರಿದಿತ್ತು. ಹಲವು ಬಾರಿ ಇಬ್ಬರೂ ರೆಡ್ ಹ್ಯಾಂಡ್ ಆಗಿ ಪತಿ ಚಂದ್ರವೀರ್ ಕೈಗೆ ಸಿಕ್ಕಿಬಿದ್ದಿದ್ದು, ಇದರಿಂದ ಕೋಪಗೊಂಡಿದ್ದ ಚಂದ್ರವೀರ್ ಪತ್ನಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದ ಎಂದು ಪಿಟಿಐ ವರದಿ ಮಾಡಿದೆ.
2018ರ ಸೆಪ್ಟೆಂಬರ್ 8ರಂದು ಚಂದ್ರವೀರ್ ಕುಡಿದು ಮನೆಗೆ ಬಂದಿದ್ದ. ಈತ ಮಲಗಿದ್ದನ್ನು ಗಮನಿಸಿದ ಪತ್ನಿ ಪ್ರಿಯತಮ ಅರುಣ್ ಗೆ ಕರೆ ಮಾಡಿ ಮನೆಗೆ ಕರೆಯಿಸಿಕೊಂಡಿದ್ದಳು. ನಂತರ ದೇಶೀ ನಿರ್ಮಿತ ಪಿಸ್ತೂಲ್ ನಿಂದ ಪತಿಯ ಹಣೆಗೆ ಗುಂಡಿಟ್ಟು ಹತ್ಯೆಗೈದಿದ್ದಳು.
ಪತಿಯನ್ನು ಕೊಂದು, ಪ್ರಿಯಕರ ಅರುಣ್ ಸಹಾಯದಿಂದ ಮನೆಯೊಳಗೆ ಆರು ಅಡಿ ಆಳದ ಗುಂಡಿ ತೋಡಿ ಶವವನ್ನು ಹೂತು ಹಾಕಿದ್ದರು. ಕೊನೆಗೂ ನಾಲ್ಕು ವರ್ಷಗಳ ಬಳಿಕ ಪ್ರಕರಣದ ಮರುತನಿಖೆಯಲ್ಲಿ ಪತ್ನಿ ಮತ್ತು ಪ್ರಿಯಕರನ ಕಳ್ಳಾಟ ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಕೊಲೆಗೆ ಬಳಸಿದ್ದ ಪಿಸ್ತೂಲ್, ಹಾರೆ, ಪಿಕ್ಕಾಸು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಶರ್ಮಾ ತಿಳಿಸಿದ್ದಾರೆ.