ಕಟಪಾಡಿ: ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಒಂದೆಡೆ ಸಮುದ್ರ ಮತ್ತೂಂದೆಡೆ ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಕುಡಿಯುವ ನೀರಿನ ಜ್ವಲಂತ ಸಮಸ್ಯೆ ಎಗ್ಗಿಲ್ಲದೆ ಮುಂದುವರಿದಿದೆ.
ಕುಡಿಯುವ ನೀರನ್ನು ಒದಗಿಸುವ ಯೋಜನೆಗಾಗಿ ಕೋಟೆ ಗ್ರಾ.ಪಂ. ಬಾವಿ, ಕೊಳವೆ ಬಾವಿ, ಹ್ಯಾಂಡ್ ಪಂಪ್ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದೆ. ಆದರೆ ಇಲ್ಲಿನ ನೀರು ಕೆಂಪು ಬಣ್ಣಯುಕ್ತವಾಗಿ, ಲವಣಾಂಶ ಭರಿತವಾಗಿ, ಸ್ವಾದರಹಿತವಾಗಿ ಪರಿವರ್ತಿತವಾಗುವುದರಿಂದ ಸಮಸ್ಯೆ ಉಂಟಾಗಿದೆ.
ಮಟ್ಟು ಭಾಗದಲ್ಲಿ ಕುಡಿಯುವ ನೀರಿನ ಮೂಲವೇ ಇಲ್ಲವಾಗಿದ್ದು, ಉಪ್ಪು ನೀರಿನ ಸಮಸ್ಯೆ ಇದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಅನಿವಾರ್ಯತೆ ಇದೆ.
ಇದೀಗ ಉಪ್ಪು ನೀರಿನ ಬಾಧೆಯಿಂದ ಮಟ್ಟು ಗ್ರಾಮಕ್ಕೆ ಹೆಚ್ಚಿನ ಪಾಲು ಕುಡಿಯುವ ನೀರನ್ನು ಒದಗಿಸುವ ಜವಾಬ್ದಾರಿಯನ್ನು ಪಂಚಾಯತ್ ಹೊಂದಿದೆ. ಪ್ರಸ್ತುತ ಕಳೆದ ಸುಮಾರು 25 ದಿನಗಳಿಂದ ಕುಡಿಯುವ ನೀರಿನ ಪೈಪ್‌ಲೈನ್ ಕೈಕೊಟ್ಟಿದ್ದು, ದುರಸ್ತಿ ಸಾಧ್ಯವಾಗಿಲ್ಲ. ಆ ಕಾರಣದಿಂದ ಈ ಭಾಗದ ಸುಮಾರು 200 ಮನೆಗಳಿಗೆ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಶೈಲೇಶ್ ಶೆಟ್ಟಿ ಪಾಂಗಾಳ ಅವರು ನೀರನ್ನು ಉಚಿತವಾಗಿ ನೀಡುತ್ತಿದ್ದು, ಪ್ರತೀ ಮನೆಗೆ 200 ಲೀಟರ್ ಕುಡಿಯುವ ನೀರು ಒದಗಿಸಲು ನಿತ್ಯ ತಲಾ 3 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಮೂಲಕ 6 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ವೆಚ್ಚವನ್ನು ಗ್ರಾ.ಪಂ. ಭರಿಸುತ್ತಿದೆೆ.
ಈ ಮೊದಲಿನಂತೆಯೇ ಮಟ್ಟು ಭಾಗದ ಪರೆಂಕುದ್ರು, ದಡ್ಡಿ, ಮಟ್ಟು ಕೊಪ್ಲ, ಕಾಲನಿ, ಮಟ್ಟು ಕಟ್ಟ, ಆಳಿಂಜೆ ದೇವರಕುದ್ರು, ಮಟ್ಟು ಬೀಚ್, ದುಗ್ಗುಪ್ಪಾಡಿ ಸಹಿತ ಮತ್ತಿತರೆಡೆಗಳ ಸುಮಾರು 500ಕ್ಕೂ ಮಿಕ್ಕಿದವರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಕಳೆದ 6 ವರ್ಷಗಳಿಂದ ಆರಂಭಿಸಲಾಗಿತ್ತು.
ಇತರ ಸಮಸ್ಯೆಗಳೇನು? :
- ಮಟ್ಟು ಬೀಚ್ ತ್ಯಾಜ್ಯ ಎಸೆಯುವ ಕೇಂದ್ರವಾಗಿ ಮಾರ್ಪಡುತ್ತಿದೆ. ತ್ಯಾಜ್ಯ, ಕಸ ವಿಲೇವಾರಿಗೆ ವ್ಯವಸ್ಥೆ ಇಲ್ಲ.
- ತುರ್ತು ಚಿಕಿತ್ಸೆಗೆ ಯಾವುದೇ ವೈದ್ಯರ ಕ್ಲಿನಿಕ್ ಇಲ್ಲ. ಸುಮಾರು 3 ಕಿ.ಮೀ. ದೂರದ
- ಕಟಪಾಡಿಗೆ ತೆರಳಿ ಔಷಧೋಪಚಾರ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಕನಿಷ್ಠ 2 ತಾಸು ತಜ್ಞ ವೈದ್ಯರು ಕ್ಲಿನಿಕ್ ತೆರೆದು ಆರೋಗ್ಯ ಸೇವೆಗೆ ಮುಂದಾಗಬೇಕಿದೆ.
ಶಾಶ್ವತ ಪರಿಹಾರ ಕಲ್ಪಿಸಿ :
ಈ ಭಾಗದಲ್ಲಿ ಉಪ್ಪು ನೀರು ಮತ್ತು ಬಣ್ಣಯುಕ್ತ ಬಾವಿಯ ನೀರಿನಿಂದಾಗಿ ಕುಡಿಯುವ ನೀರಿಗೆ ಗ್ರಾ.ಪಂ. ಅನ್ನು ಆಶ್ರಯಿಸಬೇಕಾಗಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಸಮುದ್ರದ ಅಥವಾ ಹೊಳೆಯ ನೀರನ್ನು ಶುದ್ಧೀಕರಣಗೊಳಿಸಿ ಕುಡಿಯಲು ಯೋಗ್ಯ ವಾಗಿಸುವ ಯೋಜನೆ ರೂಪಿಸಿದಲ್ಲಿ ಮಟ್ಟು ಪ್ರದೇಶದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಂಡಂತಾಗುತ್ತದೆ.
– ಹರ್ಷ, ಮಟ್ಟು ನಿವಾಸಿ
ಟೆಂಡರ್ ಪ್ರಕ್ರಿಯೆ ಪೂರ್ಣ :
ಜಲಜೀವನ್ ಮಿಷನ್ ಯೋಜನೆ ಯಡಿ 98 ಲಕ್ಷ ರೂ. ಅನುದಾನ (ತಲಾ ಶೇ.35 ರಾಜ್ಯ ಮತ್ತು ಕೇಂದ್ರ, ಶೇ. 10 ಸಾರ್ವಜನಿಕರು, ಶೇ.15 ಪಾಲು 15ನೇ ಹಣಕಾಸು ಯೋಜನೆಯಡಿ ಹಣ ಹೊಂದಾಣಿಕೆ) ಬಳಸಿಕೊಂಡು ಸೂಕ್ತ ನೀರಿನ ಮೂಲ, ಓವರ್ ಹೆಡ್‌ಟ್ಯಾಂಕ್, ಪೈಪ್‌ಲೈನ್ ಅಳವಡಿಕೆಯೊಂದಿಗೆ 2,509 ಜನಸಂಖ್ಯೆ ಇರುವ ಮಟ್ಟು ಗ್ರಾಮದ ಸುಮಾರು 503 ಮನೆಗಳಿಗೆ ಕುಡಿಯುವ ನೀರು ಸರಬರಾಜಿಗೆ ಯೋಜನೆ ರೂಪಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
– ಶ್ರುತಿ ಕಾಂಚನ್, ಪಿ.ಡಿ.ಒ. ಕೋಟೆ ಗ್ರಾ.ಪಂ.
ಮನವಿ ಸಲ್ಲಿಕೆ :
ಮಟ್ಟು ಅಣೆಕಟ್ಟು ಬಳಿ ಪಿನಾಕಿನಿ ಹೊಳೆಯ ಹೂಳೆತ್ತುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಕೋಟೆ ಮತ್ತು ಮಟ್ಟು ಗ್ರಾಮಗಳ ಕುಡಿಯುವ ನೀರಿಗೆ ಶಾಶ್ವತ ಪರಿಹಾರಕ್ಕಾಗಿ ಸಮುದ್ರ ಅಥವಾ ಹೊಳೆಯ ನೀರನ್ನು ಶುದ್ಧೀಕರಣಗೊಳಿಸಿ ಕುಡಿಯಲು ಯೋಗ್ಯವಾಗಿಸುವ ಯೋಜನೆಯ ಅನುಷ್ಠಾನಕ್ಕೆ ಗ್ರಾ.ಪಂ. ನಿರ್ಣಯ ಕೈಗೊಂಡು ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳಿಗೆ ಮನವಿಯನ್ನು ನೀಡಲಾಗುತ್ತದೆ.
–ಕಿಶೋರ್ ಕುಮಾರ್ ಅಂಬಾಡಿ, ಅಧ್ಯಕ್ಷರು, ಕೋಟೆ ಗ್ರಾ.ಪಂ.
-ವಿಜಯ ಆಚಾರ್ಯ ಉಚ್ಚಿಲ