ಇಳಕಲ್ಲ: ನಂದವಾಡಗಿಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
4-5 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಗ್ರಾಮ ಪಂಚಾಯತ ಹಾಗೂ ತಾಲೂಕಾಡಳಿತ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಸುಮಾರು ಎಂಟು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ನಂದವಾಡಗಿ ಗ್ರಾಮದ ಬೋರ್‌ವೆಲ್ಗಳ ನೀರು ಕುಡಿಯಲು ಹಾಗೂ ಬಳಸಲೂ ಸಹಿತ ಯೋಗ್ಯವಿಲ್ಲ.
ನೀರು ಪ್ಲೋರೈಡ್ ಹಾಗೂ ಲವಣಯುಕ್ತವಾಗಿರುವುದರಿಂದ ಗ್ರಾಮದಿಂದ 2ಕಿ.ಮಿ. ದೂರದ ಹರಿಣಾಪುರ ಗ್ರಾಮದ ಸಮೀಪ ಬೋರವೆಲ್ ಕೊರೆದು ಗ್ರಾಮ ಪಂಚಾಯತ ನೀರು ಪೂರೈಸುತ್ತಿತ್ತು. 1.5 ಕಿ.ಮೀ.ದೂರದಲ್ಲಿರುವ ಕೆರೆಯ ನೀರು ಅವಲಂಬಿಸಿದ್ದರು. ಆದರೆ, ಈ ವರ್ಷ ಮಳೆಯ ಕೊರತೆಯಿಂದಾಗಿ ಅಂತರ್‌ಜಲ ಆಳಕ್ಕೆ ಇಳಿದಿದ್ದು, ಬೋರ್‌ವೆಲ್ಗಳು ಸಂಪೂರ್ಣವಾಗಿ ಬಂದ್ ಆಗಿವೆ. ಬೆಳಗಾವಿ ರಾಯಚೂರು ಹೆದ್ದಾರಿಗೆ ಹೊಂದಿಕೊಂಡಿರುವ ಕೆರೆಯಿಂದ ನೀರು ತರಲು ಚಿಕ್ಕಮಕ್ಕಳು, ವೃದ್ಧರು ಹಾಗೂ ಹೆಣ್ಣು ಮಕ್ಕಳು ಹೋಗುತ್ತಾರೆ.
ಈಗಾಗಲೇ ತುರ್ತಾಗಿ ತಾತ್ಕಾಲಿಕ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಆದೇಶಿಸಿದ್ದು, ಇದಕ್ಕೆ ಶಾಶ್ವತ ಪರಿಹಾರ ಮಾಡಲಾಗುವುದು.-
ದೊಡ್ಡನಗೌಡ ಪಾಟೀಲ, ಶಾಸಕರು.
ವಾಹನ ದಟ್ಟಣೆ ಹೆಚ್ಚಿರುವ ರಸ್ತೆಯ ಮೇಲೆ ನೀರು ತರುವುದು ಅಪಾಯಕಾರಿಯಾಗಿದ್ದರೂ ಅನಿವಾರ್ಯವಾಗಿದೆ. ಈ ಭಾಗದ ಗ್ರಾಮಗಳ ಅಂತರ್‌ಜಲದಲ್ಲಿ ಪ್ಲೋರೈಡ್ ಅಂಶ ಹೆಚ್ಚಿರುವ ಕಾರಣದಿಂದ ಶುದ್ಧ ಕುಡಿಯುವ ನೀರು ಪೂರೈಸಲು 2010ರಲ್ಲಿ ಕೃಷ್ಣಾ ನದಿ ಪಾತ್ರದ ಇಸ್ಲಾಂಪುರದಿಂದ 60 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ 20ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಆದರೆ ಕಳಪೆ ಕಾಮಗಾರಿ ಹಾಗೂ ಕೆಟ್ಟ ನಿರ್ವಹಣೆಯಿಂದಾಗಿ ನಂದವಾಡಗಿ ಸೇರಿದಂತೆ ಯಾವ ಗ್ರಾಮಗಳಿಗೂ ಸಮರ್ಪಕವಾಗಿ ನೀರು ತಲುಪಲಿಲ್ಲ. ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ತನಿಖೆಯೂ ನಡೆಯಿತು ಆದರೆ ಯಾರ ಮೇಲೂ ಶಿಸ್ತಿನ ಕ್ರಮ ಜರುಗಲಿಲ್ಲ.
ಕೆರೆಯಿಂದ ನೀರು ತರಲು ರಾಜ್ಯ ಹೆದ್ದಾರಿ ಮೇಲೆ ಸಂಚರಿಸುವುದು ಅಪಾಯಕಾರಿಯಾಗದೆ. ಕೃಷ್ಣಾ ನದಿಯಿಂದ ನಿತ್ಯ ನೀರು ಕೊಡಿ. ಇಲ್ಲದಿದ್ದರೇ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಡನೆಸುತ್ತೇವೆ.-
ಅಕ್ಬರ್ ಗುಡಿಹಾಳ, ನಂದವಾಡಗಿ ಗ್ರಾಮಸ್ಥ
ಇಸ್ಲಾಂಪುರ ಬಳಿಯ ಜಾಕವೆಲ್ನಿಂದ ಬೆನಕನದೋಣಿ ಮೂಲಕ ಕಂದಗಲ್ಲ, ನಂದವಾಡಗಿ ಭಾಗದ ಹಳ್ಳಿಗಳಿಗೆ ಕೃಷ್ಣಾ ನೀರು ತಲುಪಿಸಲು ಅನುದಾನ ಬಿಡುಗಡೆಯಾಗಿತ್ತಾದರೂ ನೀರು ಮಾತ್ರ ಪೂರೈಕೆಯಾಗಲಿಲ್ಲ. ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ಹಾಗೂ ತಹಶೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನದಿಯಿಂದ ಪ್ರತಿದಿನ ನೀರು ಪೂರೈಸುವಂತೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.