Advertisement
ಕಾಪು : ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಮೂಲ ಹೇರಳವಾಗಿದ್ದರೂ, ಸಮರ್ಪಕ ನಿರ್ವಹಣೆಯಿಲ್ಲದೇ ನಿಷ್ಪ್ರ ಯೋಜಕವಾಗಿದೆ. ಈ ಕಾರಣದಿಂದಾಗಿ ಇಲ್ಲಿನ ಭಾಸ್ಕರ ನಗರ ವಾರ್ಡ್‌ನ ಜನತೆ ನೀರಿಗಾಗಿ ಪರದಾಡುವಂತಾಗಿದೆ.
ಇಲ್ಲಿನ ಮಸೀದಿ ಬಳಿಯಿರುವ ಬಾವಿಯಲ್ಲಿ ನೀರು ಆಳಕ್ಕೆ ಹೋಗಿದೆ ವಾರ್ಡ್‌ನ ಹೆಚ್ಚಿನ ಜನರು ಈ ಬಾವಿಯನ್ನೇ ಅವಲಂಬಿಸಿದ್ದಾರೆ. ಬಾವಿಯ ಹೂಳೆತ್ತಿದರೆ ಧಾರಾಳ ನೀರು ಸಿಗುವ ಸಾಧ್ಯತೆಗಳಿವೆ.
Related Articles
ಪಂಚಾಯತ್ ಸದಸ್ಯರ ಮನೆಯ ಮುಂಭಾಗದಲ್ಲಿರುವ ಮತ್ತೂಂದು ಬಾವಿಯಲ್ಲಿ ಧಾರಾಳ ನೀರಿದೆ. ಆದರೆ ಇದಕ್ಕೆ ಸೂಕ್ತ ಕಟ್ಟೆ, ಮುಚ್ಚಿದ ವ್ಯವಸ್ಥೆ ಇಲ್ಲದೆ ನಾಯಿ, ಹೆಗ್ಗಣಗಳು ಬಾವಿಗೆ ಬಿದ್ದು ಸಾಯುತ್ತಿರುವುದರಿಂದ ನೀರು ಬಳಕೆ ಯಾಗುತ್ತಿಲ್ಲ. ಜೊತೆಗೆ ಬಾವಿಯ ಒಳಗಡೆ ದೊಡ್ಡ ದೊಡ್ಡ ಮರಗಳು, ಪೊದೆ – ಬಳ್ಳಿಗಳು ಬೆಳೆದುನಿಂತಿದೆ.
Advertisement
ಕೊಳವೆ ಬಾವಿಗಳ ಸಮಸ್ಯೆ ವಾರ್ಡ್‌ನಲ್ಲಿರುವ 4 ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿದರೆ ಭಾಸ್ಕರ ನಗರದ 200ಕ್ಕೂ ಅಧಿಕ ಮನೆಗಳಿಗೆ ದಿನನಿತ್ಯ ಬೇಕಾದಷ್ಟು ನೀರು ಪೂರೈಕೆ ಮಾಡಬಹುದಾಗಿದೆ. ಪಂಚಾಯತ್ ಕ್ಯಾರೇ ಅನ್ನುತ್ತಿಲ್ಲ
ಭಾಸ್ಕರ ನಗರ ವಾರ್ಡ್‌ನಲ್ಲಿ ಬೇಸಗೆ ಕಾಲ ಮಾತ್ರವಲ್ಲದೇ ವರ್ಷಪೂರ್ತಿ ಕೂಡಾ ಗ್ರಾಮ ಪಂಚಾಯತ್ ವತಿಯಿಂದ ಎರಡು ದಿನಕ್ಕೊಮ್ಮೆ ನಳ್ಳಿ ನೀರು ಪೂರೈಕೆಯಾಗುತ್ತಿದೆ. ಈ ಬೇಸಗೆ ಯಲ್ಲಂತೂ ವಿಪರೀತ ನೀರಿನ ಸಮಸ್ಯೆ ಎದುರಾಗಿದೆ. ಕೆಲವು ಕುಟುಂಬಗಳು ನೀರಿಗಾಗಿ ಪರದಾಡುತ್ತಿದ್ದು ಸಮಸ್ಯೆಗೆ ಪೂರಕವಾಗಿ ಸ್ಪಂದಿಸಬೇಕಿರುವ ಗ್ರಾಮ ಪಂಚಾಯತ್ ಮಾತ್ರಾ ಈ ಬಗ್ಗೆ ಒಂಚೂರೂ ತಲೆ ಕೆಡಿಸಿಕೊಂಡಿಲ್ಲ ಎನ್ನುವುದು ವಾರ್ಡ್ ನಿವಾಸಿಗಳ ಆರೋಪವಾಗಿದೆ. ದುರಸ್ತಿಗೆ ಅನುದಾನ ಸಿಗುತ್ತಿಲ್ಲ
ನಮ್ಮ ವಾರ್ಡ್‌ನಲ್ಲಿ ನೀರಿನ ಮೂಲ ಒಳ್ಳೆಯದಿದೆ. ಆದರೆ ಅದರ ಸದ್ಭಳಕೆಯಾಗುತ್ತಿಲ್ಲ. ವಾರ್ಡ್‌ನ ಜನತೆಯನ್ನು ಕಾಡುತ್ತಿರುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಪ್ರತೀ ಸಾಮಾನ್ಯ ಸಭೆಗಳಲ್ಲೂ ವಿಷಯ ಮಂಡಿಸುತ್ತೇನೆ. ಆದರೆ ಪಂಚಾಯತ್ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಎರಡು ಬಾವಿಯಿದ್ದರೂ ಅದರ ದುರಸ್ತಿಗೂ ಅನುದಾನ ಸಿಗುತ್ತಿಲ್ಲ. ಇಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದರೂ ಅವುಗಳು ನಿಷ್ಪ್ರಯೋಜಕವಾಗಿವೆ. ನೀರಿನ ಮೂಲಕ್ಕಾಗಿ ನನ್ನ ಮನೆಯ ಮುಂಭಾಗದಲ್ಲೇ ಕೊಳವೆ ಬಾವಿ ಕೊರೆಯುವಂತೆ ಮನವಿ ಮಾಡಿದ್ದೇನೆ. ಅದಕ್ಕೂ ಸ್ಪಂದಿಸಿಲ್ಲ.
-ಮಹಮ್ಮದ್ ರಫೀಕ್, ಬಡಾ ಗ್ರಾ.ಪಂ. ಸದಸ್ಯ ನೀರಿನ ಅಭಾವ ಹೆಚ್ಚಾಗಿದೆ
ನಮಗೆ ವರ್ಷಪೂರ್ತಿ ನೀರಿನ ಸಮಸ್ಯೆ ಇದೆ. ಎರಡು ದಿನಕ್ಕೊಮ್ಮೆ ಮಾತ್ರಾ ಪಂಚಾಯತ್ ನಳ್ಳಿ ನೀರನ್ನು ಪೂರೈಸುತ್ತಿದೆ. ಅದೂ ಕೂಡಾ ನೀರು ಬಿಟ್ಟ ಒಂದೂವರೆ ಗಂಟೆಯೊಳಗೆ ತುಂಬಿಸಿ ಬಿಡಬೇಕು. ಸರಕಾರಿ ಬಾವಿಯಲ್ಲಿ ನೀರಿದ್ದಾಗ ಹೆಚ್ಚಿನ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈಗ ಸರಕಾರಿ ಬಾವಿ ಬತ್ತಿ ಹೋಗಿರುವುದರಿಂದ ನೀರಿನ ಅಭಾವ ಹೆಚ್ಚಾಗಿದೆ. ನಾವು ಮನೆಯಲ್ಲಿ 12 ಮಂದಿ ಇದ್ದು, ನೀರಿನ ತೊಂದರೆ ಹೆಚ್ಚಾದಾಗ ಕೆಲವೊಮ್ಮೆ ಕಾಪುವಿನಲ್ಲಿರುವ ಮಗಳ ಮನೆಗೆ ಹೋಗಿ ಬಟ್ಟೆ ಒಗೆದು ತರುವುದು, ಸ್ನಾನ ಮಾಡಿ ಬರುತ್ತೇವೆ.
-ನೂರ್‌ಜಹಾನ್, ಭಾಸ್ಕರ ನಗರ ನಿವಾಸಿ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು
ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಿನ ಮೂಲ ಮತ್ತು ಪಂಪಿಂಗ್ ಕೆಪಾಸಿಟಿಯ ಆಧಾರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ನೀರಿನ ಸಮಸ್ಯೆ ಕಂಡು ಬಂದಿದೆ. ಹೆಚ್ಚಿನ ಸಮಸ್ಯೆ ಕಂಡು ಬಂದಿರುವ ಭಾಸ್ಕರ ನಗರ ಮತ್ತು ಮೂಡಬೆಟ್ಟುವಿನಲ್ಲಿ ಬೋರ್‌ವೆಲ್ ತೋಡಲು ಕ್ರಮ ತೆಗೆದುಕೊಂಡಿದ್ದೇವೆ. ಭಾಸ್ಕರ ನಗರದ ಒಂದು ಬಾವಿಯ ಹೂಳೆತ್ತಿದ್ದು, ಮತ್ತೂಂದು ಬಾವಿಯ ದುರಸ್ತಿಗೂ ಕ್ರಮ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಜನರಿಂದ ಬೇಡಿಕೆ ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಪ್ರಯತ್ನಿಸಲಾಗುವುದು.
-ಕುಶಾಲಿನಿ, ಪಿಡಿಒ, ಬಡಾ ಗ್ರಾ. ಪಂ. ವಾರ್ಡ್‌ನವರ ಬೇಡಿಕೆ
– ಬಾವಿಗಳನ್ನು ದುರಸ್ತಿಗೊಳಿಸಿ
– ಹೊಸ ಕೊಳವೆ ಬಾವಿಗಳನ್ನು ಕೊರೆಯಬೇಕು
– ವರ್ಷವಿಡೀ 2 ದಿನಕ್ಕೊಮ್ಮೆ ನೀರು ನೀಡುವ ಬದಲು ನಿತ್ಯ ಬಿಡಲಿ – ರಾಕೇಶ್ ಕುಂಜೂರು