Advertisement

ಚಾಮೆತ್ತಡ್ಕ ನಿವಾಸಿಗಳಿಗೆ ಮುಂದಿನ ಬೇಸಗೆಯೂ ಸಂಕಷ್ಟವೇ !

01:07 AM Sep 08, 2017 | Team Udayavani |

ಆಲಂಕಾರು: ಆಲಂಕಾರು ಗ್ರಾಮದ  ಚಾಮೆತ್ತಡ್ಕ, ಪೊಸೋನಿ ವ್ಯಾಪ್ತಿಯ ನಿವಾಸಿಗಳಿಗೆ  ಈ ವರ್ಷವೂ ಕುಡಿಯುವ ನೀರಿನ ಯೋಜನೆ ಜಾರಿಗೊಳ್ಳುವುದು ಕಷ್ಟವಾಗಿದೆ. ಈ ಯೋಜನೆ ಜಾರಿಗೆ ತಾಲೂಕು ಪಂಚಾಯತ್‌ ಕೇವಲ 50 ಸಾವಿರ ರೂ. ಅನುದಾನ ನೀಡಿದೆ. ಬೇರೆ ಯಾವುದೇ ಮೂಲಗಳಿಂದ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ.

Advertisement

ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಬೇಸಿಗೆಯ ಆರಂಭದಲ್ಲೇ ಅಭಾವ ಉಂಟಾಗುತ್ತದೆ. ಕಳೆದ ಬಾರಿ ಜನಪ್ರತಿನಿಧಿಗಳು ನೀಡಿದ್ದ ಭರವಸೆಯ ಆಧಾರದಲ್ಲಿ ಈ ವರ್ಷ ನೀರು ಸಿಗಬಹುದೆಂದು ಜನರು ಆಶಿಸಿದ್ದರು. ಅದೂ ಈಗ ಹುಸಿಯಾಗಿದೆ. ಹಾಗಾಗಿ ಇಲ್ಲಿಯ ನಿವಾಸಿಗಳು ಮುಂದಿನ ಬೇಸಗೆಯಲ್ಲೂ ನೀರಿಗಾಗಿ ಹೊಗೆಯಲ್ಲಿ ಗುಂಡಿ ತೋಡಬೇಕಿದೆ. ಜತೆಗೆ ನೀರಿಗಾಗಿ ಕುಮಾರಧಾರಾ ಕಿರು ನದಿಯ ಉದ್ದಗಲಕ್ಕೂ ಜೆಸಿಬಿ ಯಂತ್ರ ಮತ್ತು ಮಾನವ ಶ್ರಮದ ಮೂಲಕ ಗುಂಡಿ ತೋಡುವ ಕಾಯಕ ಮುಂದುವರಿಸಬೇಕಾಗಿದೆ.

ಕಳೆದ ವರ್ಷದಿಂದ ಈ ಭಾಗದಲ್ಲಿ ಜಿ.ಪಂ. ಅನುದಾನದಲ್ಲಿ ಕೊಳವೆಬಾವಿ ಮತ್ತು ಟ್ಯಾಂಕ್‌ ನಿರ್ಮಿಸಲಾಗುತ್ತದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಈ ಕುಡಿಯುವ ನೀರಿನ ಯೋಜನೆಯನ್ನು ಪಂಚವಾರ್ಷಿಕ ಯೋಜನೆಯಡಿ ಸೇರಿಸಲಾಗಿದೆ. ಸಮರ್ಪಕ ನೀರಿನ ವ್ಯವಸ್ಥೆಗೆ ಅಂದಾಜು 20 ಲಕ್ಷ ರೂ. ಬೇಕಿದೆ. ಈ ವ್ಯಾಪ್ತಿಯಲ್ಲಿ 67 ಮನೆಗಳಿದ್ದು 1,000ಮೀಟರ್‌ ದೂರದವರೆಗೆ ಪೈಪ್‌ಲೈನ್‌ ಹಾಕಬೇಕಿದೆ. 

50 ಸಾವಿರ ರೂ. ಬಿಡುಗಡೆ
ಈ ಪೈಪ್‌ಲೈನ್‌ಗಾಗಿ 50 ಸಾವಿರದ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಕ್ರಿಯಾಯೋಜನೆಯ ಪ್ರಕ್ರಿಯೆಪೂರ್ಣಗೊಂಡಿದೆ. ಶೀಘ್ರವೇ ಪೈಪ್‌ಲೈನ್‌ನ ಕಾಮಗಾರಿ ಪ್ರಾರಂಭ ಗೊಳ್ಳಲಿದೆ, ಸಮಸ್ಯೆ ಕೂಡಲೇ  ಬಗೆಹರಿಸಲಾಗುವುದು ಎಂದು ತಾಲೂಕು ಪಂಚಾಯತ್‌ ಸದಸ್ಯೆ ತಾರಾತಿಮ್ಮಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಜನತೆ ಸ್ವಂತ ಬಾವಿ ಕೊರೆಯತೊಡಗಿದ್ದಾರೆ
ಈ ವ್ಯಾಪ್ತಿಯಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಜನತೆ ಸ್ವಂತ ಬಾವಿ ಕೊರೆಯತೊಡಗಿದ್ದಾರೆ ಕಳೆದ ಬಾರಿ ಮೂರು ಕುಟುಂಬಗಳು ಹೊಸ ಬಾವಿಯನ್ನು ತೋಡಿದ್ದು, ನೀರಿನ ಮೂಲವನ್ನು ಶೋಧಿಸಿದ್ದಾರೆ. ಕಿರು ತೋಡಿನಲ್ಲಿ ಗುಂಡಿಯನ್ನು ಒಮ್ಮೆ ದುರಸ್ತಿ ಮಾಡಿ ದರೆ ಕೇವಲ 15ರಿಂದ 25 ದಿನ ಮಾತ್ರ ನೀರು ನಿಲ್ಲುತ್ತದೆ. ಮತ್ತೆ ಗುಂಡಿ ಜರಿದು ಬಿದ್ದು ಮುಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಕಾಲೋನಿಯ ಜನ ಕುಡಿಯಲು ಸುಮಾರು 2ಕಿ.ಮೀ ಕುಮಾರಧಾರಾ ನದಿಗೆ ಕುಡಿಯುವ ನೀರಿಗಾಗಿ ಅಲೆದಾಡಬೇಕಿದೆ. 

Advertisement

ಗ್ರಾ.ಪಂ.ನಿಂದ ಅಸಾಧ್ಯ
ಅನುದಾನವನ್ನು ಗ್ರಾಮ ಪಂಚಾಯತ್‌ನಿಂದ ಭರಿಸಲು ಅಸಾಧ್ಯ. ತಾ.ಪಂ, ಜಿ.ಪಂ. ಮತ್ತು ಶಾಸಕರಲ್ಲಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ಅನುದಾನ ಶೀಘ್ರವೇ ಬಿಡುಗಡೆಗೊಳಿಸುವಂತೆ ಒತ್ತಡ ಹಾಕಲಾಗುವುದು. 
– ಸುಧಾಕರ ಪೂಜಾರಿ ಕಲ್ಲೇರಿ ಉಪಾಧ್ಯಕ್ಷ, ಗ್ರಾ.ಪಂ

Advertisement

Udayavani is now on Telegram. Click here to join our channel and stay updated with the latest news.

Next