Advertisement

ಬಸ್ರೂರು ಗ್ರಾ.ಪಂ: ಪ್ರತಿ ಬೇಸಗೆಯಲ್ಲೂ ಉಪ್ಪು ನೀರೇ ಗತಿ!

10:15 AM Mar 16, 2018 | Team Udayavani |

ಬಸ್ರೂರು ಗ್ರಾ.ಪಂ ನಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ  ಹಟ್ಟಿಕುದ್ರುವಿನ ಗ್ರಾಮಸ್ಥರ ಕಷ್ಟ ಬಗೆ ಹರಿಯುವ ಕಾಲ ಇನ್ನೂ ಬಂದಿಲ್ಲ. ಆ ಬೇಸರದಿಂದಲೇ ಮತ್ತೂಂದು ಬೇಸಗೆಗೆ ಸಜ್ಜಾಗಿದ್ದಾರೆ ಅಲ್ಲಿಯವರು.

Advertisement

ಬಸ್ರೂರು: ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಟ್ಟಿಕುದ್ರು ಪ್ರದೇಶದ ಜನರಿಗೆ ಈ ಬೇಸಗೆಗೂ ಉಪ್ಪು ನೀರು ಮತ್ತು ಕಳಿ ಮಿಶ್ರಿತ ಕೊಳಕು ನೀರೇ ಗತಿ. ಬಸ್ರೂರು ಗ್ರಾ.ಪಂ. 6,613 ಜನಸಂಖ್ಯೆ ಹೊಂದಿದೆ. ಹತ್ತು ವಾರ್ಡ್‌ಗಳಿವೆ. ಈ ಪೈಕಿ ಒಂದು ಮತ್ತು ಎರಡನೇ ವಾರ್ಡ್‌ ಇರುವುದು ಹಟ್ಟಿಕುದ್ರುನಲ್ಲಿ. ಇಲ್ಲಿನವರು ಬೇಸಗೆಯಲ್ಲಿ ನೀರು ಪಡೆಯಲು ತಪಸ್ಸು ಮಾಡಬೇಕಾದ ಸ್ಥಿತಿ.

ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಹೇಳುವುದೆಂದರೆ, ‘ಹಟ್ಟಿಕುದ್ರುಗೆ ಪೈಪ್‌ ಲೈನ್‌ ಹಾಕಿ ಶುದ್ಧ ಕುಡಿಯುವ ನೀರು ಪೂರೈಸಲು ಈಗಾಗಲೇ ಶಾಸಕರು ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’. ಆದರೆ, ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಉಪ್ಪು ಮತ್ತು ಕಳಿ ಮಿಶ್ರಿತ ನೀರನ್ನೇ ಕುಡಿಯುವುದು ತಪ್ಪಿಲ್ಲ. ಈ ಬೇಸಗೆಯಲ್ಲೂ ಎಪ್ರಿಲ್‌, ಮೇ ತಿಂಗಳಿನಲ್ಲಿ ಹಟ್ಟಿಕುದ್ರುವಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗಲಿದೆ. 

ಹಟ್ಟಿಕುದ್ರುಗೆ ಗುಲ್ವಾಡಿ ವೆಂಟೆಡ್‌ ಡ್ಯಾಂನಿಂದ ಪೈಪ್‌ ಹಾಕಿ ಶುದ್ಧ ಕುಡಿಯುವ ನೀರು ಪೂರೈಸಲು ರೂಪಿಸಿದ ಯೋಜನೆಗೆ ಕೆಲವರ ಆಕ್ಷೇಪವಿರುವುದರಿಂದ ಇನ್ನೂ ಜಾರಿಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ಉಳಿದ 8 ವಾರ್ಡ್‌ಗಳಿಗೆ ಕುಂದಾಪುರ ಪುರಸಭೆಯ ನೀರು ಗುಪ್ಪಿ ಹಾಡಿಯಲ್ಲಿರುವ 30 ಲಕ್ಷ ರೂ. ಮೌಲ್ಯದ ಹೊಸ ನೀರಿನ ಟ್ಯಾಂಕಿಯಿಂದ ನೀರು ಪೂರೈಸಲಾಗುತ್ತಿದೆ. ‘ಪುರಸಭೆಯಿಂದ ಬೆಳಗ್ಗೆ 5.30ಕ್ಕೆ ಟ್ಯಾಂಕಿಗೆ ನೀರು ಹರಿಸಲಾಗುತ್ತಿದೆ. ಕೂಡಲೇ ಇಲ್ಲಿಂದ ಎಂಟೂ ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‌ಗಳ ದುರಸ್ತಿಯನ್ನೂ ಮಾಡಬೇಕಾಗಿದೆ’ ಎನ್ನುತ್ತಾರೆ ಗ್ರಾ.ಪಂ ಆಡಳಿತ ವರ್ಗ.

Advertisement

ಈ ಹಿಂದೆ ಜಪ್ತಿಯ ಜಂಬೂ ನದಿಯಿಂದ ನೀರನ್ನು ಬಸ್ರೂರು ಗ್ರಾ.ಪಂ.ಗೆ ತರಲು ಹಾಕಿದ ಪೈಪ್‌ಗ್ಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕೋಳ್ಕೆರೆ ಜನತಾ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಎರಡು ತೆರದ ಬಾವಿಗಳಿದ್ದು, ಅವುಗಳ ನೀರು ಬಳಸಲಾಗುತ್ತಿದೆ. ಪಾನಕದ ಕಟ್ಟೆಯ ಏಳು ಕುಟುಂಬಗಳಿಗೆ ಪ್ರತ್ಯೇಕ ಬಾವಿ ತೆರೆಯಲಾಗಿದೆ. ಉಳಿದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 57 ತೆರದ ಬಾವಿಗಳಿವೆ. ಬಸ್ರೂರು ಕೆಳಪೇಟೆಯ ದೇವಸ್ಥಾನ ಸಮೀಪದ ಬಾವಿಗಳಿವೆ. ಹಾಲು ಡೈರಿಯ ಬಳಿ ಇರುವ 2 ಬಾವಿಗಳೊಳಗೆ ಗಿಡಗಂಟಿಗಳು ಬೆಳೆದಿದ್ದು ಉಪಯೋಗಕ್ಕೆ ಅರ್ಹವಾಗಿಲ್ಲ. ಕುಡಿಯುವ ನೀರಿಗಾಗಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎನ್ನುತ್ತಾರೆ ಗ್ರಾ.ಪಂ.ನವರು.

ಶಾಸಕರಿಗೆ ಮನವಿ
ಪುರಸಭೆಯ ನೀರನ್ನು ಪೈಪ್‌ ಅಳವಡಿಸಿ ಕೊಂಕಣ ರೈಲ್ವೆ ಸೇತುವೆ ಮೂಲಕ ಹಟ್ಟಿಕುದ್ರುಗೆ ಹರಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಮುಂದಿನ ಅವಧಿಯಲ್ಲಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.
– ಸಂತೋಷ್‌ ಕುಮಾರ್‌ ಎಚ್‌., ಅಧ್ಯಕ್ಷ, ಗ್ರಾ.ಪಂ. ಬಸ್ರೂರು

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next