ಚಿಕ್ಕಮಗಳೂರು : ಕಲುಷಿತ ಕುಡಿಯುವ ನೀರು ಸರಬರಾಜು ಮಾಡಿರುವ ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿರುವ ಘಟನೆ ಚಿಕ್ಕಮಗಳೂರು ನಗರದ ಶಂಕರಪುರದ ಮೂರನೇ ವಾರ್ಡಿನಲ್ಲಿ ನಡೆದಿದೆ.
ಶಂಕರಪುರ ಮೂರನೇ ವಾರ್ಡಿನಲ್ಲಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿನಲ್ಲಿ ಕಸ-ಕಡ್ಡಿಗಳು, ಹುಳಗಳು ಪತ್ತೆಯಾಗುತ್ತಿವೆ. ಇಂಥ ನೀರು ಶುದ್ದೀಕರಿಸಿದ್ರೂ ಕುಡಿಯಲು ಯೋಗ್ಯವಲ್ಲ, ಈ ನೀರು ಕುಡಿದರೆ ಇದರಿಂದ ಕೊರೊನಾ ಅಲ್ಲ, ಓಮಿಕ್ರಾನ್ ಗಿಂತಲೂ ಅಪಾಯಕಾರಿ ಆದ ರೋಗಗಳು ಬರಬಹುದೆಂದು ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದರು.
ಓಟ್ ಹಾಕೋಕೆ ನಾವು ಬೇಕು. ಈ ನೀರು ಕುಡಿಯೋ ಬದಲು ವಿಷ ಕುಡಿಯೋದು ಒಳ್ಳೆಯದು. ನಾವು ಸತ್ತರೆ ನಿಮಗೆ ಯಾರು ಓಟ್ ಹಾಕ್ತಾರೆ? ಎಂದು ನಗರ ಸಭೆ ವಿರುದ್ಧ ಗ್ರಾಮಸ್ಥರು ಗುಡುಗಿದರು.
ಇದುವರೆಗೆ ಸ್ಥಳೀಯರು ಎಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನೀರು ಮಿಶ್ರಣವಾಗಿ ಕುಡಿಯುವ ನೀರು ಬರುತ್ತಿದೆ. ಇದರಿಂದ ನಿವಾಸಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.