Advertisement

ಒಂದು ಕೊಡ ನೀರಿಗೆ ಮೂರು ದಿನ ಕಾಯಬೇಕು…!

01:00 AM Mar 13, 2019 | Harsha Rao |

ತಲ್ಲೂರು: ಇಲ್ಲಿ ಸುತ್ತ 3 ನದಿ ಹರಿಯುತ್ತಿದೆ. 5 ನದಿಗಳು ಸಂಗಮವಾಗುವ ಪಂಚಗಂಗಾವಳಿ ತಟದಲ್ಲಿಯೇ ಈ ಊರಿದೆ. ಸರಕಾರಿ ಕೆರೆ, ಸ್ವಂತ ಬಾವಿಯಿದೆ. ಆದರೂ ಅದರಲ್ಲಿ ನೀರಿಲ್ಲ. ನೀರಿದ್ದರೂ ಉಪ್ಪು ನೀರು. ಇಲ್ಲಿನ ಜನ ಒಂದು ಕೊಡ ಕುಡಿಯುವ ನೀರಿಗಾಗಿ 3 ದಿನ ಕಾಯಬೇಕಾದ ದುಃಸ್ಥಿತಿಯಿದೆ. 

Advertisement

ಇದು ಕುಂದಾಪುರ ತಾಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರಲ್ಲಿರುವ ತಲ್ಲೂರು ಗ್ರಾಮದ ಉಪ್ಪಿನಕುದ್ರು ಸಮೀಪದ ಬಾಳೆಬೆಟ್ಟು ಜನರ ಪಾಡು. 

25 ಮನೆ
ಉಪ್ಪಿನಕುದ್ರುವಿನ ಎಸ್‌ಸಿ ಕಾಲನಿ ಎಂದೇ ಹೆಸರಾದ ಬಾಳೆಬೆಟ್ಟು ಪರಿಸರದಲ್ಲಿ ಒಟ್ಟು 25 ಮನೆಗಳಿವೆ. ಸುಮಾರು 200 ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಪಂಚಾಯತ್‌ನಿಂದ ಸಾರ್ವಜನಿಕ ನಳ್ಳಿಯಿದ್ದರೂ, ಅದರಲ್ಲಿ 3 ದಿನಕ್ಕೊಮ್ಮೆ ನೀರು ಬರುತ್ತಿದೆ. ಅದು ಕೂಡ ಸರಿಯಾಗಿ ಬರುತ್ತಿಲ್ಲ. ಗಂಡಸರೆಲ್ಲ ಸ್ನಾನಕ್ಕಾಗಿ ಇಲ್ಲೇ 1.5 ಕಿ.ಮೀ. ದೂರದ ಗೋಪಾಲಕೃಷ್ಣ ದೇವಸ್ಥಾನದ ಕೆರೆ ನೀರು ಬಳಸುತ್ತಿದ್ದೇವೆ. ಆದರೆ ಇದು ಹೆಂಗಸರಿಗೆ ಕಷ್ಟ ಎನ್ನುವುದು ಸ್ಥಳೀಯರಾದ ಬಸವ ಅವರ ಅಳಲು. 

ಯಾರು ಹೊಣೆ?
ಇಲ್ಲಿ ಕೆಲ ಮನೆಗಳಲ್ಲಿ ಸ್ವಂತ ಬಾವಿಯಿದೆ. ಅದರಲ್ಲಿ ನೀರಿದ್ದರೂ, ಅದು ಉಪ್ಪು ನೀರು. ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಅಡುಗೆ ಮಾಡಲು ಅಂತೂ ಬಳಸಲು ಸಾಧ್ಯವಿಲ್ಲ ದಂತಾಗಿದೆ. 3 ತಿಂಗಳಿನಿಂದ ಈ ಸಮಸ್ಯೆಯಿದೆ. ಕಲುಷಿತ, ಉಪ್ಪು ನೀರು ಬಳಕೆಯಿಂದ ಆರೋಗ್ಯ ಸಮಸ್ಯೆಯಾದರೆ ಯಾರು ಹೊಣೆ ಎನ್ನುವುದು ಸುಮನಾ ಅವರ ಪ್ರಶ್ನೆ. 

ಟ್ಯಾಂಕರ್‌ ನೀರು ಪೂರೈಕೆ
ಪ್ರತಿವರ್ಷ ಬಾಳೆಬೆಟ್ಟುವಿನ ಎಸ್‌ಸಿ ಕಾಲನಿಯಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಅಲ್ಲಿಗೆ ನಳ್ಳಿ ನೀರು ಪೂರೈಕೆ ಮಾಡಲಾಗುತ್ತಿದ್ದು, ನೀರಿನ ಬಿಲ್‌ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ವೈಯಕ್ತಿಕ ನಳ್ಳಿ ನೀರು ಹಾಕಿಸಿಕೊಳ್ಳಿ ಎಂದು ಹೇಳಿದರೂ, ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಈ ವರ್ಷ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದ್ದು, ಟ್ಯಾಂಕರ್‌ ನೀರು ಪೂರೈಸಲಾಗುವುದು ಎಂದು ತಲ್ಲೂರು ಗ್ರಾ.ಪಂ. ಕಾರ್ಯದರ್ಶಿ ವಾಸುದೇವ ಶಾನುಭಾಗ್‌ ತಿಳಿಸಿದ್ದಾರೆ. 

Advertisement

10-15 ಮನೆಗಳಿಗೆ 1 ನಳ್ಳಿ
ಇಲ್ಲಿನ ಬತ್ತಹೋದ ಕೆಳಿÕಬೆಟ್ಟು ಸರಕಾರಿ ಕೆರೆ ಸಮೀಪ ಒಂದು ನಳ್ಳಿಯಿದೆ. ಇದು ಸ್ವಲ್ಪ ತಗ್ಗು ಪ್ರದೇಶದಲ್ಲಿರುವುದರಿಂದ ನೀರು ಬರುತ್ತಿದ್ದು, ಇಲ್ಲಿನ 10-15 ಮನೆಯವರು ಇದೊಂದೇ ನಳ್ಳಿಯನ್ನು ಆಶ್ರಯಿಸಿದ್ದಾರೆ.  

ಬಾವಿ ತೋಡಿದರೂ ಪ್ರಯೋಜನವಿಲ್ಲ
15 ದಿನಗಳ ಹಿಂದೆ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬಾವಿ ತೋಡಿದೆ. 15 ಅಡಿ ಆಳ ತೋಡಿದ್ದು, ಈಗ ಸುಮಾರು 2 ಅಡಿ ಆಳದವರೆಗೆ ನೀರಿದೆ. ಕೆಂಪು ಕಲ್ಲು ಕಟ್ಟಲಾಗಿದೆ. ಬಾವಿಗೆ ಈ ವರೆಗೆ ಅಂದಾಜು 90 ಸಾವಿರ ರೂ. ಖರ್ಚಾಗಿದೆ. ಸಾಲ ಮಾಡಿ ಬಾವಿ ತೋಡಿದ್ದೇನೆ. ಪಂಚಾಯತ್‌ ಅನುದಾನ ಸಿಕ್ಕಿಲ್ಲ. ಇಷ್ಟು ಖರ್ಚು ಮಾಡಿದರೂ ಸಿಕ್ಕಿದ್ದು ಉಪ್ಪು ನೀರು. 
– ಮಂಜುನಾಥ ದೇವಾಡಿಗ, ಚಾವಡಿಮನೆ

ಪರಿಶೀಲಿಸಿ, ಕ್ರಮ
ಬಾಳೆಬೆಟ್ಟುವಿನ ನೀರಿನ ಸಮಸ್ಯೆ ಕುರಿತಂತೆ ಅಲ್ಲಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ, ಪರಿಶೀಲನೆ ನಡೆಸಿದ ಬಳಿಕ ಏನು ಪರಿಹಾರ ಕೈಗೊಳ್ಳಬೇಕು ಎನ್ನುವುದರ ಕುರಿತು ಪ್ರಯತ್ನಿಸಲಾಗುವುದು. ಬರ ಅಥವಾ ಟಾಸ್ಕ್ಪೋರ್ಸ್‌ ಅನುದಾನ ಬಳಸಿ, ಅಲ್ಲಿನ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು. 
– ಕಿರಣ್‌ ಪೆಡೆ°àಕರ್‌, ಕಾರ್ಯ ನಿರ್ವಹಣಾಧಿಕಾರಿ, ಕುಂದಾಪುರ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next