Advertisement

ಕುಡಿವ ನೀರು ಪ್ರಯೋಗಾಲಯ: ಟೆಂಡರ್‌ನಲ್ಲಿ ಅಕ್ರಮ

12:04 PM Jun 08, 2017 | Team Udayavani |

ಬೆಂಗಳೂರು: ರಾಜ್ಯದ 176 ತಾಲೂಕುಗಳ ಪೈಕಿ 76 ತಾಲೂಕಿನಲ್ಲಿ ನೀರು ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಿಲ್ಲ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಸೇರಿದಂತೆ ನಿಗದಿತ ಮಾನದಂಡದಲ್ಲಿ ಪರೀಕ್ಷೆ ನಡೆಸದೇ ಇರುವುದರಿಂದ ತಾಲೂಕು ಮತ್ತು ಜಿಲ್ಲಾ ಪ್ರಯೋಗಾಲಯದ ಕಾರ್ಯವೈಖರಿ ಕೊರತೆಯಿಂದ ಕೂಡಿದೆ ಎಂದು ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಯಿಂದ (ಸಿಎಜಿ)ಬಹಿರಂಗೊಂಡಿದೆ.

Advertisement

ನೀರಿನ ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಸಂಸ್ಥೆಗಳ ಆಯ್ಕೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಯಲ್ಲೂ ಸಹ ಅಕ್ರಮ ನಡೆದಿದೆ. ಇದಲ್ಲದೆ, ರಾಜ್ಯದಲ್ಲಿ ಮಂಜೂರಾದ 9,519 ಶುದ್ಧೀಕರಣ ಘಟಕಗಳಿಗೆ(2012 - 13ರಿಂದ 2015-16ರವರೆಗೆ) ಪ್ರತಿಯಾಗಿ ಕೇವಲ 5,941 (ಶೇ.62ರಷ್ಟು) ಘಟಕಗಳನ್ನು ಮಾತ್ರ ತೆರೆಯಲಾಗಿದೆ. 

ರಾಜ್ಯದ ವಾರ್ಷಿಕ ಕ್ರಿಯಾ ಯೋಜನೆಯನ್ನು ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯಕ್ಕೆ ಸಲ್ಲಿಸುವಲ್ಲಿ 6 ರಿಂದ 10 ತಿಂಗಳು ವಿಳಂಬವಾಗಿದೆ. ತಡೆಗೋಡೆ ಕಾರ್ಯ ಅಪೂರ್ಣ: ನೀರಿನ ಮೂಲದ ಸ್ಥಿರತೆ ಹಾಗೂ ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳದೇ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರಿಂದ ಏಳು ಯೋಜನೆಗಳು ಅಪೂರ್ಣವಾಗಿ ಉಳಿದಿದೆ. ಚರಂಡಿ ನೀರು, ಕೊಳಚೆ ನೀರು ಪ್ರಸ್ತಾವಿತ ಕೆರೆಗೆ ಹರಿಯುತ್ತಿರುವುದರಿಂದ ನೀರಾವರಿ ಹಾಗೂ ಕುಡಿಯುವ ನೀರು ಸರಬರಾಜಿಗೆ ನೀರನ್ನು ಪ್ರತ್ಯೇಕಿಸುವ ತಡೆಗೋಡೆ ರಚನೆ ಕಾರ್ಯಗತಗೊಂಡಿಲ್ಲ. ಇದರಿಂದ ಹಾವೇರಿ ಜಿಲ್ಲೆಯ ಕೂಡ್ಲಿ ಮತ್ತು ಇತರೆ ನಾಲ್ಕು ಗ್ರಾಮಗಳಿಗೆ ಬಹುಗ್ರಾಮ ನೀರು ಸರಬರಾಜಯ ಯೋಜನೆ ಕಾರ್ಯನಿರ್ವಹಿಸದೇ ಉಳಿದಿದೆ ಎಂಬುದನ್ನು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.

ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಅನಧಿಕೃತ ಖಾತೆ: ಪಂಚಾಯತ್‌ ರಾಜ್‌ ಇಲಾಖೆಯು ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡದೇ ಇರುವುದರಿಂದ 2012-13ರಿಂದ 2015- 16ರ ಅವಧಿಯಲ್ಲಿ ಗುರಿಯಾಗಿಸಿಕೊಂಡಿದ್ದ 99 ಮಳೆ ಕೊಯ್ಲು ಕಾಮಗಾರಿಗಳಲ್ಲಿ ಶೇ.10ರಷ್ಟು ಮಾತ್ರ ಕಾರ್ಯಗತ ಮಾಡಿದ್ದಾರೆ. ಕೇಂದ್ರ ಸರ್ಕಾರ ವಿಧಿಸಿರುವ ಷರತ್ತು ಪಾಲಿಸದೇ ಇರುವುದರಿಂದ 2012-13ರಿಂದ 2015-16ರ ಅವಧಿಯಲ್ಲಿ 65.68 ಕೋಟಿ ಕೇಂದ್ರ ಅನುದಾನ ಕಳೆದುಕೊಂಡಿದೆ. ಹಣಕಾಸು ನಿರ್ವಹಣೆಯೂ ದುರ್ಬಲ ವಾಗಿತ್ತು. ಎರಡು ಪ್ರಮುಖ ಖಾತೆ ಹೊರತಾಗಿ 106 ಅನಧಿಕೃತ ಖಾತೆಗಳನ್ನು ತೆರೆಯಲಾಗಿದೆ. ಹಣವನ್ನು ವಿವಿಧ ಬ್ಯಾಂಕ್‌ನಲ್ಲಿ ಇಟ್ಟು, ಅನುಮತಿ ಇಲ್ಲದೇ ವಹಿವಾಟು ಮಾಡಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯ ಸಂಸ್ಥೆಗಳಿಂದಾದ ನಷ್ಟ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 481 ಕೈಗಾರಿಕಾ ವಿಭಾಗಗಳಿಂದ 19.19 ಕೋಟಿ ಉಪಕರ ಸಂಗ್ರಹವಾಗಿಲ್ಲ. ಪರೀಕ್ಷಾ-ತನಿಖೆ ಮಾಡಲಾದ 14 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಚ್‌ 2016ರ ಅಂತ್ಯಕ್ಕೆ 63.10 ಕೋಟಿ ಮೊತ್ತವು 57,912 ತೆರಿಗೆ ಪಾವತಿ ಮಾಡದವರಿಂದ ಬಾಕಿ ಇದೆ. ಹಾಗೆಯೇ 14 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2.86 ಕೋಟಿ ಮೊತ್ತದಷ್ಟು ಆಸ್ತಿ ತೆರಿಗೆ ವಸೂಲಾತಿ ಬಾಕಿ ಇದೆ.

Advertisement

ಬಳ್ಳಾರಿ ಜಿಪಂ ಸಿಎಒ ಅವರು ಪುನರ್ವಸತಿಗೊಂಡ 16 ಗ್ರಾಮಗಳಿಗೆ ತುರ್ತು ಕಾಮಗಾರಿಗೆ ಉದ್ದೇಶಿಸಿದ್ದ 13.83 ಕೋಟಿ ಬಳಸಿಕೊಳ್ಳದೇ ಇರುವುದರಿಂದ ಈ ಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಚಾಮರಾಜನಗರ, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 8 ನೀರು ಸರಬರಾಜು ಯೋಜನೆಗಳಿಗೆ ಪೂರೈಕೆಯಾದ ಪೈಪುಗಳ ಮೇಲೆ ಲಭ್ಯವಿದ್ದ ಕೇಂದ್ರ ಅಬಕಾರಿ ಸುಂಕದ ವಿನಾಯತಿಯ ಲಾಭವನ್ನು ಬಳಸಿಕೊಳ್ಳದೇ ಇರುವುದರಿಂದ ಸರ್ಕಾರಕ್ಕೆ 8.91 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಒಡಂಬಡಿಕೆ ಅನುಪಾಲನೆಯಲ್ಲಿ ವಿಫ‌ಲ
ಸಿಂಡಿಕೇಟ್‌ ಬ್ಯಾಂಕ್‌ನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರದ ಅನುಪಾಲನೆಯನ್ನು ಮೇಲ್ವಿಚಾರಣೆ ಮಾಡುವಲ್ಲಿನ ಇಲಾಖೆಯ ವಿಫ‌ಲತೆಯು ಸುಮಾರು 237 ಕೋಟಿಗಳಷ್ಟು ಬಡ್ಡಿ ಹಣವನ್ನು ಕಡಿಮೆ ಜಮಾ ಮಾಡುವಲ್ಲಿ ಪರಿಣಮಿಸಿದೆ. ಬಳಕೆ ಮಾಡದಿರುವ ಹಣವನ್ನು ಜಿಪಂಗಳು ಸರ್ಕಾರಕ್ಕೆ ಮರು ವರ್ಗಾವಣೆ ಮಾಡುವುದನ್ನು ಇಲಾಖೆ ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಜಿಪಂಗಳು 41.63 ಕೋಟಿ ರೂ.ಗಳನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ರಾಜ್ಯಮಟ್ಟದ ಮೇಲ್ವಿಚಾರಣಾ ಕೋಶ ಮತ್ತು ತನಿಖಾ ಘಟಕಗಳನ್ನು ಸ್ಥಾಪಿಸದೇ ಇರುವುದರಿಂದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಾಕಷ್ಟು ಇರಲಿಲ್ಲ. 6 ತಿಂಗಳಿಗೊಮ್ಮೆ ನಡೆಯ ಬೇಕಿದ್ದ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸಿರಲಿಲ್ಲ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next