Advertisement

ಎಡಿಬಿ ಒಂದನೇ ಹಂತದ ಯೋಜನೆ ವೈಫಲ್ಯದಿಂದ ಕುಡಿಯುವ ನೀರಿನ ಸಮಸ್ಯೆ

11:33 PM Apr 29, 2019 | Sriram |

ಮಹಾನಗರ: ಎಡಿಬಿ ಒಂದನೇ ಹಂತದ ಯೋಜನೆ ಸಂಪೂರ್ಣ ವಿಫಲವಾದ್ದರಿಂದ ನಗರಕ್ಕೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಉಲ್ಬಣಕ್ಕೆ ಹಿಂದೆ ಆಡಳಿತ ನಡೆಸಿದವರೇ ಕಾರಣ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಆರೋಪಿಸಿದ್ದಾರೆ.

Advertisement

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 160 ಕೋಟಿ ರೂ. ವೆಚ್ಚದಲ್ಲಿ ಎಡಿಬಿ ಒಂದನೇ ಹಂತದ ಯೋಜನೆ ನಡೆದಿದೆ. ಯೋಜನೆ ಪ್ರಕಾರ 2023ರ ವರೆಗೆ ನಗರಕ್ಕೆ 24×7 ನೀರು ಕಲ್ಪಿಸಬಹುದಿತ್ತು. ಆದರೆ ತುಂಬೆಯಲ್ಲಿ ಶುದ್ಧೀಕರಣ ಘಟಕ, ನೀರಿನ ಟ್ಯಾಂಕ್‌, ಗುಣಮಟ್ಟದ ಪೈಪ್‌ ಅಳವಡಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದರಿಂದಲೇ ಪ್ರಸ್ತುತ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದರು.

ತುಂಬೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬ ಒತ್ತಾಯ ಎಡಿಬಿ ಒಂದನೇ ಹಂತದ ಕಾಮಗಾರಿಯ ವೇಳೆಯೇ ಕೇಳಿ ಬಂದಿತ್ತು. ಆದರೆ ಆಗಿನ ಕಾಂಗ್ರೆಸ್‌ ಸರಕಾರ ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಆಗ ಆ ಯೋಜನೆಯ ಮುಖ್ಯಸ್ಥರು ಮಾಜಿ ಶಾಸಕರೇ ಆಗಿದ್ದರು ಎಂದು ತಿಳಿಸಿದರು.

ಯಾರಧ್ದೋ ಒತ್ತಡ, ಲಾಬಿಗೆ ಮಣಿದು ನೀರು ಸರಬರಾಜು ಮಾಡಬೇಡಿ. ನಿಜವಾಗಿಯೂ ಸಮಸ್ಯೆ ಇರುವವರು, ಬಡವರು, ಎತ್ತರದ ಪ್ರದೇಶದಲ್ಲಿರುವವರಿಗೆ ಕೂಡಾ ನೀರು ಸಿಗಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ತುಂಬೆ ವೆಂಟೆಡ್‌ ಡ್ಯಾಂ ಪರಿಶೀಲನೆಗೆ ತೆರಳುವಾಗ ಶಾಸಕರನ್ನು ಕರೆದುಕೊಂಡು ಹೋಗಬೇಕಿತ್ತು. ಆದರೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವುದೇ ಮಾಹಿತಿ ನೀಡದೆ ತೆರಳಿರುವುದು ಸರಿಯಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.

ತುಂಬೆಯಲ್ಲಿ ಪ್ರಸ್ತುತ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ರೇಷನಿಂಗ್‌ ಆರಂಭಿಸುವುದು ಅನಿವಾರ್ಯ ಎಂಬುದಾಗಿ ಎಂಜಿನಿಯರ್‌ ತಿಳಿಸಿದ್ದಾರೆ. ಸಾರ್ವಜನಿಕರು ನೀರನ್ನು ಪೋಲು ಮಾಡದೇ, ಮಿತವಾಗಿ ಬಳಸಬೇಕು ಎಂದರು.ದ.ಕ. ಬಿಜೆಪಿ ಉಪಾಧ್ಯಕ್ಷ ರವಿಶಂಕರ್‌ ಮಿಜಾರು, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್‌ಚಂದ್ರ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ರಾಮ ಅಮೀನ್‌, ಮೀನುಗಾರ ಮುಖಂಡ ನಿತಿನ್‌ ಕುಮಾರ್‌, ರಮೇಶ್‌ ಉಪಸ್ಥಿತರಿದ್ದರು.

Advertisement

ಪರಿಹಾರ ನೀಡಲು ಸಿಎಂಗೆ ಬೇಡಿಕೆ
ತುಂಬೆ ವೆಂಟೆಡ್‌ ಡ್ಯಾಂನಲ್ಲಿ 7 ಮೀಟರ್‌ನಷ್ಟು ನೀರು ನಿಲ್ಲಬೇಕಾದರೆ ಹಲವರ ಜಾಗ ಮುಳುಗಡೆಯಾಗಿದೆ. ಜಾಗ ಕಳೆದುಕೊಂಡವರಿಗೆ 115-120 ಕೋಟಿ ರೂ. ಪರಿಹಾರ ನೀಡಬೇಕು. ಆದರೆ ಅಂದು ರಾಜ್ಯದಲ್ಲಿ, ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತ ಇದ್ದರೂ ಇಲ್ಲಿನ ಎಲ್ಲ ಶಾಸಕರು ಕಾಂಗ್ರೆಸ್‌ನವರಾದರೂ ಆಗ ಅವರಿಗೆ ಪರಿಹಾರ ತರಿಸಲು ಸಾಧ್ಯವಾಗಲಿಲ್ಲ ಎಂದು ಆಪಾದಿಸಿದ ವೇದವ್ಯಾಸ ಕಾಮತ್‌, ಈಗಿನ ದೋಸ್ತಿ ಸರಕಾರದಲ್ಲಿಯೂ ಈ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ಆದರೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ತಾನು ಎರಡು ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೇಡಿಕೆ ಇಟ್ಟಿದ್ದೇನೆ ಎಂದರು.

ಮೇಲ್ವಿಚಾರಣೆ ಸಮಿತಿ ರಚಿಸಲಾಗುವುದು
451 ಕೋಟಿ ರೂ. ವೆಚ್ಚದ ಎರಡನೇ ಹಂತದ ಎಡಿಬಿ ಯೋಜನೆಯು ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಕೇಂದ್ರದ ಅಮೃತ ಯೋಜನೆಯಲ್ಲಿ 35.51 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಯಾವುದೇ ವೈಫಲ್ಯವಾಗದಂತೆ ಮೇಲ್ವಿಚಾರಣೆ ಸಮಿತಿ ರಚಿಸಲಾಗುವುದು ಎಂದು ಶಾಸಕರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next