Advertisement

ಕುಡಿಯುವ ನೀರಿಗಾಗಿ ಕ್ರಮಿಸಬೇಕು ಮೈಲು ದೂರ

11:32 PM May 01, 2019 | Team Udayavani |

ಕುಡಿಯುವ ನೀರಿಗೆ ಬಹುದೂರ ಕ್ರಮಿಸಬೇಕು. ಜತೆಗೆ ಶುದ್ಧ ಕುಡಿಯುವ ನೀರು ಸಾಗಿನಗುಡ್ಡೆ ದಲಿತ ಕಾಲೊನಿ ನಿವಾಸಿಗಳಿಗೆ ಮರೀಚಿಕೆ. ಕಲುಷಿತ ನೀರನ್ನು ಬಳಸುತ್ತಿರುವುದರಿಂದ ಆರೋಗ್ಯ ಸಮಸ್ಯೆಯ ಭೀತಿ ಕೂಡ ಎದುರಾಗಿದೆ.

Advertisement

ತೆಕ್ಕಟ್ಟೆ: ಕುಡಿಯುವ ನೀರು ಬೇಕೆಂದರೆ ಇಲ್ಲಿನ ದಲಿತ ಕಾಲೊನಿಯ ನಿವಾಸಿಗಳು ಮೈಲು ದೂರ ಕ್ರಮಿಸಬೇಕು. ಇದು ಕುಂದಾಪುರ ತಾ. ಕೊರ್ಗಿ ಗ್ರಾ.ಪಂ.ನ ಸಾಗಿನಗುಡ್ಡೆಯವರ ದುಃಸ್ಥಿತಿ. ಜತೆಗೆ ಇಲ್ಲಿನ ನಿವಾಸಿಗಳು ನಿತ್ಯ ಬಳಕೆಗಾಗಿ ಕಬ್ಬಿಣ ಮಿಶ್ರಿತ ಕಲುಷಿತ ನೀರನ್ನು ಬಟ್ಟೆಯಲ್ಲಿ ಸೋಸಿ ಬಳಸುತ್ತಿದ್ದಾರೆ.

ನಳ್ಳಿ ನೀರಿಲ್ಲ
ಇಲ್ಲಿನ ಹೊಸಮಠ ಜನತಾ ಕಾಲನಿ ಯಲ್ಲಿರುವ ಸಾರ್ವಜನಿಕ ಬಾವಿ ಹಾಗೂ ಹೊಸಮಠ ಸರಕಾರಿ ಶಾಲಾ ಸಮೀಪದ ಬಾವಿಯಿಂದ ಮುಂಜಾನೆ ಗ್ರಾಮ ಪಂಚಾಯತ್‌ ಪೂರೈಕೆ ಮಾಡುತ್ತಿದೆ. ಬಾವಿ ಯಲ್ಲಿನ ನೀರಿನ ಮಟ್ಟದ ಸಂಪೂರ್ಣ ಕುಸಿತ ಗೊಂಡಿರುವ ಹಿನ್ನೆಲೆಯಲ್ಲಿ ಈ ಪರಿಸರದ ಸುಮಾರು 45ಕ್ಕೂ ಅಧಿಕ ಮನೆಗಳಿಗೆ ನಳ್ಳಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಕಾರಣ ಎರಡು ಮನೆಗೊಂದರಂತೆ ಟ್ಯಾಂಕ್‌ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರಾದ ಪಾರ್ವತಿ ಹೇಳುತ್ತಾರೆ.

ಸಮಸ್ಯೆಗಳು

ಹೊಸಮಠ ಜನತಾ ಕಾಲನಿಯ ಸುತ್ತಮುತ್ತಲ ಭಾಗದಲ್ಲಿ ಈಗಿರುವ ಸುಮಾರು ನಾಲ್ಕೈದು ಕೊಳವೆ ಬಾವಿಗಳು ನಿಷ್ಪ್ರಯೋಜಕವಾಗಿವೆ. ಕೊರ್ಗಿ ಸಾಗಿನ ಗುಡ್ಡೆ ಯಲ್ಲಿ ಸುಮಾರು 25 ವರ್ಷದ ಹಳೆಯ ಬಾವಿಯಲ್ಲಿ ಸ್ವಲ್ಪವಷ್ಟೇ ನೀರಿದೆ. ಬಾವಿ ಕೂಡ ಶಿಥಿಲಗೊಂಡಿದೆ.

ಜನರ ಬೇಡಿಕೆ
– ಸಾಗಿನಗುಡ್ಡೆ ಬಾವಿಯನ್ನು ನವೀಕರಿಸಬೇಕು.
– ಗ್ರಾ.ಪಂ. ತತ್‌ಕ್ಷಣವೇ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಬೇಕು.
– ನೀರು ನಿರ್ದಿಷ್ಟ ಸಮಯದಲ್ಲಿ ಪೂರೈಕೆ ಮಾಡಬೇಕು.
– ವಾರಾಹಿ ಕಾಲುವೆ ನೀರು ಗ್ರಾಮಕ್ಕೆ ಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.

ಕ್ರಮ ಕೈಗೊಳ್ಳುತ್ತೇವೆ
ಗ್ರಾ.ಪಂ. ವತಿಯಿಂದ ಸಾಗಿನಗುಡ್ಡೆಯಲ್ಲಿ ಭಾಗದಲ್ಲಿ ಈ ಹಿಂದೆ ಕೊಳವೆ ಬಾವಿ ತೋಡಲಾಗಿದೆ ಆದರೂ ಅದು ಯಶಸ್ವಿಯಾಗಲಿಲ್ಲ. ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ .
– ಗಂಗೆ ಕುಲಾಲ್ತಿ, ಅಧ್ಯಕ್ಷರು,
ಗ್ರಾ.ಪಂ.ಕೊರ್ಗಿ

Advertisement

ಪರಿಹಾರ ಕಲ್ಪಿಸಿ
ಜನವರಿ ತಿಂಗಳಲ್ಲೇ ಇಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಮೂರು ತಿಂಗಳಿಂದ 1 ಕಿ.ಮೀ. ದೂರದ ಕುಷ್ಟಪ್ಪ ಶೆಟ್ಟಿ ಎನ್ನುವವರ ಮನೆಯಿಂದ ನೀರು ಹೊರಬೇಕಾದ ಪರಿಸ್ಥಿತಿ ಇದೆ. ನಿತ್ಯ ಬಳಸುವ ನೀರು ಬಟ್ಟೆಯಿಂದ ಸೋಸಿ ಬಳಸಬೇಕಾಗಿದೆ. ಗ್ರಾ.ಪಂ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
– ಕಮಲಾ, ಸ್ಥಳೀಯರು

ಟ್ಯಾಂಕರ್‌ ನೀರು ಕೊಡಿ
ಎಲ್ಲಾ ಗ್ರಾ.ಪಂ.ಗಳಲ್ಲಿ ಈಗಾಗಲೇ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡಾ ನಮ್ಮ ಗ್ರಾಮದಲ್ಲಿ ಮಾತ್ರ ಇದು ವರೆಗೆ ಯಾವುದೇ ನೀರು ಪೂರೈಕೆ ಮಾಡದೆ ನಿರ್ಲಕ್ಷé ತೋರಿದ್ದಾರೆ. ನಮ್ಮ ಮೂಲಭೂತ ಸಮಸ್ಯೆಗಳ ಬಗ್ಗೆ ಗ್ರಾ.ಪಂ.ಸ್ಪಂದಿಸಬೇಕು.
-ಚಿಕ್ಕು , ಸ್ಥಳೀಯರು

ಉದಯವಾಣಿ ಆಗ್ರಹ
ಕೂಡಲೇ ಕಾಲೊನಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸಬೇಕು. ಬೇಸಗೆ ಮುಕ್ತಾಯವರೆಗೆ ನೀರಿನ ವ್ಯವಸ್ಥೆಗೆ ಪಂಚಾಯತ್‌ ಗಮನಹರಿಸಬೇಕು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next