ಸಕಲೇಶಪುರ: ಪದೇ ಪದೇ ಕೆಟ್ಟು ಹೋಗುವ ಮೋಟಾರ್‌ಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಇದರಿಂದ ನಾಗರಿಕರು ಖಾಸಗಿಯವರ ಟ್ಯಾಂಕರ್‌ಗಳ ಮುಖಾಂತರ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮೋಟಾರ್‌ಗಳು ಆಗಾಗ ಕೆಟ್ಟು ಹೋಗುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿದ್ದು ಇದರಿಂದ ಪಟ್ಟಣದ ನಾಗರಿಕರು ತೊಂದರೆ ಅನುಭವಿಸಬೇಕಾಗಿದೆ.
ಮೂರು ದಿನಕ್ಕೊಮ್ಮೆ ನೀರು: ಪಟ್ಟಣ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ಎರಡು ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಹೇಮಾವತಿ ನದಿಗೆ ಅತಿ ಹತ್ತಿರದಲ್ಲಿರುವ ಆಜಾದ್ ರಸ್ತೆ, ಕುಶಾಲನಗರ, ಅಗ್ರಹಾರ, ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಈ ಹಿನ್ನೆಲೆಯಲ್ಲಿ ದುಬಾರಿ ದರ ತೆತ್ತು ಖಾಸಗಿಯವರ ಮುಖಾಂತರ ನೀರು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಕೆಲವು ಹಿಂದುಳಿದ ಬಡಾವಣೆಗಳ ನಾಗರಿಕರಿಗೆ ನೀರು ಶೇಖರಣೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ ನಿತ್ಯ ಬಿಡುವ ನೀರನ್ನೆ ತಮ್ಮ ಕೆಲಸ ಕಾರ್ಯಗಳಿಗೆ ಆಶ್ರಯಿಸುತ್ತಿದ್ದು ಇದೀಗ ದಿನನಿತ್ಯ ನೀರು ಸಿಗದ ಕಾರಣ ಇಂತಹವರು ಪರದಾಡಬೇಕಾಗಿದೆ.
ಹಳೇ ಮೋಟಾರ್‌ಗೆ ಖರ್ಚು: ಹಳೇ ಮೋಟಾರ್ ರಿಪೇರಿ ಹೆಸರಿನಲ್ಲಿ ಪುರಸಭೆಯ ವರು ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದು ಈ ರೀತಿ ದುರಸ್ತಿ ಮಾಡುವ ಬದಲು ಹೊಸ ಮೋಟಾರ್‌ಗಳನ್ನೇ ಹಾಕಬಹುದಾಗಿದೆ. ನೀರು ಪೂರೈಕೆ ಮಾಡುವ ಮೋಟಾರ್‌ಗಳು ಪದೇ ಪದೇ ಕೈಕೊಡುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆಯವರು ಕನಿಷ್ಠ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.
● ಸುಧೀರ್ ಎಸ್.ಎಲ್.