Advertisement

ಇಲ್ಲಿದೆ ನೋಡಿ, ಶುದ್ಧ ನೀರಿನ ಘಟಕದ ಸ್ಮಾರಕ!

03:25 AM Jul 07, 2018 | Team Udayavani |

ಆಲಂಕಾರು: ಜನತೆಗೆ ಶುದ್ಧ ಗಾಳಿ, ಶುದ್ಧ ಪರಿಸರದ ಜತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕೆಂಬ ಸರಕಾರದ ಮಹತ್ತರ ಯೋಜನೆಗಳು ಟೆಂಡರುದಾರರ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿಯುತ್ತಿವೆ. ಪುತ್ತೂರು ತಾಲೂಕಿನ 13 ಗ್ರಾಮಗಳಲ್ಲಿ ನಿರ್ಮಾಣವಾದ ಘಟಕಗಳು ತುಕ್ಕು ಹಿಡಿಯುತ್ತಿವೆ.

Advertisement

ಆಲಂಕಾರು ಗ್ರಾ.ಪಂ. ಅಧೀನದ ಜಾಗದಲ್ಲಿ 2016ರಲ್ಲಿ ಶುದ್ಧ ನೀರು ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯರ ವಿರೋಧದ ನಡುವೆ ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಒಂದು ವರ್ಷದ ಬಳಿಕ ಪೂರ್ಣಗೊಂಡಿತು. ಕಾಮಗಾರಿ ಮುಗಿದು ಒಂದು ವರ್ಷ ಸಂದರೂ ಗ್ರಾಮದ ಜನತೆಗೆ ಶುದ್ಧ ನೀರು ಮರೀಚಿಕೆಯೇ ಆಗಿದೆ. ಕುಡಿಯಲು ಶುದ್ಧ ನೀರಿನ ಕೊರತೆ ಇರುವುದನ್ನು ಮನಗಂಡ ಸರಕಾರ ರಾಜ್ಯಾದ್ಯಂತ ಘಟಕಗಳನ್ನು ಆರಂಭಿಸಲು ನಿರ್ಧರಿಸಿತು. ಸ್ಥಳೀಯ ಆಡಳಿತದಲ್ಲಿ ಚರ್ಚಿಸದೆ ನೇರವಾಗಿ ಟೆಂಡರ್‌ ಪ್ರಕ್ರಿಯೆ ಮುಗಿಸಿ, ಟೆಂಡರ್‌ದಾರರ ಆಯ್ಕೆ ಮಾಡಿ ಸುಮ್ಮನಾಯಿತು. ಅರ್ಥಾತ್‌ ಸರಕಾರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ವಿಚಾರವನ್ನೇ ಮರೆತುಬಿಟ್ಟಿತು.

ಅರೆ ಬರೆ ಕಾಮಗಾರಿ
ಇಂತಹ ಘಟಕಗಳ ನಿರ್ಮಾಣ ಕಾಮಗಾರಿ ತಾಲೂಕಿನಲ್ಲಿ 2016ರಿಂದ ಆರಂಭವಾಗಿದೆ. ಗುತ್ತಿಗೆದಾರರು ಅಲ್ಲಲ್ಲಿ ಒಂದಷ್ಟು ಶೆಡ್‌ ಗಳನ್ನು ಹಾಕಿ ಕೆಲವು ಕಡೆ ಯಂತ್ರಗಳನ್ನು ಜೋಡಿಸಿ ತೆರಳಿದ್ದಾರೆ. ಪುತ್ತೂರು ತಾಲೂಕಿನ 13 ಕಡೆಗಳಲ್ಲಿ ಇಂತಹ ಘಟಕಗಳಿವೆ. ಕೆಲವು ಶೆಡ್‌ ಗಳ ಸ್ಥಿತಿಯಲ್ಲಿ, ಇನ್ನು ಕೆಲವು ಕಡೆ ಯಂತ್ರಗಳ ಜೋಡಣೆ ಅರೆಬರೆಯಾಗಿದೆ. ಪ್ರತಿ ಘಟಕಕ್ಕೂ 15 ಲಕ್ಷ ರೂ. ಖರ್ಚು ಮಾಡಲಾಗಿದೆ. ಪುತ್ತೂರು ತಾಲೂಕಿನಲ್ಲಿ ಲಕ್ಷಾಂತರ ರೂ. ವೆಚ್ಚದ ಈ ಯೋಜನೆಗಳು ಎರಡು ವರ್ಷಗಳಿಂದ ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಂತಿದ್ದು, ಇದುವರೆಗೆ ಒಂದೇ ಒಂದು ಹನಿ ಶುದ್ಧನೀರು ಹೊರಗೆ ಬಂದಿಲ್ಲ. ನೋಡಲು ಇವು ಸ್ಮಾರಕಗಳಂತಿದ್ದು, ಒಂದು ರೂ. ನಾಣ್ಯ ಹಾಕಿದರೆ ಒಂದು ಲೀ. ನೀರು ಬರುತ್ತದೆ ಎಂಬ ಪಂಚತಂತ್ರದ ಕಥೆಯಂತಹ ಮಾಹಿತಿ ಮಾತ್ರ ಗ್ರಾ.ಪಂ. ಬಳಿ ಇದೆ. ಶುದ್ಧ ನೀರಿನ ಘಟಕ ನಿರ್ಮಾಣ ಸರಕಾರದ ಕಾಳಜಿಯಾದರೂ ಅದು ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆ ದಾರರಿಗೆ ದುಡ್ಡು ಹೊಡೆಯುವ ದಂಧೆಯಾಗಿದೆ. ಈ ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ಇಲಾಖೆಗೆ ಇಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ನಿರ್ವಹಣೆಗೆ ಟೆಂಡರ್‌
ಪುತ್ತೂರು ತಾಲೂಕಿನ 13 ಕಡೆಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು. ಕೆಲವೊಂದು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಕೆಲವೆಡೆ ಪ್ರಗತಿಯಲ್ಲಿದೆ. ಪೂರ್ಣಗೊಂಡ ಘಟಕಗಳ ಸ್ಥಿತಿಗತಿಯನ್ನು ಪರಿಶೀಲಿಸಲು ತಜ್ಞರ ತಂಡವನ್ನು ಕಳುಹಿಸಲಾಗಿದೆ. ಕೆಲವು ಕಡೆ ಘಟಕಗಳ ಕಾಮಗಾರಿ ಪೂರ್ಣಗೊಂಡಿದ್ದರೂ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಂತಹ ಘಟಕಗಳ ದುರಸ್ತಿಗಾಗಿ ಜು.2ರಿಂದಲೇ ತಜ್ಞರ ತಂಡಗಳು ಕಾರ್ಯನಿರತವಾಗಿವೆ. ಎಲ್ಲ ಘಟಕಗಳ ಮಾಹಿತಿ ಬಂದ ತತ್‌ ಕ್ಷಣ ಸ್ಥಳೀಯಾಡಳಿತದ ಅಧೀನಕ್ಕೊಳಪಡಿಸಿ, ಐದು ವರ್ಷಗಳ ಅವಧಿಯ ನಿರ್ವಹಣೆಗಾಗಿ ಟೆಂಡರ್‌ ಕರೆಯಲಾಗುವುದು.
– ಮಹದೇವಪ್ರಸಾದ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌

— ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next