Advertisement

ಮಗಳ ಮದುವೆಗೆ ಬರಲೇಬೇಕು ಕುಡಿಯುವ ನೀರು ನೀವೇ ತರಬೇಕು!

09:52 PM Feb 12, 2020 | Sriram |

ಈ ಸುದ್ದಿ ಓದುವಾಗ ಕೆಲವರಿಗೆ ವೈಭವೀಕರಣ ಎನಿಸಿಬಿಡಬಹುದು. ಆದರೆ ಇಂದ್ರಾಣಿ ನದಿ ಹರಿದು ಹೋಗಿ ಇಂದು ಕೊಳಚೆಯ ತೋಡಾಗಿ ಪರಿವರ್ತನೆಯಾಗಿ ಹರಿಯುತ್ತಿರುವ ಅಕ್ಕಪಕ್ಕದ ಮನೆಗಳಿಗೆ ಒಮ್ಮೆ ಭೇಟಿ ಕೊಡಿ. ವಾಸ್ತವ ಅರಿವಿಗೆ ಬರುತ್ತದೆ. ವಿಚಿತ್ರವೆಂದರೆ, ಈ ಮನೆಗಳಿಗೆ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ, ಒಂದುವೇಳೆ ಮನಃಪೂರ್ವಕವಾಗಿ (ಚುನಾವಣೆ ಪ್ರಚಾರದ ಹೊತ್ತು ಹೊರತುಪಡಿಸಿ) ಭೇಟಿ ನೀಡಿದ್ದರೆ ಇಂದಿನ ಪರಿಸ್ಥಿತಿಯೇ ಬದಲಾಗಿಬಿಡುತ್ತಿತ್ತು. ಇಲ್ಲಿನ ಸ್ಥಿತಿ ವಿರೋಧಿಗಳ ಮನಸ್ಸನ್ನೂ ಕರಗಿಸದಿರದು.

Advertisement

ನಿಟ್ಟೂರು: “ನಮ್ಮ ಮಗಳ ಮದುವೆಗೆ ನೀವು ಬರಬೇಕು, ಆದರೆ ಕುಡಿಯಲು ನೀರು ನೀವೇ ತರಬೇಕು..!’

ಈ ವಾಕ್ಯ ತೀರಾ ತಮಾಷೆ ಎನಿಸಬಹುದು. ಆದರೆ ಇದು ವಾಸ್ತವ. ನಗರಸಭೆಯ ದಿವ್ಯ ನಿರ್ಲಕ್ಷ್ಯದಿಂದ ದಿನವೂ ಹನಿ ನೀರಿಗೂ ಇನ್ನೊಬ್ಬರ ಮನೆಯಲ್ಲಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರವೆಂಬ ಪರಿಕಲ್ಪನೆಯು ಸೃಷ್ಟಿಸಿರುವ ವ್ಯಂಗ್ಯ.

ಹೀಗೆ ಆಹ್ವಾನಿಸುವ ಪರಿಸ್ಥಿತಿ ಒಬ್ಬಳು ತಾಯಿಗೆ ಬಂದಿದೆ. ಅಂದಹಾಗೆ ಇದು ಬಹಳ ದೂರದಲ್ಲೆಲ್ಲೋ, ರಾಜಸ್ಥಾನದಂಥ ಮರುಭೂಮಿಯಲ್ಲಿ ಕಾಣುವ ಪ್ರಸಂಗವಲ್ಲ. ನಮ್ಮ ನಗರಸಭೆಗೆ ಕೂಗಳತೆ ದೂರದಲ್ಲಿರುವ ಒಂದು ಕುಟುಂಬದ ಕಥೆ. ಮದುವೆ ಮನೆಗೆ ನೀರು ತರಲು ಮತ್ತೂಬ್ಬರ ಮನೆ ಅಂಗಳಕ್ಕೆ ಹೋಗಬೇಕಾಗಿದೆ.

ಸುಮಾರು 60ರ ಇಳಿವಯಸ್ಸಿನಲ್ಲಿ ಮಗ ಮತ್ತು ಮಗಳೊಂದಿಗೆ ಬದುಕುತ್ತಿರುವವರು ಈ ಅಮ್ಮ (ಹೆಸರು ಬೇಡ ಎಂದು ಹೇಳಿದ್ದಾರೆ). ಮುಂದಿನ ವಾರ ಇವರ ಮನೆಯಲ್ಲಿ ಮಗಳ ಮದುವೆಗೆ ಸಿದ್ಧತೆ ನಡೆದಿದೆ. ಮನೆಯ ಅಂಗಣಕ್ಕೂ ಮದುವೆ ಕಳೆ ಬರಬೇಕು. ಆದರೆ, ಅಂಗಳಕ್ಕೆ ಹೊಂದಿಕೊಂಡಂತೆಯೇ ಇರುವ ಇಂದ್ರಾಣಿ ನದಿಯ ಹರಿವಿನಲ್ಲಿ ತುಂಬಿರುವ ಕೊಳಚೆ ಮಾತ್ರ ಮೂಗಿಗೆ ಬಡಿಯುತ್ತದೆ. ಏನೂ ಮಾಡುವಂತಿಲ್ಲ; ಕಣ್ಮುಚ್ಚಿ, ಉಗುಳು ನುಂಗಿ ಬದುಕುವ ಅನಿವಾರ್ಯ ಪರಿಸ್ಥಿತಿ.

Advertisement

ನಾವು ಇಲ್ಲಿ ಸ್ನಾನ ಮಾಡುತ್ತಿದ್ದೆವು
ಅಯ್ಯೋ ಹೀಗಿರಲೇ ಇಲ್ಲ. ನಾವು ದಿನವೂ ಸ್ನಾನ ಮಾಡುತ್ತಿದ್ದ ನದಿ ಇದು. ವರ್ಷಾನುಗಟ್ಟಲೆ ಈ ನದಿಯಲ್ಲಿ ಮಿಂದು, ಬಟ್ಟೆ ಒಗೆದು ಬದುಕಿದ್ದೇವೆ. ಎಂದಿಗೂ ಇಂಥ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಹತ್ತಿರದಲ್ಲೇ ನನ್ನ ತವರು ಮನೆಯೂ ಇದ್ದದ್ದು. ಅಂದು ಖುಷಿಪಡುತ್ತಿದ್ದೆವು ; ಈಗ ದುಃಖಪಡುವಂತಾಗಿದೆ.

ಸಂಕಷ್ಟದ ಮತ್ತೂಂದು ಮುಖ
ಮಳೆಗಾಲದಲ್ಲಿ ಇವರ ಪರಿಸ್ಥಿತಿ ಇನ್ನೊಂದು ವಿಕೋಪಕ್ಕೆ ತಿರುಗುತ್ತದೆ. ನದಿಗೆ ಯಾವುದೇ ತಡೆಗೋಡೆಗಳಿಲ್ಲ, ಹಾಗಾಗಿ ನದಿ ಉಕ್ಕಿ ಹರಿಯುವುದು ಇವರ ಮನೆಯಂಗಳಕ್ಕೇ. ಬರೀ ಮಳೆ ನೀರಾಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ನೆರೆ ಇಳಿದ ಮೇಲೆ ಒಂದಿಷ್ಟು ಕಸವನ್ನಷ್ಟೇ ಉಳಿಸಿ ಹೋಗುತ್ತದೆ. ಆದರೆ, ಕೊಳಚೆ ತುಂಬಿದ ನೀರು ಅಂಗಳಕ್ಕೆ ವ್ಯಾಪಿಸಿ ನಾನಾ ತರಹದ ಕಾಯಿಲೆಯನ್ನೂ ತಂದೊಡ್ಡುತ್ತದೆ. ಈ ಆತಂಕವಂತೂ ತಪ್ಪುತ್ತಲೇ ಇಲ್ಲ.

ನೀರು ಇಲ್ಲದೇ 10 ವರ್ಷ
ಈ ಮಾತೂ ನಂಬಲಿಕ್ಕಾಗದು. ಹನ್ನೆರಡು ವರ್ಷಗಳ ಹಿಂದೆ ಇಷ್ಟೊಂದು ಸಮಸ್ಯೆ ಇರಲಿಲ್ಲ. ಬಾವಿಯಲ್ಲಿ ನೀರೂ ಇತ್ತು. ಆದರೆ ಹತ್ತು ವರ್ಷಗಳ ಬಳಿಕ ಯಾವಾಗ ಈ ನದಿಯಲ್ಲಿ ಕೊಳಚೆ ಹರಿಯಲು ಶುರುವಾಯಿತೋ ಅಂದಿನಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಇದ್ದ ಒಂದು ಬಾವಿಯ ನೀರೂ ಕೆಂಪಾಗಿ ಹಾಳಾಯಿತು. ನಗರಸಭೆಯ ನಳ್ಳಿ ನೀರು ಸಂಪರ್ಕ ಕೇಳಿ ನಗರಸಭೆ ಕಚೇರಿಗೆ ಅಲೆದೆವು. ಒಂದೊಂದು ಬಾರಿ, ಒಂದೊಂದು ದಾಖಲೆ ಕೇಳಿದರು, ಅದನ್ನು ತನ್ನಿ, ಇದನ್ನು ತನ್ನಿ. ನಮಗೂ ಸಾಕಾಗಿ ಸುಮ್ಮನಾದೆವು ಎಂದು ತಮ್ಮ ಪಡಿಪಾಟಲು ವಿವರಿಸುತ್ತಾರೆ ಆ ಅಮ್ಮ. “ಇವತ್ತು ಏನೂ ಮಾಡುವಂತಿಲ್ಲ. ಅಂದಿನಿಂದ ನೆರೆಮನೆಯವರೊಬ್ಬರು ಕುಡಿಯಲು ನೀರು ಕೊಡುತ್ತಾರೆ. ಅವರ ಉಪಕಾರದಿಂದ ಬದುಕುತ್ತಿದ್ದೇವೆ’ ಎಂದ ಅವರಿಗೆ ಮದುವೆಗೆ ಕಡಿಮೆ ನೀರು ಬೇಕೇ? ಎಂದು ಕೇಳಿದರೆ, “ಇಲ್ಲ, ಊರಿನವರು ಕೈ ಬಿಡುವುದಿಲ್ಲ, ನಮ್ಮವರು ನಮಗೆ ಸಹಾಯ ಮಾಡುತ್ತಾರೆ’ ಎಂದು ಆಶಾವಾದದಿಂದ ನುಡಿಯುತ್ತಾರೆ ಆ ಅಮ್ಮ.

ಆಡಳಿತ ವ್ಯವಸ್ಥೆಯ
ದಿವ್ಯ ನಿರ್ಲಕ್ಷ éಕ್ಕೆ ನಿದರ್ಶನ
ಇಂದ್ರಾಣಿ ನದಿ ಉಳಿಸಿ ಎಂಬ ಅಭಿಯಾನವನ್ನು ಇತ್ತೀಚೆಗಷ್ಟೇ ಕೆಲವು ಉತ್ಸಾಹಿ ನಾಗರಿಕರು ಆರಂಭಿಸಿದ್ದರು. 15 ವರ್ಷಗಳ ಹಿಂದೆಯೂ ಒಂದಿಷ್ಟು ನಾಗರಿಕರು ಇಂದ್ರಾಣಿಗೆ ಸ್ಥಳೀಯ ಕೊಳಚೆ ಬಿಡುವುದನ್ನು ವಿರೋಧಿಸಿ ನಗರಸಭೆ ಎದುರು ಪ್ರತಿಭಟಿಸಿದ್ದರು. ಸುಮ್ಮನೆ ಪ್ರತಿಭಟನೆ ಮಾಡಿರಲಿಲ್ಲ. ನದಿಯಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ಕೊಡಗಳಲ್ಲಿ ತಂದು ಪ್ರದರ್ಶಿಸಿದ್ದರು. ಆ ಪೈಕಿ ಕೆಲವರ ಮೇಲೆ ಕೇಸುಗಳನ್ನೂ ದಾಖಲಿಸಲಾಗಿತ್ತು. ಆದರೆ, ಹದಿನೈದು ವರ್ಷಗಳಿಂದ ಈ ನದಿ ಪಾತ್ರದ (ಅರ್ಧ ಭಾಗ) ಜನರ ಬದುಕು ಹಾಳಾದರೂ ನಗರ ಸಭೆಯಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸಿದ್ದೇ ಕಡಿಮೆ.

ಜಲಮೂಲಗಳ ಬೇಜವಾಬ್ದಾರಿ ನಿರ್ವಹಣೆ ಮತ್ತು ಕೊರತೆಯಿಂದ ನಗರಗಳೆಂಬ ಬೆಂಕಿಪೊಟ್ಟಣಗಳು ನೆಲಕ್ಕುರುಳುತ್ತಿರುವ ಹೊತ್ತಿನಲ್ಲಿ ಈ ವಿಷಯ ಬಹಳ ಪ್ರಮುಖವಾದುದು. ಇಂದ್ರಾಣಿ ಉಳಿಸಿ ಎಂಬ ಅಭಿಯಾನವನ್ನು ಜನರೇ ಕೈಗೆತ್ತಿಕೊಳ್ಳುವ ಕಾಲವಿದು. ಜನರು ಧ್ವನಿ ಎತ್ತದಿದ್ದರೆ ನಗರವಿಡೀ ನೀರಿಲ್ಲದೇ ಕೊರಗುವ ಸ್ಥಿತಿ ಬರುತ್ತದೆ. ಜನರಿಗೆ ಮಾಹಿತಿ ನೀಡಲೆಂದೇ ಉದಯವಾಣಿಯ ವರದಿಗಾರರ ತಂಡ ಇಂದ್ರಾಣಿಯ ಮೂಲದಿಂದ ಸಮಸ್ಯೆಯ ಕೊನೆಯವರೆಗೂ ಸಂಪೂರ್ಣ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದೆ. ಇಡೀ ಪ್ರಕರಣದಲ್ಲಿ ಎಲ್ಲೆಲ್ಲೂ ಕಂಡು ಬರುವುದು ನಗರಸಭೆಯ ನಿಷ್ಕಾಳಜಿ ಹಾಗೂ ಎಲ್ಲವನ್ನೂ ಲಘುವಾಗಿ ತೆಗೆದುಕೊಂಡು ಮರೆತುಬಿಡುವ ಒಂದಿಷ್ಟು ಜನಪ್ರತಿನಿಧಿಗಳ ಸ್ವಭಾವ. ಅದರೊಂದಿಗೆ ಒಟ್ಟು ಆಡಳಿತ ವ್ಯವಸ್ಥೆಯ ದಿವ್ಯಮೌನ. ಇವೆಲ್ಲದರ ಒಟ್ಟು ಪರಿಣಾಮವೆಂದರೆ ನಗರದ ಜಲಮೂಲಗಳು ಹಾಳಾಗಿವೆ, ಸಾವಿರಾರು ಕುಟುಂಬಗಳು ನರಳುತ್ತಿವೆ. ಕೋಟ್ಯಂತರ ರೂ.ಗಳ ಯೋಜನೆಗಳು ಬಂದರೂ ನಗರ ಸುಸ್ಥಿರಗೊಳ್ಳುತ್ತಿಲ್ಲ; ಈ ಕುಟುಂಬಗಳ ಬದುಕೂ ಕಳೆಗಟ್ಟು ತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳೋಣ, ಧ್ವನಿ ಎತ್ತೋಣ. ಆಡಳಿತ ವ್ಯವಸ್ಥೆಯ ದಿವ್ಯ ಮೌನವನ್ನು ಭೇದಿಸೋಣ. ಈ ಸರಣಿ ಇಂದಿನಿಂದ ಆರಂಭ.

ಮಾಹಿತಿ ನೀಡಿ
ಇಂದ್ರಾಣಿ ಹೊಳೆಗೆ ಬಿಡುವ ಕೊಳಚೆಯಿಂದ ಮತ್ತು ನಗರ ಸಭೆಯ ಒಳಚರಂಡಿ ಅವ್ಯವಸ್ಥೆಯಿಂದ ಬಾವಿಗಳು ಹಾಳಾಗಿದ್ದರೆ ಈ ವಾಟ್ಸಾಪ್‌ ನಂಬರ್‌ಗೆ ತಿಳಿಸಿ. ಹೆಸರು, ಪ್ರದೇಶ ಹಾಗೂ ಎಷ್ಟು ಸಮಯದಿಂದ ಹಾಳಾಗಿದೆ ಎಂಬುದನ್ನು ತಿಳಿಸಿ-7618774529

Advertisement

Udayavani is now on Telegram. Click here to join our channel and stay updated with the latest news.

Next