ಅವರಿಬ್ಬರು ಜೀವದ ಗೆಳೆಯರು. ಅವನ ಕಷ್ಟಕ್ಕೆ ಇವನು, ಇವನ ಕಷ್ಟಕ್ಕೆ ಅವನು. ಈ ಮಟ್ಟದ ಸ್ನೇಹದ ಮಧ್ಯೆ ಪ್ರೀತಿ ಬರುತ್ತದೆ. ಗೆಳೆಯನೊಬ್ಬನಿಗೆ ನುಂಗಲಾರದ ತುತ್ತು. ತನ್ನ ಗೆಳೆಯ ಪ್ರೀತಿಸುತ್ತಿರುವ ಹುಡುಗಿಯನ್ನೇ ಮತ್ತೂಬ್ಬ ಗೆಳೆಯ ಇಷ್ಟಪಡಲಾರಂಭಿಸುತ್ತಾನೆ. ಆದರೆ, ಆತನಿಗೆ ಈ ಹುಡುಗಿ ತನ್ನ ಗೆಳೆಯನ ಪ್ರೇಯಸಿ ಎಂದು ಗೊತ್ತಿರುವುದಿಲ್ಲ. ಈ ವಿಷಯ ಗೊತ್ತಿಲ್ಲದೇ, ತನ್ನ ಪ್ರೀತಿಯ ವಿಷಯವನ್ನು ತಿಳಿಸಿ, ಆ ಹುಡುಗಿಯನ್ನು ಒಪ್ಪಿಸುವಂತೆ ಕೇಳಿಕೊಳ್ಳುತ್ತಾನೆ.
ಜೀವದ ಗೆಳೆಯನ ಆಸೆ ಈಡೇರಿಸೋದಾ, ತಾನು ಪ್ರೀತಿಸಿದ ಹುಡುಗಿಯನ್ನು ಬಿಟ್ಟುಕೊಡೋದಾ ಎಂಬ ಗೊಂದಲ. ಕೊನೆಗೂ ಒಂದು ನಿರ್ಧಾರಕ್ಕೆ ಬರುತ್ತಾನೆ. ಆ ನಿರ್ಧಾರದ ಬಗ್ಗೆ ನೋಡುವ ಆಸೆ ಇದ್ದರೆ ನೀವು “ಹನಿ ಹನಿ ಇಬ್ಬನಿ’ ಸಿನಿಮಾ ನೋಡಿ. “ಹನಿ ಹನಿ ಇಬ್ಬನಿ’ ಚಿತ್ರ ಪ್ರೀತಿ ಹಾಗೂ ಸ್ನೇಹದ ಸುತ್ತ ಸಾಗುವ ಸಿನಿಮಾ. ಒಂದು ಕಡೆ ಜೀವನದ ಗೆಳೆಯ, ಇನ್ನೊಂದು ಕಡೆ ಪ್ರೀತಿಸಿದ ಹುಡುಗಿ ಈ ಎರಡು ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಜೊತೆಗೆ ಸಿನಿಮಾದಲ್ಲೊಂದು ಟ್ವಿಸ್ಟ್ ಬೇರೆ ಇಟ್ಟಿದ್ದಾರೆ. ಕಥೆಯ ವಿಷಯಕ್ಕೆ ಬರೋದಾದರೆ “ಹನಿ ಹನಿ ಇಬ್ಬನಿ’ಯದ್ದು ತೀರಾ ಹೊಸ ಕಥೆಯೇನಲ್ಲ. ಪ್ರೀತಿ ಅಮರ, ತ್ಯಾಗ ಮಧುರ ಎಂಬ ಕಾನ್ಸೆಪ್ಟ್ನಡಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ಸೇರುವ ಸಿನಿಮಾವಿದು. ಹಾಗಾಗಿ ಇಲ್ಲಿ ಹೊಸದೇನನ್ನು ನಿರೀಕ್ಷಿಸುವಂತಿಲ್ಲ. ಅದೇ ಸೆಂಟಿಮೆಂಟ್, ಪ್ರೀತಿ, ತಲ್ಲಣಗಳಲ್ಲೇ ಸಿನಿಮಾ ಮುಗಿದುಹೋಗುತ್ತದೆ. ಮುಖ್ಯವಾಗಿ ಇಲ್ಲಿ ನಿರ್ದೇಶಕರ ಪೂರ್ವತಯಾರಿಯ ಕೊರತೆ ಎದ್ದು ಕಾಣುತ್ತದೆ.
ಕಥೆಗೆ ಬೇಕಾದ ಸರಕು ಕಡಿಮೆ ಇದ್ದ ಕಾರಣ, ಆ ಜಾಗವನ್ನು ಅನಾವಶ್ಯಕ ದೃಶ್ಯಗಳಿಂದ ತುಂಬಿಸಿದ್ದಾರೆ. ಇನ್ನು, ಚಿತ್ರದ ಕೆಲವು ಪಾತ್ರಗಳು ಆರಂಭದಲ್ಲಿ ಅಬ್ಬರಿಸುತ್ತವೆ. ನಂತರ ಆ ಪಾತ್ರ ಎಲ್ಲಿ ಹೋಯಿತು, ಏನಾಯಿತು ಎಂಬ ಮಾಹಿತಿಯೇ ಇರೋದಿಲ್ಲ. ಚಿತ್ರದುದ್ದಕ್ಕೂ ಇಂತಹ ಸಾಕಷ್ಟು ಸಮಸ್ಯೆಗಳು ಇವೆ. ಹಾಗಾಗಿ, ಲಾಜಿಕ್ ಇಲ್ಲದೇ ಈ ಸಿನಿಮಾ ನೋಡಿದರೆ ನಿಮಗೆ ಪ್ರಶ್ನೆಗಳು ಮೂಡಲ್ಲ. ಮುಖ್ಯವಾಗಿ ಸಿನಿಮಾದ ಕಥೆ ಟೇಕಾಪ್ ಆಗೋದು ಕೂಡಾ ದ್ವಿತೀಯಾರ್ಧದಲ್ಲಿ ಅಂದರೆ ತಪ್ಪಲ್ಲ. ಅಲ್ಲಿವರೆಗೆ “ರನ್‌ವೇ’ಯಲ್ಲಿ ಸುಖಾಸುಮ್ಮನೆ ಓಡಿಸಿ ಖುಷಿಪಟ್ಟಿದ್ದಾರೆ ನಿರ್ದೇಶಕರು.
ಇಲ್ಲಿ ಹೀರೋ, ಹೀರೋಯಿನ್ ಎಂಟ್ರಿ, ಕಾಮಿಡಿ, ಲವ್‌ಟ್ರ್ಯಾಕ್ ಮೂಲಕವೇ ಮುಗಿಸಿದ್ದಾರೆ. ಹಾಗಾಗಿ, ಸಿನಿಮಾದಲ್ಲಿರುವ ಒನ್‌ಲೈನ್ ಆದರೂ ಏನಪ್ಪಾ ಕುತೂಹಲವಿದ್ದರೆ ನೀವು ದ್ವಿತೀಯಾರ್ಧವರೆಗೆ ಕಾಯಲೇಬೇಕು. ಚಿತ್ರದಲ್ಲಿ ಕಾಮಿಡಿ ಟ್ರ್ಯಾಕ್ ಕೂಡಾ ಇದೆ. ಜೊತೆಗೊಂದು ಐಟಂ ಸಾಂಗ್. ಇವೆರಡನ್ನು ತೆಗೆದು ಪಕ್ಕಕ್ಕಿಟ್ಟು, ಕಥೆಯ ತೀವ್ರತೆಯನ್ನು ಹೆಚ್ಚಿಸುವ ಅವಕಾಶ ನಿರ್ದೇಶಕರಿಗಿತ್ತು. ಹಾಗೆ ನೋಡಿದರೆ ಕಥೆಯ ಒನ್‌ಲೈನ್ ಚೆನ್ನಾಗಿದೆ. ಜೊತೆಗೆ ಟ್ವಿಸ್ಟ್ ಕೂಡಾ ಆ ಕಥೆಗೆ ಪೂರಕವಾಗಿದೆ.
ಆದರೆ, ಅದನ್ನಿಟ್ಟುಕೊಂಡು ಒಂದು ನೀಟಾದ ಚಿತ್ರಕಥೆ ರಚಿಸಿ, ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ. ಆದರೆ, ಇಲ್ಲಿ ಮೆಚ್ಚಬೇಕಾದ ಅಂಶವೆಂದರೆ ಸುಖಾಸುಮ್ಮನೆ ಬಿಲ್ಡಪ್, ನಾಯಕನ ಆ್ಯಕ್ಷನ್ ಇಮೇಜ್‌ಗೆ ಫೈಟ್ ಇಟ್ಟಿಲ್ಲ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಅಜಿತ್ ಜಯರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಮತ್ತಷ್ಟು ಚೆನ್ನಾಗಿ ನಟಿಸುವ ಅವಕಾಶ ಅವರಿಗಿತ್ತು. ಉಳಿದಂತೆ ನಾಯಕಿ ದೀಪ್ತಿ ಕಾಪ್ಸೆ, ನೆ.ಲ.ನರೇಂದ್ರ ಬಾಬು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಹನಿ ಹನಿ ಇಬ್ಬನಿ
ನಿರ್ಮಾಣ – ನಿರ್ದೇಶನ: ಮದ್ದೂರು ಶಿವು
ತಾರಾಗಣ: ಅಜಿತ್ ಜಯರಾಜ್, ದೀಪ್ತಿ ಕಾಪ್ಸೆ, ನೆ.ಲ.ನರೇಂದ್ರ ಬಾಬು, ಆನಂದ್ ಮತ್ತಿತರರು.
* ರವಿಪ್ರಕಾಶ್ ರೈ