Advertisement

ವಂಡ್ಸೆಯಲ್ಲಿ ಕುಡಿಯುವ ನೀರು ಉಪ್ಪುಪ್ಪು!

08:06 PM Mar 15, 2020 | Sriram |

ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಈ ಬೇಸಗೆಯೂ ಸ್ವಲ್ಪ ಬೇಸರವೇ ಆಗಿದೆ. ಈ ಬಾರಿ ಇಲ್ಲಿ ಹೆಚ್ಚಿನ ಟ್ಯಾಂಕರ್‌ ಮೂಲಕ ನೀರಿನ ಸರಬರಾಜಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ತಾ.ಪಂ. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ.

Advertisement

ವಂಡ್ಸೆ: ಕಳೆದ ವರುಷ ಎಪ್ರಿಲ್‌, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿರುವ ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ಬಾರಿ ಮಾರ್ಚ್‌ ತಿಂಗಳಲ್ಲೇ ನೀರಿನ ಕ್ಷಾಮ ಎದುರಾಗಿದ್ದು ಅದನ್ನು ಎದುರಿಸಲು ಪಂಚಾಯತ್‌ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೈಕೊಟ್ಟ ಬೋರ್‌ವೆಲ್‌
ಕಳೆದ ಬಾರಿ ಬೋರ್‌ವೆಲ್‌ನಲ್ಲಿ ಸಿಹಿನೀರು ಬರುತ್ತಿತ್ತು ಹಾಗಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಹೆಚ್ಚು ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಬೋರ್‌ ವೆಲ್‌ ನಲ್ಲಿ ಉಪ್ಪು ನೀರು ಕಂಡು ಬಂದಿದ್ದು ಬಳಕೆ ಅಸಾಧ್ಯವಾಗಿದೆ. ಬಹುತೇಕ ಕಡೆಗಳಲ್ಲಿ ಬಾವಿ ನೀರೂ ಬತ್ತಿ ಹೋಗಿದ್ದು, ನೀರಿಗಾಗಿ ಬವಣೆ ಪಡುವಂತಾಗಿದೆ.

ಎಲ್ಲೆಲ್ಲಿ ಸಮಸ್ಯೆ?
ವಂಡ್ಸೆಯ ಮೂಕಾಂಬಿಕಾ ಕಾಲನಿ, ವಂಡ್ಸೆ ಪೇಟೆ, ಹರವರಿ, ಉದ್ದಿನ ಬೆಟ್ಟು, ಮಾವಿನ ಕಟ್ಟೆ, ಆತ್ರಾಡಿ ಪರಿಸರದಲ್ಲಿ ಬಾವಿ ನೀರು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗಿದೆ. ಇಲ್ಲಿ ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ವಲಸೆ ಹೋಗಬೇಕಾಗುವ ಪರಿಸ್ಥಿತಿ ಇದೆ. ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಜನಗಣತಿ ಪ್ರಕಾರ ಸುಮಾರು 3000 ಮಂದಿ ವಾಸವಾಗಿದ್ದಾರೆ. ಅವರು ಪೈಪ್‌ ನೀರು ಹಾಗೂ ಬಾವಿ ನೀರನ್ನೇ ಅವಲಂಬಿಸಿದ್ದಾರೆ.

ಟ್ಯಾಂಕರ್‌ ನೀರು ಸರಬರಾಜು
ಕಳೆದ ವರ್ಷ 2 ಲಕ್ಷ ರೂ. ವೆಚ್ಚದಲ್ಲಿ ತಾ.ಪಂ.ನ ಟಾಸ್ಕ್ಫೋರ್ಸ್‌ ಮೂಲಕ ಕುಡಿಯುವ ನೀರು ಒದಗಿಸಲಾಗಿತ್ತು. ಆದರೆ ಈ ಬಾರಿ 3 ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಲಾಗಿದ್ದು ಅದಕ್ಕೂ ಹೆಚ್ಚಿನ ಟ್ಯಾಂಕರ್‌ ಮೂಲಕ ನೀರಿನ ಸರಬರಾಜಿನ ಅಗತ್ಯತೆ ಇದೆ. ಅ ನಿಟ್ಟಿನಲ್ಲಿ ತಾಲೂಕು ಪಂಚಾಯತ್‌ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾದಿತು.

Advertisement

ಶಾಶ್ವತ ಪರಿಹಾರ ಬೇಕು
ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆ ನಿಭಾಯಿಸಲು ಟ್ಯಾಂಕರ್‌ ನೀರು ಬಳಸುವ ಬದಲು ನಿರ್ದಿಷ್ಟ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮಕೈಗೊಳ್ಳಬೇಕು.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ.

ಪರಿಹಾರ ಕ್ರಮವೇನು?
ಹೆಮ್ಮಾಡಿ ಕಟ್‌ ನಲ್ಲಿ ಹಾಕಲಾದ ವೆಂಟೆಡ್‌ ಡ್ಯಾಮ್‌ ಮೂಲಕ ಉಪ್ಪು ನೀರು ಚಕ್ರ ನದಿಗೆ ಹರಿದು ಬರುತ್ತಿದ್ದು ಈ ನದಿ ನೀರು ಸಂಪೂರ್ಣವಾಗಿ ಉಪ್ಪು ಮಯವಾಗಿದೆ. ಇದಕ್ಕೆ ಪರ್ಯಾಯಾವಾಗಿ ವಂಡ್ಸೆಯ ಆಯ್ದ ಸೂಕ್ತ ಪ್ರದೇಶದಲ್ಲಿ ಡ್ಯಾಮ್‌ ನಿರ್ಮಾಣ ಮಾಡಿದರೆ ಸಿಹಿ ನೀರು ದೊರೆಯುವುದು.

ಸೂಕ್ತ ಕ್ರಮ
ವಂಡ್ಸೆ ಗ್ರಾಮಸ್ಥರ ನೀರಿನಕ್ಷಾಮ ನಿಭಾಯಿಸುವಲ್ಲಿ ಪಂಚಾಯತ್‌ ಎಲ್ಲಾ ರೀತಿಯ ಸಹಕಾರಕ್ಕೆ ಸನ್ನದ್ಧವಾಗಿದೆ. ಉಪ್ಪು ನೀರಿನ ಸಮಸ್ಯೆ ಬಗೆಹರಿಸುವುದು ಸವಾಲಾಗಿದೆ. ಗ್ರಾಮಸ್ಥರ ಸಹಕಾರದೊಡನೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ರೂಪ ಗೋಪಿ
ಪಿಡಿಒ. ವಂಡ್ಸೆ ಗ್ರಾ.ಪಂ.

ಅನುದಾನ ಅಗತ್ಯ
ಗಂಭೀರವಾಗಿರುವ ಉಪ್ಪು ನೀರಿನ ಸಮಸ್ಯೆ ನಿಭಾಯಿಸುಲ್ಲಿ ಪ್ರತ್ಯೇಕ ವೆಂಟೆಡ್‌ ಡ್ಯಾಮ್‌ ನಿರ್ಮಾಣದ ಅಗತ್ಯವಿದೆ ಸರಕಾರವು ಅನುದಾನ ಬಿಡುಗಡೆಗೊಳಿಸಿದಲ್ಲಿ ನೀರಿನ ಕ್ಷಾಮ ಹಾಗೂ ಉಪ್ಪು ನೀರಿನ ಸಮಸ್ಯೆಗೆ ಏಕಕಾಲದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ
– ಉದಯ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ವಂಡ್ಸೆ ಗ್ರಾ.ಪಂ.

- ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next