Advertisement

ಕುಡಿವ ನೀರಿನ ಸಮಸ್ಯೆ: ವಾರದೊಳಗೆ ವರದಿ ಸಲ್ಲಿಸಿ

09:29 AM Feb 21, 2019 | Team Udayavani |

ಶಿಡ್ಲಘಟ್ಟ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಾಗಲಿದ್ದು, ಈಗಾಗಲೇ ಹಲವು ಗ್ರಾಮಗಳಲ್ಲಿ ಹಾಹಾಕಾರ ಉಂಟಾಗಿದೆ. ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ವಾರದೊಳಗೆ ವರದಿ ಸಲ್ಲಿಸಬೇಕೆಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿ.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ವೇಳೆಯಲ್ಲಿ ಜನ ಮತ್ತು ಜಾನುವಾರು ಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗದಂತೆ ಅಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಶಾಸಕರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯ ವಾಸ್ತು ಸ್ಥಿತಿಯನ್ನು ನೋಡಿ ವರದಿ ಸಲ್ಲಿಸಬೇಕೆಂದು ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್‌ ಹಾಗೂ ನೋಡೆಲ್‌ ಅಧಿಕಾರಿಗಳಿಗೆ ಆದೇಶಿಸಿದರು.

ತಾಲೂಕಿನಲ್ಲಿ ಇತ್ತೀಚಿಗೆ 66 ಕೊಳವೆ ಬಾವಿ ಕೊರೆಸಿದ್ದು, ಅದರಲ್ಲಿ 30 ವಿಫ‌ಲ ಆಗಿವೆ. ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಕೊಟ್ಟ ಮಾಹಿತಿಯನ್ನು ಪ್ರಸ್ತಾಪಿಸಿದ ಶಾಸಕರು, ಖಾಸಗಿಯವರ ಕೊಳವೆಬಾವಿಗಳ ಮೂಲಕ ನೀರು ಪಡೆದು  ಜನಗಳಿಗೆ ಪೂರೈಸಬೇಕು. ನಾಗರಿಕರಿಂದ ದೂರು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕೆಂದು ಸೂಚಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶ ಗಳಿಗೆ ನೀರು ಪೂರೈಕೆ ಮಾಡುತ್ತಿರುವ ಪೈಪ್‌ಲೈನ್‌ಗಳ ಸ್ಥಿತಿಗತಿಗಳನ್ನು ನಿರಂತರವಾಗಿ ಪರಿಶೀಲಿಸಲು ಕ್ರಮ ಕೈಗೊಳ್ಳ ಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ವಿಶೇಷ ಗಮನ ಹರಿಸಲಾಗಿದ್ದು, ನಿರಂತರವಾಗಿ ಟಾಸ್ಕ ಫೋರ್ಸ್‌ ಸಭೆಗಳನ್ನು ಆಯೋಜಿಸಿ ಪ್ರತಿ ಹಂತದಲ್ಲಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಹಶೀಲ್ದಾರ್‌ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಜನಗಳಿಗೆ ಅನುಕೂಲ ಕಲ್ಪಿಸಬೇಕೆಂದರು. 

Advertisement

ವಿದ್ಯುತ್‌ ಕಡಿತ ಬೇಡ: ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜ್ಯೋತಿ ಯೋಜನೆ ಇರುವ ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆ ಕಡಿತ ಮಾಡ ಕೂಡದು, ಸಾರ್ವಜನಿಕರ ಕುಡಿಯುವ ನೀರು ಪೂರೈಕೆ ಕೊಳವೆಬಾವಿಗಳಿಗೆ ನಿರಂತರವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬೆಸ್ಕಾಂನ ನಗರ ಹಾಗೂ ಗ್ರಾಮೀಣ ಭಾಗದ ಎಇಇಗಳಿಗೆ ಶಾಸಕರು ಸೂಚಿಸಿದರು.

ಅಧಿಕಾರಿ ತರಾಟೆಗೆ: ಕೆಡಿಪಿ ಸಭೆಯಲ್ಲಿ ಅಪೂರ್ಣ ಹಾಗೂ ಅಸಮರ್ಪಕವಾಗಿ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದ ಜೆಇ ನಾರಾಯಣ ಸ್ವಾಮಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕರು, ಸಭೆಗೆ ನಿಖರ ಮತ್ತು ನೈಜ ವರದಿಯೊಂದಿಗೆ ಹಾಜ ರಾಗಬೇಕು. ತಪ್ಪು ವರದಿ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕೃಷಿ, ರೇಷ್ಮೆ, ಆರೋಗ್ಯ, ಶಿಕ್ಷಣ, ಅರಣ್ಯ, ಅಬಕಾರಿ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ತೋಟಗಾರಿಕೆ, ಆಹಾರ ಮತ್ತು ನಾಗರಿಕ ಸರಬಾಜು ಮತ್ತಿತರರ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಸಭೆಯಲ್ಲಿ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ, ತಾಪಂ ಇಒ ಶಿವಕುಮಾರ್‌, ನಗರಸಭೆ ಪೌರಾಯುಕ್ತ ಜಿ.ಎನ್‌.ಚಲಪತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next