Advertisement

ಗುಜ್ಜಾಡಿ ಗ್ರಾ.ಪಂ.ನ ಐದು ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ

11:55 PM May 05, 2019 | sudhir |

ಗಂಗೊಳ್ಳಿ: ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲ ಐದು ವಾರ್ಡ್‌ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಿದೆ. ಅದರಲ್ಲೂ ಜನತಾ ಕಾಲೋನಿ, ಕಳಿಹಿತ್ಲು, ಮಂಕಿ ವಾರ್ಡ್‌ ಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಲಕ್ಷಣ ಕಾಣಿಸಿಕೊಂಡಿದೆ. ಜನರಿಗೆ ನೀರು ಪೂರೈಕೆಗೆ ಪಂಚಾಯತ್‌ ಗರಿಷ್ಠ ಪ್ರಯತ್ನ ನಡೆಸುತ್ತಿದೆ.

Advertisement

ಇಲ್ಲಿ ಬಾವಿ ಇದೆ. ಆದರೆ ಉಪ್ಪು ನೀರಿನಿಂದಾಗಿ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಇನ್ನು ಕೆಲವರು ಈ ಬಾರಿ ಹೊಸದಾಗಿ ಸುಮಾರು 60 ಅಡಿ ಆಳದಷ್ಟು ತೋಡಿದರೂ, ಪ್ರಯೋಜನವಿಲ್ಲದಂತಾಗಿದೆ. ಕೆಲವು ಬಾವಿಗಳು ಈಗಾಗಲೇ ನೀರಿಲ್ಲದೆ ಬತ್ತಿ ಹೋಗಿವೆ. ಇನ್ನು ಬೋರ್‌ವೆಲ್‌ ಕೊರೆಸಿದರೆ ನೀರಿನ ಲಭ್ಯತೆ ಒಂದೇ ವರ್ಷ ಇರುತ್ತದೆ.

ಸಮಸ್ಯೆಯಿರುವ ಪ್ರದೇಶಗಳು
ಗುಜ್ಜಾಡಿ ಗ್ರಾಮದ ಜನತಾ ಕಾಲನಿ, ಮಂಕಿ, ಕಳಿಹಿತ್ಲು, ಹೆಬ್ಟಾರ್‌ಬೈಲು, ನಾಯಕವಾಡಿ, ಕೊಡಪಾಡಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲೆಲ್ಲ ಈಗಾಗಲೇ ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟು 6,042 ಜನಸಂಖ್ಯೆಯಿರುವ ಗುಜ್ಜಾಡಿಯಲ್ಲಿ ಪಂ. ವತಿಯಿಂದ 190 ಸಂಪರ್ಕ ಮಾತ್ರವಿದೆ. ಹೆಚ್ಚಿನ ಮನೆಗಳಲ್ಲಿ ಬಾವಿಯಿದ್ದರೂ, ಬೇಸಗೆಯಲ್ಲಿ ನೀರಿರುವುದಿಲ್ಲ.

ನಳ್ಳಿ ನೀರನ್ನು ಎರಡು ದಿನಕ್ಕೊಮೆ ಕೊಡುತ್ತಾರೆ. ಆದರೆ ಅದು ಸಾಕಾಗುವುದಿಲ್ಲ. ಅದು ಅಲ್ಲದೆ ನಳ್ಳಿಯಲ್ಲಿ ತುಂಬಾ ನಿಧಾನವಾಗಿ ಬರುತ್ತದೆ. ಇದು ಇರುವಂತಹ ಪಾತ್ರೆಗಳಿಗೆ ತುಂಬಿಸಿಟ್ಟರೂ ಒಂದು ದಿನಕ್ಕಷ್ಟೇ ಸಾಕಾಗುತ್ತದೆ ಎನ್ನುತ್ತಾರೆ ಕಳಿಹಿತ್ಲು ವಾರ್ಡಿನ ನಿವಾಸಿ ಸುಜಾತಾ ಪೂಜಾರಿ.

ಬಾವಿ ನೀರಿದ್ದರೂ ಪ್ರಯೋಜನವಿಲ್ಲ
ಇನ್ನು ಇದೇ ಕಳಿಹಿತ್ಲುವಿನ ರಾಘು ಪೂಜಾರಿ ಅವರು, ನಮ್ಮಲ್ಲಿ ಬಾವಿಯಿದೆ. ಆದರೆ ಅದರಲ್ಲಿ ಉತ್ತಮ ನೀರಿದ್ದರೂ, ಅದಕ್ಕೆ ಉಪ್ಪು ನೀರಿನ ಪ್ರಭಾವ ಇರುವುದರಿಂದ ಕನಿಷ್ಠ ಸ್ನಾನ ಹಾಗೂ ಇತರೆ ಕೆಲಸಕ್ಕೂ ಪ್ರಯೋಜನವಾಗುತ್ತಿಲ್ಲ. ನಾವು ಪಂಚಾಯತ್‌ನಿಂದ ಕೊಡುವ ನಳ್ಳಿ ನೀರು ಹಾಗೂ ಟ್ಯಾಂಕರ್‌ ನೀರನ್ನೇ ಆಶ್ರಯಿಸಿದ್ದೇವೆ ಎನ್ನುತ್ತಾರೆ.

Advertisement

ಇನ್ನು ಮಾವಿನಕಟ್ಟೆಯ ನಿವಾಸಿ ರತ್ನಾ ಮಂಜುನಾಥ ಅವರು, ನಮಗೆ ಸ್ವಂತ ಬಾವಿಯಿಲ್ಲ. ಪಂಚಾಯತ್‌ನಿಂದ 2 ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ 10 ಕೊಡಪಾನ ನೀರು ಕೊಡುತ್ತಾರೆ ಎನ್ನುವುದು ಅವರ ಮಾತು.

ದಿನಕ್ಕೆ 16 ಟ್ರಿಪ್‌
ನೀರು ಪೂರೈಕೆಗೆ ಪಂಚಾಯತ್‌ ಕೂಡ ಸರ್ವ ರೀತಿಯಿಂದಲೂ ಪ್ರಯತ್ನ ಮಾಡುತ್ತಿದ್ದು, ಟ್ಯಾಂಕರ್‌ ಮೂಲಕ ದಿನಕ್ಕೆ 16 ಟ್ರಿಪ್‌ ಮಾಡಲಾಗುತ್ತಿದೆ. ದಿನಕ್ಕೆ ಸುಮಾರು 150ರಿಂದ 160 ಮನೆಗಳಿಗೆ ಟ್ಯಾಂಕರ್‌ ನೀರು ಕೊಡಲಾಗುತ್ತಿದೆ. ನಾವು ಬೆಳಗ್ಗೆ 6.30ಯಿಂದ ಆರಂಭಿಸಿ ರಾತ್ರಿ 9 ಗಂಟೆಯವರೆಗೂ ಮನೆ- ಮನೆಗಳಿಗೆ ನೀರು ಕೊಡುತ್ತಿದ್ದೇವೆ ಎನ್ನುತ್ತಾರೆ ವಾಹನ ಚಾಲಕ ರಾಜು.

50 ಮನೆಗಳಿಗೆ ಸಮಸ್ಯೆ
ಇಲ್ಲಿರುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮನೆಗಳಿಗೆ ನೀರು ಪೂರೈಕೆಗೆ ಗ್ರಾಮ ಪಂಚಾಯತ್‌ ವತಿಯಿಂದ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಜನರ ನೀರಿಕ್ಷೆಯಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕಳಿಹಿತ್ಲುವಿನ ವಾರ್ಡಿನಲ್ಲೇ ಸುಮಾರು 40 – 50 ಮನೆಗಳಿಗೆ ನೀರಿನ ಸಮಸ್ಯೆಯಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ಸಿಕ್ಕರೆ ಪಂಚಾಯತ್‌ ಮಟ್ಟದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
– ಹರೀಶ್‌ ಮೇಸ್ತ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ

ಬೋರ್‌ವೆಲ್‌ಗೆ ಅನುದಾನ ನೀಡಲಿ
ಟ್ಯಾಂಕರ್‌ ಮೂಲಕ ದಿನಕ್ಕೆ 15 ಟ್ಯಾಂಕ್‌ನಷ್ಟು ನೀರು ಕೊಡುತ್ತಿದ್ದೇವೆ. ಪಂಚಾಯತ್‌ ವತಿಯಿಂದ ಗರಿಷ್ಠ ಪ್ರಯತ್ನ ಮಾಡುತ್ತಿದ್ದರೂ, ನಿರೀಕ್ಷೆಯಷ್ಟು ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಿ.ಪಂ. ಅನುದಾನದಡಿ ಒಂದು ಬಾವಿ ತೆಗೆಸಲಾಗುತ್ತಿದೆ. ಎಲ್ಲ 5 ವಾರ್ಡ್‌ಗಳಲ್ಲಿಯೂ ಸಮಸ್ಯೆ ಇರುವುದರಿಂದ ತಾಲೂಕು ಪಂಚಾಯತ್‌ ಅಥವಾ ಜಿ.ಪಂ.ನಿಂದ ವಾರ್ಡ್‌ಗೊಂದು ಬೋರ್‌ವೆಲ್‌ ಕೊರೆಯಿಸಲು ಅನುದಾನ ನೀಡಿದರೆ ಬಹಳಷ್ಟು ಪ್ರಯೋಜನವಾಗಲಿದೆ. ಈಗ ಇರುವಂತಹ ಬೋರ್‌ವೆಲ್‌ನಲ್ಲಿ ನೀರಿಲ್ಲ.
– ತಮ್ಮಯ್ಯ ದೇವಾಡಿಗ, ಗುಜ್ಜಾಡಿ ಗ್ರಾ.ಪಂ. ಅಧ್ಯಕ್ಷ

ಜನರ ಬೇಡಿಕೆಗಳು
– ನಳ್ಳಿ ನೀರಿನ ಪ್ರಮಾಣ ಹೆಚ್ಚಿಸಲಿ
– ಟ್ಯಾಂಕರ್‌ ನೀರು ಪೂರೈಕೆಯನ್ನು ಸಹ ಮತ್ತಷ್ಟು ಹೆಚ್ಚಿಸಲಿ
– ಟ್ಯಾಂಕರ್‌ ನೀರಿಗೆ ಸಮಯ ನಿಗದಿ
– ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next