Advertisement

ಗೋಕರ್ಣದಲ್ಲಿ ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಜೀವಜಲ!

09:45 AM Jun 07, 2019 | Team Udayavani |

ಹೊನ್ನಾವರ: ಪ್ರಸಿದ್ಧ ಪುಣ್ಯಕ್ಷೇತ್ರ, ಪ್ರತಿನಿತ್ಯ ಸಾವಿರಾರು ಯಾತ್ರಾರ್ಥಿಗಳು ತಾಣ ಸಮುದ್ರ ದಂಡೆಯಲ್ಲೇ ಇರುವ ಗೋಕರ್ಣದಲ್ಲಿಯೂ ಕುಡಿಯುವ ನೀರಿಗೆ ತಾಪತ್ರಯ ಉಂಟಾಗಿದೆ. ಜನರು, ಯಾತ್ರಾರ್ಥಿಗಳು, ಹೊಟೇಲ್ನವರು ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಇದೆ.

Advertisement

ದೇವಸ್ಥಾನದಲ್ಲಿಯೂ ಕೂಡ ನೀರಿನ ಕೊರತೆ ಉಂಟಾಗಿದ್ದು, ದೇವಸ್ಥಾನದ ಬಾವಿಯಲ್ಲಿಯೂ ಕೂಡ ಕೇವಲ ಮಹಾಬಲೇಶ್ವರನ ಅಭಿಷೇಕಕ್ಕೆ ಮಾತ್ರ ನೀರು ದೊರಕುತ್ತಿದ್ದು, ದೇವಸ್ಥಾನದ ಸ್ವಚ್ಛತೆಗೂ ದುಡ್ಡು ಕೊಟ್ಟು ನೀರು ತರಿಸಬೇಕಾದ ಪ್ರಮೇಯವಿದೆ. ಪ್ರತಿನಿತ್ಯದ ಅನ್ನಪ್ರಸಾದ ವ್ಯವಸ್ಥೆಗೆ ಪಕ್ಕದ ವೈದಿಕರೊಬ್ಬರ ಮನೆಯ ಬೋರ್‌ವೆಲ್ ನೀರನ್ನು ತೆಗೆದುಕೊಂಡು ಬಳಸಲಾಗುತ್ತಿದೆ. ಹೀಗಾಗಿ ಬಂದ ಯಾತ್ರಾರ್ಥಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ನಿಲ್ಲಿಸಲಾಗಿಲ್ಲ. ಆದರೂ ಕುಡಿಯುವ ನೀರಿಗೆ ತೊಂದರೆ ಇದೆ ಎಂಬುದು ದೇವಸ್ಥಾನ ಆಡಳಿತ ಮಂಡಳಿಯ ಜಿ.ಕೆ. ಹೆಗಡೆ ಗುಳಗೋಡ ಅವರ ಅಭಿಪ್ರಾಯವಾಗಿದೆ.

ಗೋಕರ್ಣದ ಮುಖ್ಯಬೀದಿ, ಕೋಟಿತೀರ್ಥದ ಸುತ್ತಲಿನ ಪ್ರದೇಶ, ಸಮುದ್ರದಂಚಿನ ಗುಡ್ಡದ ತಪ್ಪಲಿನ ಪ್ರದೇಶಗಳಲ್ಲಿ ಅಲ್ಲದೆ, ಗ್ರಾಮೀಣ ಪ್ರದೇಶಗಳಾದ ಕಡಮೆ, ಬಿದರಗೇರಿ, ಬಿಜ್ಜೂರು, ತಾರಮಕ್ಕಿ ಮುಂತಾದೆಡೆಗಳ ಕೂಡಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ಮಹಾಬಲೇಶ್ವರ ದೇವಲಾಯದಿಂದ ಗ್ರಾಮೀಣ ಪ್ರದೇಶಗಳಿಗೆ ಪ್ರತಿಮನೆಗೆ ಎರಡೆರಡು ಕೊಡದಂತೆ ಕುಡಿಯುವ ನೀರು ನೀಡಲಾಗುತ್ತಿದೆ. ಗ್ರಾಪಂ ವತಿಯಿಂದ ಊರಲ್ಲಿನ ಮನೆಗಳಿಗೆ ಪ್ರತಿದಿನ ನಾಲ್ಕೈದು ಕೊಡಗಳಂತೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಆದರೆ, ಇತರೆ ಬಳಕೆಗೆ ಸ್ವಲ್ಪವೂ ನೀರು ಸಿಗುತ್ತಿಲ್ಲ. ದುಡ್ಡು ಕೊಟ್ಟರೂ ಸಾಕಷ್ಟ ನೀರು ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದುಗುಡವಾಗಿದೆ. ಹೋಟೆಲ್ ನಡೆಸುವವರಿಗೂ ಒಂದು ಹೊತ್ತು ನೀರು ಕೊಟ್ಟರೆ, ಇನ್ನೊಂದು ಹೊತ್ತು ನೀರು ಸಿಗುತ್ತಿಲ್ಲ. ಕೇವಲ ಒಂದು ಹೊಟೆಲ್ ನಡೆಸಬೇಕಾದ ಪರಿಸ್ಥಿತಿ ಇದೆ.

Advertisement

ಊರಿನ ಪ್ರಮುಖ ಭಾಗಗ ಜಲಮೂಲವಾದ ಕೋಟಿತೀರ್ಥವು ಕೂಡ ಪ್ರಸಕ್ತ ಸಂಪೂರ್ಣ ಬರಿದಾಗಿದ್ದು, ಇದರಿಂದಾಗಿ ಸುತ್ತಲಿನ ನೂರಾರು ಮನೆಗಳ ಬಾವಿಗಳು ಕೂಡ ಕಳೆದ ಒಂದೂವರೆ ತಿಂಗಳಿನಿಂದಲೇ ಬತ್ತಿದ್ದು, ನೀರಿನ ತಾಪತ್ರಯ ಅನುಭವಿಸುತ್ತಿವೆ. ಕುಡಿಯಲು ಬಿಟ್ಟರೆ, ಸ್ನಾನ, ಬಟ್ಟೆ ತೊಳೆಯಲು ಮತ್ಯಾವುದಕ್ಕೂ ನೀರು ಸಿಗುತ್ತಿಲ್ಲ ಎಂಬುದು ಇಲ್ಲಿನವರ ಕೊರಗಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನವರು ಹಿಂದುಳಿದ ಹಾಲಕ್ಕಿ ಜನಾಂಗದವರು ವಾಸಿಸು ತ್ತಿದ್ದು, ಇವರೆಲ್ಲ ಹೈನೋದ್ಯಮ, ಕೃಷಿಯನ್ನೇ ಅವಲಂಬಿಸಿದವರಾಗಿದ್ದಾರೆ. ಆದರೆ, ಪ್ರಸಕ್ತ ವರ್ಷ ಇಲ್ಲಿಯೂ ನೀರಿನ ಕೊರತೆ ಉಂಟಾಗಿದ್ದು, ಜಾನುವರುಗಳನ್ನು ಹೇಗೆ ಸಾಕಬೇಕೆಂಬುದೇ ಮುಖ್ಯ ಸಂಕಟವಾಗಿದೆ. ಈ ಭಾಗಗಳಿಗೆ ಗ್ರಾಮ ಪಂಚಾಯತ ವತಿಯಿಂದ ದಿನಕ್ಕೆ ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದ್ದರೂ ಕೂಡ ಪ್ರತಿ ಮನೆಗೆ ಸಿಗುವುದು ಕೇವಲ 8-10 ಕೊಡಗಳು ಮಾತ್ರ.

ಜೂನ್‌ ಮೊದಲ ವಾರ ಕಳೆದರೂ ಮಳೆರಾಯನ ದರ್ಶನವಿಲ್ಲ, ಹೀಗೆಯೇ ಮುಂದುವರಿದರೆ ಇಲ್ಲಿಯೂ ಯಾತ್ರಾರ್ಥಿಗಳು ಬರದಂತೆ ಸೂಚಿಸಬೇಕಾದೀತು ಎಂಬುದು ಜನರ ಅಂಬೋಣ.

Advertisement

Udayavani is now on Telegram. Click here to join our channel and stay updated with the latest news.

Next