Advertisement

ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ

04:20 PM May 13, 2019 | Team Udayavani |

ಕುಣಿಗಲ್: ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಕುಣಿಗಲ್ ತಾಲೂಕಿನಲ್ಲಿ ಈವರೆಗೂ ಸಮರ್ಪಕವಾಗಿ ಮಳೆಯಾಗಿಲ್ಲ. ಅಲ್ಲದೇ, ಗಣಿಗಾರಿಕೆ ಹಾವಳಿಯಿಂದಾಗಿ ಕೆರೆ, ಕಟ್ಟೆಗಳು ಹಾಗೂ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಇಳಿಕೆಯಾಗಿ ಅಂತರ್ಜಲ ಮಟ್ಟ ಕುಸಿದು ಪಾತಾಳಕ್ಕೆ ಇಳಿದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಈ ನಿಟ್ಟಿನಲ್ಲಿ ನೀರಿನ ಪೂರೈಕೆಗೆ ತಾಲೂಕು ಆಡಳಿತ ಎಲ್ಲಾ ತರಹದ ಕ್ರಮ ಕೈಗೊಂಡಿದೆ.

Advertisement

ನೀರಿಗೆ ಹಾಹಾಕಾರ: ತಾಲೂಕಿನಲ್ಲಿ ಬಿಸಿಲಿನ ತಾಪಮಾನ 36 ಡಿಗ್ರಿಗೆ ಏರಿ ಜನರು ಜರ್ಜಿತ ಗೊಂಡಿ ದ್ದಾರೆ. ಮತ್ತೂಂದೆಡೆ ದಾಹ ವಿಪರೀತವಾಗಿ ಅತಿಯಾಗಿ ಕುಡಿಯುವ ನೀರಿಗೆ ಮೊರೆ ಹೋಗುತ್ತಿ ದ್ದಾರೆ. ಆದರೆ, ಸಮರ್ಪಕವಾಗಿ ನೀರು ಸರಬರಾಜು ಇಲ್ಲದ ಕಾರಣ ಜನರು ಆತಂಕದ ಸುಳಿಗೆ ಸಿಲುಕಿದ್ದಾರೆ. ಪುರುಷರು, ಸೈಕಲ್ ಹಾಗೂ ಬೈಕ್‌ಗೆ ಬಿಂದಿಗೆ ಕಟ್ಟಿ ಕೊಂಡು ನೀರಿ ಗಾಗಿ ಅಲೆಯುತ್ತಿದ್ದಾರೆ. ಮಹಿಳೆಯರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಕೊಡ ನೀರಿಗಾಗಿ ಒಂದು ಬೆಳಗ್ಗೆಯಿಂದಲೇ ಕೊಳಾಯಿ ಹತ್ತಿರ ಕಾಯುತ್ತಿರುವುದು ಗ್ರಾಮಗಳಲ್ಲಿ ಕಂಡು ಬಂದ ಪರಿಸ್ಥಿತಿ.

8 ಟ್ಯಾಂಕರ್‌ನಿಂದ ನೀರು ಪೂರೈಕೆ: ತಾಲೂಕಿನ 36 ಗ್ರಾಪಂ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 6ಗ್ರಾಪಂನ 19ಹಳ್ಳಿಗಳಲ್ಲಿ ನೀರಿಗೆ ಸಮಸ್ಯೆ ಉಂಟಾಗಿದೆ. ತಾಲೂಕಿನ ಅಮೃತೂರು ಗ್ರಾಮದಲ್ಲಿ ನೀರಿಗೆ ತೀರಾ ಸಮಸ್ಯೆಯಾಗಿದೆ. ಮಾರ್ಕೋನಹಳ್ಳಿ ಜಲಾಶಯದ ಸಮೀಪವೇ ಇದ್ದರೂ ಜಲಾಶಯದ ನೀರು ಈ ಗ್ರಾಮಕ್ಕೆ ಲಭ್ಯವಾಗುವುದೇ ಇಲ್ಲ. ಈ ಕಾರಣಕ್ಕಾಗಿ ಇಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಜನರು ಪ್ರತಿ ದಿನ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕು ಅಡಳಿತ ಸರಬರಾಜು ಮಾಡುವ ಟ್ಯಾಂಕರ್‌ ನೀರಿಗಾಗಿ ಚಾತಕ ಪಕ್ಷಿಯಂತೆ ಮಹಿಳೆಯರು ಕೊಡ ಹಿಡಿದುಕೊಂಡು ಕಾಯುವಂತಾಗಿದೆ. ಅಮೃತೂರು ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ತಾಲೂಕು ಅಡಳಿತದಿಂದ 4ಬೋರ್‌ವೆಲ್ ಕೊರಿಸಿದೆ. ಈ ಪೈಕಿ ಮೂರರಲ್ಲಿ ಮಾತ್ರ ನೀರು ಸಿಕ್ಕಿದೆ. ಎರಡು ಖಾಸಗಿ ಬೋರ್‌ವೆಲ್ನಿಂದಲೂ ಒಪ್ಪಂದ ಮಾಡಿಕೊಂಡು ಹಾಗೂ ದಿನಕ್ಕೆ 8 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದರೂ ನೀರಿನ ಹಾಹಾಕಾರ ಸುಧಾರಣೆಯಾಗಿಲ್ಲ.

ಮುನ್ನೆಚ್ಚರ ಅಗತ್ಯ: ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಅಂತರ್ಜಲ ಕುಸಿದು ಪಾತಾಳ ಕಂಡಿರುವ ಕಾರಣ 1,200ಅಡಿ ವರೆಗೂ ಬೋರ್‌ವೆಲ್ ಕೊರೆದರೂ ನೀರು ಸಿಗದಿರುವುದು ತಾಲೂಕಿನ ಜನತೆಯ ದುರಾದೃಷ್ಟವಾಗಿದೆ. ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಕಲ್ಲು ಗಣಿಕಾರಿಕೆಯಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಭಾರೀ ಸ್ಫೋಟಕ ಬಳಕೆಯಿಂದ ಭೂಮಿ ಸಡಿಲವಾಗುತ್ತಿದೆ. ಬೋರ್‌ವೆಲ್ಗಳಲ್ಲಿ ನೀರು ತಳ ಮುಟ್ಟಲು ಕಾರಣವಾಗಿದೆ. ಇದು ಹೀಗೆ ಮುಂದುವರೆದರೆ ತಾಲೂಕಿನಲ್ಲಿ ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಬಹಳ ದೂರ ಇಲ್ಲ. ಈ ಸಂಬಂಧ ತಾಲೂಕು ಆಡಳಿತ ಹಾಗೂ ತಾಲೂಕಿನ ಜನತೆ ಎಚ್ಚರ ವಹಿಸಬೇಕಾಗಿದೆ.

ನೀರಿದೆ, ನಿರ್ವಹಣೆ ಇಲ್ಲ: ಪಟ್ಟಣದ ವ್ಯಾಪ್ತಿಯಲ್ಲಿ ಜನತೆಗೆ ಬೇಕಾದ ನೀರಿನ ಲಭ್ಯತೆ ಇದೆ. ಆದರೆ, ಪುರಸಭೆ ಅಧಿಕಾರಿ ವರ್ಗದ ಅಸರ್ಮಪಕ ನಿರ್ವಹಣೆಯಿಂದ ನೀರಿನ ಸಮಸ್ಯೆ ತಲೆದೋರಿದೆ. ಕೆಲವು ವಾರ್ಡ್‌ಗಳಲ್ಲಿ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ದೊಡ್ಡಕೆರೆಯಲ್ಲಿ ಅರ್ಧ ಕೆರೆ ನೀರು ಇರುವುದರಿಂದ ಪಟ್ಟಣಕ್ಕೆ ಕೆರೆಯಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಕೆರೆಯಲ್ಲಿ ನೀರು ಇರುವ ಕಾರಣ ಪಟ್ಟಣದ ಬೋರ್‌ವೆಲ್ಗಳಲ್ಲಿ ನೀರು ಚೆನ್ನಾಗಿದೆ. ಆದರೆ, ಇಲ್ಲಿ ಪುರಸಭೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣ ನೀರು ಜನರಿಗೆ ಲಭ್ಯವಾಗುತ್ತಿಲ್ಲ. ಪುರಸಭೆ ಸದಸ್ಯರು ಮಾಜಿಗಳಾದರೂ ಇನ್ನೂ ತಮ್ಮ ವಾರ್ಡ್‌ಗಳಲ್ಲಿ ಹಿಡಿತ ಸಾಧಿಸಿಕೊಂಡು ನೀರು ಸರಬರಾಜಿನಲ್ಲಿ ಮೂಗು ತೂರಿಸುತ್ತಿದ್ದಾರೆ. ತಮಗೆ ಬೇಕಾದ ಮನೆಗಳಿಗೆ ಸರಿಯಾಗಿ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಮಾಜಿ ಸದಸ್ಯರ ವಿರುದ್ಧ ತಿರುಗಿಬಿದ್ದವರ ಮನೆಗೆ ನೀರು ಬಾರದಂತೆ ಕೈಚಳಕವನ್ನೂ ತೋರಿಸುತ್ತಿದ್ದಾರೆ. ಇದು ಗೊತ್ತಿದ್ದರೂ ಪುರಸಭೆ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಪುರಸಭೆ ಚುನಾವಣೆ ಇದೇ ಮೇ 29ರಂದು ಇರುವ ಕಾರಣ ಇಂತಹ ಮಾಜಿ ಸದಸ್ಯರಿಗೆ ತಕ್ಕ ಪಾಠ ಕಲಿಸುವ ನಿರ್ಧಾರ ಕೈಗೊಂಡಿದ್ದಾರೆ.

Advertisement

ತಾಲೂಕಿನಲ್ಲಿ 51 ಬೋರ್‌ವೆಲ್: ಬರ ನಿರ್ವಹಣೆ ಯೋಜನೆಯಡಿ 2018ರ ಡಿಸೆಂಬರ್‌ ತಿಂಗಳಿಂದ ಇಲ್ಲಿವರೆಗೆ ತಾಲೂಕಿನಲ್ಲಿ 51 ಬೋರ್‌ವೆಲ್ ಕೊರೆಸಲಾಗಿದೆ. ಈ ಪೈಕಿ 47 ಬೋರ್‌ವೆಲ್ಗಳಲ್ಲಿ ನೀರು ಸಿಕ್ಕಿದೆ. ಈ ಬೋರ್‌ವೆಲ್ಗಳಿಗೆ ಪಂಪ್‌ ಮೋಟಾರ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ, 25 ಲಕ್ಷ ರೂ. ವೆಚ್ಚದಲ್ಲಿ 21 ಪೈಪ್‌ಲೈನ್‌ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಎಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ?: ತಾಲೂಕಿನ ಎಡೆಯೂರು, ನಾಗಸಂದ್ರ, ಕೊಪ್ಪ, ಜಿನ್ನಾಗರ, ಅಮೃತೂರು, ಮಾರ್ಕೊನಹಳ್ಳಿ ಸೇರಿದಂತೆ 13 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ 45ಟ್ರಿಪ್‌ ನೀರು ಸರಬರಾಜು ಮಾಡಲಾಗುತ್ತಿದೆ. 6 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ಗಳಿಂದ ಒಪ್ಪಂದ ಮಾಡಿಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲ. ಇನ್ನೂ 25ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ.

ಖಡಕ್‌ ಸೂಚನೆ: ತಾಲೂಕಿನಲ್ಲಿ ಬರ ನಿರ್ವಹಣೆ ಹಾಗೂ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು ತಹಶೀಲ್ದಾರ್‌ ವಿಶ್ವನಾಥ್‌ ಪ್ರತಿ ವಾರ ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಸಿ, ಗ್ರಾಪಂ ಪಿಡಿಒಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ. ನೀರಿನ ಸಮಸ್ಯೆ ಕಂಡು ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿದು ಸಮಸ್ಯೆ ಬಗೆಹರಿಸಬೇಕೆಂದು ಸೂಚಿಸಿದ್ದಾರೆ.

● ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next