Advertisement
ಪಟ್ಟಣದ 16ನೇ ವಾರ್ಡ್‌ನ ಚಿತ್ತರಗಿ ಕ್ರಾಸ್ ಹತ್ತಿರವಿರುವ ಪಪಂ ಅನುದಾನದಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಎರಡೂವರೆ ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಈ ಘಟಕ ಉತ್ತಮವಾಗಿಯೇ ನಡೆಯುತ್ತಿತ್ತು. ಆದರೆ ಪಪಂ ಅಧಿಕಾರಗಳ ನಿರ್ಲಕ್ಷ್ಯ ಹಾಗೂ ಸದಸ್ಯರುಗಳ ತಾತ್ಸಾರದಿಂದ ಸ್ಥಗಿತಗೊಂಡಿದ್ದು, ವಾರ್ಡ್‌ಗಳ ಜನತೆ ಕುಡಿಯುವ ನೀರಿಗಾಗಿ ಬೇರೆ ವಾರ್ಡ್‌ಗಳಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ.
Related Articles
Advertisement
ಪಟ್ಟಣದ ಪತ್ರಿಕಟ್ಟಿ ಹತ್ತಿರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದೆ. ಉಳಿದ 5ನೇ ವಾರ್ಡ್‌ನಲ್ಲಿರುವ ಘಟಕ ಇನ್ನೂ ಆರಂಭವಾಗಿಲ್ಲ. 16ನೇ ವಾರ್ಡ್‌ನ ಸಂಗಮ ಕ್ರಾಸ್‌ದಲ್ಲಿರುವ ಘಟಕಗಳು ಎರಡು ವರ್ಷದಿಂದ ಸ್ಥಗಿತಗೊಂಡಿದೆ. ಚಾಲುಕ್ಯ ಡಾಬಾ ಹತ್ತಿರವಿರುವ ಘಟಕ ಮತ್ತು ಮೂರನೇ ವಾರ್ಡ್‌ನ ನೀರಿನ ಘಟಕದಲ್ಲಿ ಮೆಮರಿಯನ್ ಕೆಟ್ಟು ನಿಂತಿದೆ. ಇದರಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನೇ ನಂಬಿರುವ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುವ ಟೆಂಡರ್ ಮುಗಿದಿದ್ದು, ಈ ಹಿಂದೆ ಟೆಂಡರ್ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರನಿಗೆ ತಾತ್ಕಾಲಿಕವಾಗಿ ನಿರ್ವಹಣೆ ಮಾಡಲು ನೀಡಿದ್ದಾರೆ. ಆದರೆ, ಗುತ್ತಿಗೆದಾರನಿಗೆ ಪಟ್ಟಣ ಪಂಚಾಯಿತಿ ಅಗತ್ಯ ಸಾಮಗ್ರಿ ಪೂರೈಸದ ಕಾರಣ ಅವೆಲ್ಲ ಸರಿಯಾಗಿ ನಿರ್ವಹಣೆಯಾಗಿಲ್ಲ ಎಂಬ ಮಾತು ಕೇಳಿ ಬಂದಿದೆ.
ಪಟ್ಟಣದಲ್ಲಿರುವ ಆರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೇವಲ ಒಂದು ಮಾತ್ರ ಚಾಲ್ತಿಯಲ್ಲಿದೆ. 16ನೇ ವಾರ್ಡ್‌ನ ಘಟಕ ಸುಮಾರು ಎರಡು ವರ್ಷದಿಂದ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಸದಸ್ಯರ, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಬರದಿಂದ ವಾರಕೊಮ್ಮೆ ನೀರು ಬರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ಕೂಡಾ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು.-ನಿಜಾಮುದ್ದಿನ್ ಖಾದ್ರಿ, ಯುವ ಮುಖಂಡರು, ಅಮೀನಗಡ
•ಎಚ್.ಎಚ್.ಬೇಪಾರಿ