Advertisement

ನಾಲ್ಕು ತಿಂಗಳಿಂದ ಕುಡಿವ ನೀರಿಗೆ ಅಲೆದಾಟ

03:15 PM Apr 26, 2022 | Team Udayavani |

ಬಾಗೇಪಲ್ಲಿ: ರಾಜಕೀಯ ವೈಷಮ್ಯದಿಂದ ಗ್ರಾಮ ದಲ್ಲಿ ಭುಗಿಲೆದ್ದ ಬಿನ್ನಾಭಿಪ್ರಾಯಗಳಿಂದ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅಡ್ಡಿಯಾಗಿ, ನಾಲ್ಕು ತಿಂಗಳಿನಿಂದ ಶುದ್ಧ ಕುಡಿಯವ ನೀರಿಗಾಗಿ ಮತ್ತೂಂದು ಗ್ರಾಮಕ್ಕೆ ತೆರಳುವ ಅನಿವಾರ್ಯ ಪರಿಸ್ಥಿತಿ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಎದುರಾಗಿದೆ.

Advertisement

ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಕುಡಿವ ನೀರಿನ ಶುದ್ಧೀಕರಣ ಘಟಕವನ್ನು 4 ತಿಂಗಳ ಹಿಂದಷ್ಟೆ ತೆರವುಗೊಳಿಸಿ ಹೊಸ ಘಟಕ ಸ್ಥಾಪನೆಗೆ ನೀರು ಸರಬರಾಜು ಇಲಾಖೆ ಮುಂದಾಗಿದ್ದು, ಜಮೀನು ಮಾಲೀಕ ಕೆ.ವೆಂಕಟಶಿವಾರೆಡ್ಡಿರವರಿಂದ ಘಟಕ ಸ್ಥಾಪನೆಗೆ ಅಕ್ಷೇಪ ವ್ಯಕ್ತಪಡಿಸಿದ್ದರು. ಶುದ್ಧೀಕರಣ ಘಟಕದ ಯಂತ್ರೋಪಕರಣಗಳು ರಸ್ತೆಯ ಬದಿಯಲ್ಲಿ ಅನಾಥವಾಗಿ ಬಿದ್ದಿವೆ. ಇದರ ಪರಿಣಾಮ ಗ್ರಾಮದಲ್ಲಿರುವ ಗ್ರಾಮಸ್ಥರು ನಾಲ್ಕು ತಿಂಗಳಿನಿಂದ ಕುಡಿವ ನೀರಿಗಾಗಿ ಗೂಳೂರು ಗ್ರಾಮಕ್ಕೆ ಅಲೆದಾಡುವಂತಾಗಿದೆ.

ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಶಾಸಕ ಎಸ್‌. ಎನ್‌.ಸುಬ್ಬಾರೆಡ್ಡಿರವರ ಸ್ವಗ್ರಾಮ. ಅದೇ ಗ್ರಾಮದ ನಿವಾಸಿ ಕೆ.ವೆಂಕಟಶಿವಾರೆಡ್ಡಿ ವಿರುದ್ದ ಶಾಸಕ ಎಸ್‌. ಎನ್‌.ಸುಬ್ಬಾರೆಡ್ಡಿ ತಂದೆ ಎಸ್‌.ನಂಜುಂಡರೆಡ್ಡಿ ಗ್ರಾಮದಲ್ಲಿರುವ ಪಿತ್ರಾರ್ಜಿತ ಜಮೀನುಗಳ ಹಂಚಿಕೆ ವಿಚಾರವಾಗಿ ಚಿಕ್ಕಬಳ್ಳಾಪುರ ಅಸಿಸ್ಟೆಂಟ್‌ ಕಮೀಷನರ್‌ ರವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ರಾಜಿ ಸಂಧಾನದ ಮೂಲಕ ಒಬ್ಬರು ತಮ್ಮ ಜಮೀನುಗಳನ್ನು ಫವತಿ ಖಾತೆ ಮಾಡಿಸಿಕೊಂಡಿರುತ್ತಾರೆ. ಸರ್ವೇ ನಂ 24/2ಎ ರಲ್ಲಿರುವ 6 ಗುಂಟೆ ಜಮೀನು ನ್ಯಾಯಾಲಯದ ಆದೇಶದಂತೆ ಕೆ.ವೆಂಕಟಶಿವಾರೆಡ್ಡಿ ಹೆಸರಿಗೆ ಖಾತೆ ಆಗಿದೆ. ಕೆ.ವೆಂಕಟಶಿವಾರೆಡ್ಡಿಗೆ ಸೇರಿರುವ 6 ಗುಂಟೆ ಜಮೀನುನಲ್ಲಿ ಕೆಲವು ವರ್ಷಗಳ ಹಿಂದೆ ಕುಡಿಯುವ ನೀರಿನ ಶುದ್ಧೀಕರಣ ಘಟಕ, ಅಂಗನವಾಡಿ ಹಾಗೂ ಸೊಸೈಟಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದಕ್ಕೆ ಅನುಮತಿ ಪಡೆದಿಲ್ಲ ವೆಂದು ಜಮೀನು ಮಾಲೀಕ ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್‌ ಕಳುಹಿಸಿ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ.

ಭಿನ್ನಮತವೇ ಘಟನೆಗೆ ಕಾರಣ : ಹಲವು ತಿಂಗಳ ಹಿಂದೆ ಚಿನ್ನಕಾಯಲಪಲ್ಲಿ ವಿಎಸ್‌ ಎಸ್‌ಎನ್‌ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡು ಗುಂಪುಗಳ ನಡುವಿನ ಭಿನ್ನಮತ ಹಾಗೂ ಗ್ರಾಮದಲ್ಲಿ 20 ಗುಂಟೆ ಸರ್ಕಾರಿ ಜಮೀನು ಇದ್ದರೂ ಖಾಸಗಿ ವ್ಯಕ್ತಿಯ ಜಮೀನುನಲ್ಲೆ ಸಾರ್ವಜನಿಕ ಕುಡಿವ ನೀರು ಶುದ್ಧೀಕರಣ ಘಟಕ ನಿರ್ಮಿಸಬೇಕೆಂಬ ಶಾಸಕರ ಗುಂಪಿನವರ ಹಠ ಕಟ್ಟಡಗಳಿಗೆ ಬೀಗ ಹಾಕಲು ಕಾರಣವಾಗಿದೆ. ಚಿನ್ನಕಾಯಲಪಲ್ಲಿ ಗ್ರಾಮದ ಒಂದು ಗುಂಪಿನವರು ಜಮೀನು ಮಾಲೀಕ ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ಮೌಖೀಕ ದೂರು ಸಲ್ಲಿಸಿದ್ದು, ವೃತ್ತ ನಿರೀಕ್ಷಕ ಡಿ.ಆರ್‌.ನಾಗರಾಜು ಗ್ರಾಮಕ್ಕೆ ಭೇಟಿ ಪೂರ್ಣ ದಾಖಲೆಗಳೊಂದಿಗೆ ಠಾಣೆಗೆ ಬರುವಂತೆ ಎರಡು ಗುಂಪಿನವರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next