ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕು ಕೋಳೂರು ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಪಂಗಳಿಗೆ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಶುಕ್ರವಾರ ಭೇಟಿ ನೀಡಿ ನರೇಗಾ ಸೇರಿ ವಿವಿಧ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿ, ಪ್ರಗತಿ ಪರಿಶೀಲನೆ ನಡೆಸಿದರು.
ಕೋಳೂರು ಗ್ರಾಪಂಗೆ ಭೇಟಿ ನೀಡಿದ ವೈ.ಎಂ. ಸತೀಶ್ ಅವರು, ಗ್ರಾಪಂನ ಎಲ್ಲ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಮಾಹಿತಿ ಪಡೆದರು. ಕೋಳೂರು ಗ್ರಾಮದ ಹೊರ ವಲಯದ ಸಿರುಗುಪ್ಪ ರಸ್ತೆ ಪಕ್ಕದ ನಾಲ್ಕು ಎಕರೆ ಭೂಮಿಯಲ್ಲಿ ನರೇಗಾ ಕಾಮಗಾರಿ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಕುಡಿಯುವ ನೀರಿನ ಸ್ಥಳಕ್ಕೆ ಭೇಟಿ ನೀಡಿ, ಕೆಲಸಕ್ಕೆ ಹಾಜರಾಗಿದ್ದ 800 ಕೂಲಿಗಳ ಆರೋಗ್ಯ, ಬಿಸಿಲಿನ ತಾಪಮಾನ ಮತ್ತು ಕೂಲಿ ಪಾವತಿ ಕುರಿತು ಕೂಲಿಗಳು ಮತ್ತು ಪಿಡಿಒ ಜೊತೆ ಸಮಾಲೋಚನೆ ನಡೆಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜುಬೇದ ಅವರು, 4 ಎಕರೆ ಕುಡಿಯುವ ನೀರಿನ ಕೆರೆ ನಿರ್ಮಾಣ ಪೂರ್ಣಗೊಂಡ ನಂತರ ಸಿಂಗೇರಿ ಅಥವಾ ಡಿ. ಕಗ್ಗಲ್ ಗ್ರಾಮದ ಎಲ್ ಎಲ್‌ಸಿ ಕಾಲುವೆಯಿಂದ ನೀರನ್ನು ಪಡೆಯಲು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ನಿಗದಿಪಡಿಸಿರುವ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕರಿಗೆ ವಿವರಣೆ ನೀಡಿದರು.
ಶಾಸಕ ವೈ.ಎಂ. ಸತೀಶ್ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ನೀಡಿದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕಾಮಗಾರಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸದಸ್ಯರು ಮತ್ತು ಪಿಡಿಒ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಲ್ಲಿ ಕೋರಿದರು.
ಸೋಮಸಮುದ್ರ, ಸಿಂ ಗೇರಿ ಮತ್ತು ದಮ್ಮೂರು ಗ್ರಾಪಂಗಳಿಗೆ ಶಾಸಕರು ಭೇಟಿ ನೀಡಿದರು. ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರು ದಮ್ಮೂರು ಗ್ರಾಮದಲ್ಲಿ ಭೇಟಿ ಆಗಿ, ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದರು. ಮೇ 7ರಂದು ಬಾದನಹಟ್ಟಿ ಜಿಪಂ ವ್ಯಾಪ್ತಿಯ ಯರ್ರಂಗಳಿ, ಬಾದನಹಟ್ಟಿ, ಸಿದ್ಧಮ್ಮನಹಳ್ಳಿ, ಕಲ್ಲುಕಂಬ ಮತ್ತು ಓರ್ವಾಯಿ ಗ್ರಾಪಂಗಳಿಗೆ ವಿಧಾನಪರಿಷತ್ ಸದಸ್ಯರು ಭೇಟಿ ನೀಡಲಿದ್ದಾರೆ.