Advertisement

ಕಿಲ್ಲಾರಹಟ್ಟಿ ಗ್ರಾಪಂನಲ್ಲಿ ಕುಡಿಯುವ ನೀರಿಗೆ ಪರದಾಟ

11:37 AM Jun 28, 2019 | Suhan S |

ದೋಟಿಹಾಳ: ಸತತ ಬರಗಾಲ, ಕಾಯ್ದು ಕೆಂಪಾದ ಭೂಮಿ, ಕಣ್ಮರೆಯಾದ ಮಳೆರಾಯ, ಕಣ್ಣಿಗೆ ಕಾಣುವ ಮೋಡಗಳು ಮಳೆ ಸುರಿಸುತ್ತಿಲ್ಲ. ಇಲ್ಲಿ ಹನಿ ನೀರಿಗೂ ಪರದಾಟ. ಇಂತಹ ಭೀಕರ ಪರಿಸ್ಥಿತಿ ಎದುರಿಸುತ್ತಿವೆ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು.

Advertisement

ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗಾಗಿ ಜನ ತತ್ತರಿಸುವಂತಾಗಿದೆ. ಕೆರೆ, ಬಾವಿ, ಹಳ್ಳ ಬತ್ತಿವೆ. ಅಂತರ್ಜಲ ಕುಸಿತದಿಂದ ಕೊಳೆವೆಬಾವಿಗಳಲ್ಲೂ ನೀರು ಕಾಣದಾಗಿದೆ. ಹೀಗಾಗಿ ಅನೇಕ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ಅಮರಾಪೂರ ಗ್ರಾಮಸ್ಥರು ಸದ್ಯ ಕುಡಿಯುವ ಮತ್ತು ಬಳಕೆಯ ನೀರಿಗಾಗಿ ದೂರದಲ್ಲಿರುವ ತೋಟಗಳ ಬೋರ್‌ವೆಲ್ ಅವಲಂಬಿಸಿದ್ದಾರೆ. ವಿದ್ಯುತ್‌ ಸಂಪರ್ಕವಿದ್ದಾಗ ಮಾತ್ರ ನೀರು. ರೈತರು ಹೊಲಕ್ಕೆ ಹೋದರೆ ನಮಗೆ ನೀರು ಸಿಗುವುದಿಲ್ಲ. ಆದ್ದರಿಂದ ನೀರಿಗಾಗಿ ಬೆಳಗ್ಗಿನಿಂದ ಕೆಲಸ ಬಿಟ್ಟು ಕಾಯುವಂತಾಗಿದೆ ಎಂದು ಮಹಿಳೆಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಗಡಿಭಾಗದಲ್ಲಿರುವ ಕಿಲ್ಲಾರಹಟ್ಟಿ, ಕಿಲ್ಲಾರಹಟ್ಟಿ ತಾಂಡಾ, ಅಮರಾಪೂರ, ಅಮರಾಪೂರ ತಾಂಡಾ, ಕಳಮಳ್ಳಿ ತಾಂಡ, ಗರ್ಜನಾಳ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆಯಿಂದ ಇಲ್ಲಿಯ ಜನರು ವರ್ಷಗಳಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ನೀರಿಗಾಗಿ ಗ್ರಾಪಂ, ಜಿಪಂ, ಶಾಸಕರು ಸೇರಿದಂತೆ ಅನೇಕ ನಾಯಕರು ಹಲವು ಭಾರಿ ಬೋರ್‌ವೆಲ್ ಹಾಕಿಸಿದರು ಹನಿ ನೀರು ಭೂಮಿಯಲ್ಲಿ ಸಿಗುತ್ತಿಲ್ಲ.

ಭೌಗಳಿಕವಾಗಿ ಈ ಗ್ರಾಮಗಳು ಗುಡದ ಮೇಲೆ ಇರುವುದರಿಂದ ನೀರು ಸಿಗುವುದು ಕಷ್ಟ, ಹಿಂದೆ ಕೇಂದ್ರ ಸರಕಾರ ಒಂದು ತಂಡ ಕಿಲ್ಲಾರಹಟ್ಟಿ ಮತ್ತು ಕಳಮಳ್ಳಿ ಈ ಗ್ರಾಮಗಳಿಗೆ ಭೇಟಿ ನೀಡಿ. ಇಲ್ಲಿಯ ನೀರಿ ಅಂತರ್ಜಲ ಬತ್ತಿ ಹೋಗಿದೆ ಸುಮಾರು 700 ಅಡಿ ಆಳದಲ್ಲಿ ನೀರು ಸಿಗಬಹುದು ಎಂದು ವರದಿ ನೀಡಿದ ಕಾರಣ ಕಿಲ್ಲಾರಹಟ್ಟಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮತ್ತು ಕಳಮಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 720 ಅಡಿ ಆಳ ಬೋರ್‌ವೆಲ್ ಹಾಕಿದರು ಅಲ್ಲಿ ಒಂದು ಹನಿ ನೀರು ಸಿಗಲಿಲ್ಲ.

Advertisement

ಕೆರೆ ನಿರ್ಮಾಣ ಮುಂದಾಗಬೇಕು: ಈ ಭಾಗದಲ್ಲಿ ಗುಡಗಳೇ ಇರುವುದರಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಾಗಿ ಗುಡ್ಡಗಳ ಇಳಿಜಾರು ಪ್ರದೇಶದಲ್ಲಿ ಚೆಕ್‌ಡ್ಯಾಂ ಅಥವಾ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಬೇಕು. ಇದರಿಂದ ಈ ಭಾಗದ ಅಂತರ್ಜಲ ಅಭಿವೃದ್ಧಿಯಾಗುವುದರ ಜೊತೆಗೆ 3-4 ಹಳ್ಳಿಗಳಿಗೆ ನೀರು ಸಿಗುತ್ತದೆ.

ಮುದ್ದಲಗುಂದಿ ಗ್ರಾಮದಿಂದ ಬರುವ ರಸ್ತೆಯ ಮಾದರಡೊಕ್ಕಿ, ಮಾದರಡೊಕ್ಕಿ ತಾಂಡಾ ಹೋಗುವ ರಸ್ತೆ ಕ್ರಾಸ್‌ ಬಳಿ ದೊಡ್ಡ ಕಂದಕಗಳು ಇದ್ದು, ಇಲ್ಲಿ ದೊಡ್ಡಪ್ರಮಾಣದ ಚೆಕ್‌ ಡ್ಯಾಂ ಅಥವಾ ಕೆರೆ ನಿರ್ಮಾಣ ಮಾಡಲು ಉತ್ತಮ ಸ್ಥಳವಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ

ಇಂದು ಜನ ಸ್ಪಂದನ: ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಅಮರಾಪೂರ ಗ್ರಾಮದಲ್ಲಿ ಜೂ. 28ರಂದು ಶಾಸಕರು ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಸಭೆಯಲ್ಲಾದರೂ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೋ ಕಾದು ನೋಡಬೇಕು.

 

•ಮಲ್ಲಿಕಾರ್ಜುನ ಮೆದಿಕೇರಿ.

Advertisement

Udayavani is now on Telegram. Click here to join our channel and stay updated with the latest news.

Next