Advertisement

1 ವಾರದೊಳಗೆ ನಳ್ಳಿ ಸಂಪರ್ಕ: ಜಲಮಂಡಳಿ ಅಧಿಕಾರಿ ತಾಕೀತು

10:52 PM Mar 18, 2021 | Team Udayavani |

ಕುಂದಾಪುರ: ಜಲಸಿರಿ ಯೋಜನೆಯಡಿ 23 ಕೋ.ರೂ.ಗಳಲ್ಲಿ ನಡೆಯು ತ್ತಿರುವ ಕಾಮಗಾರಿಯಲ್ಲಿ ಅರ್ಜಿ ನೀಡಿದ 1 ವಾರದೊಳಗೆ ಬೇಡಿಕೆ ಇರುವಲ್ಲಿ ನಳ್ಳಿ ನೀರಿನ ಸಂಪರ್ಕಗಳನ್ನು ನೀಡಬೇಕು ಎಂದು ಜಲಮಂಡಳಿ ಉಪ ಯೋಜನಾ ನಿರ್ದೇಶಕ ಮಂಜುನಾಥ್‌ ತಾಕೀತು ಮಾಡಿದ್ದಾರೆ.

Advertisement

ಅವರು ಗುರುವಾರ ಪುರಸಭೆಯಲ್ಲಿ ವಿಶೇಷ ಸಭೆ ನಡೆಸಿ ಎಂಜಿನಿಯರ್‌ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಗಮನಕ್ಕೆ ತನ್ನಿ
ಉಚಿತ ನೀರು ನೀಡುವ ಭರವಸೆ ಕೊಡಬೇಡಿ. ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಾರದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಬಾಕಿ ಇರುವ ಕಾಮಗಾರಿ ಪೂರೈಸಲು ಕಾರಣಗಳನ್ನು ನೀಡಬೇಡಿ. ಅರೆಬರೆ ಕಾಮಗಾರಿಗಳನ್ನು ಬಾಕಿ ಇಡಬೇಡಿ. ಜಲಮಂಡಳಿ ಎಂಜಿನಿಯರ್‌ ಇಲಾಖೆಯ ಪರವಾಗಿ ಕೆಲಸ ಮಾಡಬೇಕು ವಿನಾ ಪುರಸಭೆ ಪರವಾಗಿ ಅಲ್ಲ. ಪುರಸಭೆ ಮೂಲಕ ಪರಿಶೀಲಿಸಿ ನೀಡಲ್ಪಟ್ಟ ಅರ್ಜಿಗಳನ್ನು ಮಾತ್ರ ಸಂಪರ್ಕಕ್ಕಾಗಿ ಗಣನೆಗೆ ತೆಗೆದುಕೊಳ್ಳಬೇಕು. ಸ್ವಂತ ನಿರ್ಧಾರ, ಹಿತಾಸಕ್ತಿ ಮೇಲೆ ಸಂಪರ್ಕ ನೀಡುವಂತಿಲ್ಲ. ಅರ್ಜಿಯನ್ನೇ ನೀಡದೆ ಸಂಪರ್ಕ ನೀಡುವಂತಿಲ್ಲ ಎಂದರು.

ಆಗದಿದ್ದರೆ ಹೋಗಿ
ಕಾಮಗಾರಿ ವಿಳಂಬಕ್ಕೆ ಕೆಲಸಗಾರರ ಕೊರತೆ ಕಾರಣ ಎಂದು ಗುತ್ತಿಗೆದಾರರು ಸಬೂಬು ಹೇಳಿದಾಗ, ಅದಕ್ಕೆ ನಾವು ಜವಾಬುದಾರರಲ್ಲ. ಕಾಮಗಾರಿ ಮಾಡಲಾಗದೆ ಇದ್ದರೆ ಬಿಟ್ಟುಹೋಗಿ. ಕಾರಣಗಳನ್ನು ಹೇಳುತ್ತಾ ಕಾಲಹರಣ ಮಾಡಬೇಡಿ. ಬಾಕಿ ಉಳಿದ ಕಾಮಗಾರಿ ಅತ್ಯಂತ ತ್ವರಿತವಾಗಿ ಆಗಬೇಕು. ಇಲಾಖೆಯ ಮಾನ ಹೋಗುವ ರೀತಿ ಕೆಲಸ ಮಾಡಬೇಡಿ ಎಂದರು.

ನೇಮಕ
ಕಾಮಗಾರಿ ವೇಗವಾಗಿ ಮುಗಿಯಲು ಅಗತ್ಯವುಳ್ಳ ಮಾರ್ಗದರ್ಶನಕ್ಕಾಗಿ ಉಡುಪಿಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗಣೇಶ್‌ ನೇತೃತ್ವದ ತಂಡವೊಂದನ್ನು ನೇಮಿಸಲಾಯಿತು.

Advertisement

ಕಳಪೆ
1 ತಿಂಗಳಿನಿಂದ ಹೊಸ ಸಂಪರ್ಕ ನೀಡಲಾಗುತ್ತಿಲ್ಲ. ಗುತ್ತಿಗೆದಾರರ ಅಸಹಕಾರ ಎಂದು ಎಂಜಿನಿಯರ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಶ್ಮಶಾನ ಬಳಿ ಎರಡು ಟ್ಯಾಂಕ್‌ಗಳಿದ್ದು ಒಂದೇ ಟ್ಯಾಂಕಿಗೆ ಸಂಪರ್ಕ ನೀಡಿದ ಕಾರಣ ಖಾರ್ವಿಕೇರಿ, ಮಧ್ಯಖಾರ್ವಿಕೇರಿಗೆ ನೀರಿನ ಹರಿವು ವೇಗವಾಗಿ ಇರುವುದಿಲ್ಲ. ಹೊಸ ಟ್ಯಾಂಕ್‌ ನಿರ್ಮಾಣವಾಗಿದ್ದರೂ ಸಂಪರ್ಕವನ್ನೂ ನೀಡಿಲ್ಲ. ಪರೀಕ್ಷಾರ್ಥ ನೀರು ತುಂಬಿಸಿದಾಗ ಸೋರುತ್ತಿತ್ತು. ಕಳಪೆ ಎಂಬ ಅನುಮಾನವೂ ಇದೆ ಎಂದು ಸದಸ್ಯರು ಹೇಳಿದಾಗ ಕಳಪೆ ಅಲ್ಲ. ಕಾಮಗಾರಿ ಸಂದರ್ಭದ ತಾಂತ್ರಿಕ ಕಾರಣದಿಂದ ಸೋರುತ್ತಿತ್ತು. ಸರಿಪಡಿಸಲು ಸೂಚಿಸಲಾಗಿದೆ. ಕಳಪೆಯಾದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಸಮಸ್ಯೆಗಳ ಸರಣಿ
ಸದಸ್ಯರಾದ ಮೋಹನದಾಸ ಶೆಣೈ, ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಗಿರೀಶ್‌ ಜಿ.ಕೆ., ಪ್ರಭಾಕರ್‌ ವಿ., ಕಮಲಾ ಮಂಜುನಾಥ್‌, ಶ್ರೀಧರ ಶೇರೆಗಾರ್‌, ಸಂತೋಷ್‌ ಕುಮಾರ್‌ ಶೆಟ್ಟಿ ಮೊದಲಾದವರು ಜಲಸಿರಿ ಯೋಜನೆ ಕುರಿತು ಸಮಸ್ಯೆಗಳ ಸರಣಿಯನ್ನೇ ಬಿಚ್ಚಿಟ್ಟರು.

ಅಧ್ಯಕ್ಷೆ ವೀಣಾ ಭಾಸ್ಕರ್‌ ಮೆಂಡನ್‌, ಉಪಾಧ್ಯಕ್ಷ ಸಂದೀಪ್‌ ಖಾರ್ವಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್‌ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜಲಸಿರಿ ಯೋಜನೆ ಎಂಜಿನಿಯರ್‌ ಹರೀಶ್‌ ಮೊದಲಾದವರು ಉಪಸ್ಥಿತರಿದ್ದರು.

ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ
ಜಲಸಿರಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಭೇಟಿ ನೀಡಿತು. ಕೋಡಿಯಲ್ಲಿ ಸುಮಾರು 50 ಮನೆಗಳಿಗೆ ಭೇಟಿ ನೀಡಿ ಒಂದೆಡೆ ಪೈಪ್‌ಲೈನ್‌ ಅಳವಡಿಕೆಗೆ ವಿರೋಧ ಇದ್ದಲ್ಲಿಗೆ ಹೋದಾಗ ಮನೆಮಂದಿ, ನಮ್ಮ ಗಮನಕ್ಕೆ ತಾರದೆ ಪೈಪ್‌ಲೈನ್‌ ಹಾಕಲು ಮುಂದಾ ದಾಗ ವಿರೋಧಿಸಿದ್ದೇವೆ. ಗಮನಕ್ಕೆ ತಂದು ಕಾಮಗಾರಿ ಮಾಡಲು ವಿರೋಧ ಇಲ್ಲ ಎಂದರು. 10 ಮೀ.ಗಿಂತ ಹೆಚ್ಚುವರಿ ಪೈಪ್‌ಲೈನ್‌ ಬೇಕಾದಲ್ಲಿ ಹೆಚ್ಚುವರಿ ಹಣ ನೀಡಬೇಕಾಗುತ್ತದೆ ಎಂದು ಸೂಚಿಸಲಾಯಿತು. ಅರೆಬರೆ ಕಾಮಗಾರಿ ಆದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.

“ಸುದಿನ’ ವರದಿ
“ಉದಯವಾಣಿ’ “ಸುದಿನ’ ಪತ್ರಿಕೆಯಲ್ಲಿ ಮಾ.17ರಂದು “ಕುಡಿಯುವ ನೀರಿನ ಯೋಜನೆಯೆಂಬ ಬಿಳಿಯಾನೆ’ ಎಂಬ ವರದಿ ಪ್ರಕಟವಾಗಿದೆ. ಜನಸಾಮಾನ್ಯರು ಕೂಡ ಈ ವರದಿಯ ಕುರಿತು ಚರ್ಚಿಸುತ್ತಿದ್ದಾರೆ. ಜನರ ಕಷ್ಟ ಪತ್ರಿಕೆಯವರಿಗೆ ಅರ್ಥವಾಗುತ್ತದೆ. ಜನರ ಮನದಾಳದ ನೋವು ವರದಿಯಾಗಿ ಪ್ರಕಟವಾಗುತ್ತದೆ. ಆದರೆ ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಜನರ ಎದುರು ಜನಪ್ರತಿನಿಧಿಗಳು ತಲೆ ತಗ್ಗಿಸುವಂತೆ ಅಧಿಕಾರಿಗಳು ವರ್ತಿಸುತ್ತಿರುವುದು ಖಂಡನೀಯ. ಇಷ್ಟು ದೊಡ್ಡ ಮೊತ್ತದ ಯೋಜನೆ ನಿಷ#ಲ ಆಗಲು ಅಧಿಕಾರಿಗಳೇ ಕಾರಣ ಎಂದಾಗುತ್ತದೆ. ಆಡಳಿತ ಮಂಡಳಿ ಮೇಲೆ ಇಂತಹ ಕಳಂಕ ಬರುವಂತೆ ಆಗಬಾರದು ಎಂದು ಸದಸ್ಯ ಗಿರೀಶ್‌ ಜಿ.ಕೆ. ಹೇಳಿದರು.

ಮುಂದಿನ ತಿಂಗಳು ಚಾಲನೆ
ಮುಂದಿನ ತಿಂಗಳು ಪೈಪ್‌ನಲ್ಲಿ ನೀರು ಹರಿಯಲಿದೆ. 75 ಎಚ್‌ಪಿ ಸಾಮರ್ಥ್ಯದ 2 ಪಂಪ್‌ಗ್ಳಿಗೆ ಬೇಡಿಕೆ ಇಡಲಾಗಿದ್ದು ಮಂಜೂರು ಗೊಳಿಸಲಾಗಿದೆ. ಅವಶ್ಯ ವಿನ್ಯಾಸಗೊಂಡು ಒಂದೂ ವರೆ ತಿಂಗಳೊಳಗೆ ಬರಲಿದೆ. ಬಾಕಿ ಉಳಿದ 2.2 ಕಿ.ಮೀ. ಪೈಪ್‌ಲೈನ್‌ಗೆ 1 ತಿಂಗಳ ಗಡುವು ನೀಡಲಾಗಿದೆ. ಹೊಸ ಸಂಪರ್ಕ ಅರ್ಜಿಗೆ 1 ವಾರದೊಳಗೆ ಸಂಪರ್ಕ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಏಜೆನ್ಸಿ ನೇಮಿಸಲಾಗುವುದು. ಜಲ್ಲಿ ಕೊರತೆಯಿಂದ ಕೆಲವೆಡೆ ಕಾಮಗಾರಿ ಬಾಕಿಯಾಗಿದೆ. ಹೊಸ ಸಂಪರ್ಕಕ್ಕೆ
1,500 ರೂ. ನೀಡಬೇಕಿದ್ದು ಅದಕ್ಕೆ ಕಂತುಗಳ ಪಾವತಿ ಅವಕಾಶ ನೀಡಲಾಗಿದೆ.
-ಮಂಜುನಾಥ್‌, ಉಪ ಯೋಜನಾ ನಿರ್ದೇಶಕರು, ಜಲಮಂಡಳಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next